×
Ad

ಫೆ.24- 25ಕ್ಕೆ ಜಿ-20 ಹಣಕಾಸು ಮಂತ್ರಿಗಳು, ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆ: ಅಜಯ್‍ಸೇಠ್

Update: 2023-02-21 22:23 IST

ಬೆಂಗಳೂರು, ಫೆ.21: ಭಾರತದ ಅಧ್ಯಕ್ಷತೆಯಲ್ಲಿ ಜಿ20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಮೊದಲ ಸಭೆಯನ್ನು ಫೆ.24 ಹಾಗೂ 25ರಂದು ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿದ್ದು, ಕೇಂದ್ರ ಹಣಕಾಸು ಸಚಿವರು ಹಾಗೂ ಆರ್‍ಬಿಐ ಗವರ್ನರ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಭೆಗೆ ಪೂರ್ವಭಾವಿಯಾಗಿ ಫೆ.22ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಪ್ರತಿನಿಧಿಗಳ ಮೊದಲ ಸಭೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಉದ್ಘಾಟಿಸಲಿದ್ದಾರೆ ಎಂದರು.

ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‍ಗಳ ಸಭೆಯಲ್ಲಿ ಒಟ್ಟು 72 ನಿಯೋಗಳು, 500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಾಗತಿಕ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಾಯೋಗಿಕ ಮತ್ತು ಅರ್ಥಪೂರ್ಣ ವಿಧಾನಗಳ ಕುರಿತು ಹಣಕಾಸು ಮಂತ್ರಿಗಳು ಮತ್ತು ಗವರ್ನರ್‍ಗಳ ನಡುವೆ ವಿಚಾರ ವಿನಿಮಯ ನಡೆಸಲು ಸಭೆಯ ಕಾರ್ಯಸೂಚಿಯನ್ನು ರಚಿಸಲಾಗಿದೆ ಎಂದು ಅಜಯ್ ಸೇಠ್ ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಮೂರು ಅಧಿವೇಶನಗಳು ನಡೆಯಲಿವೆ. 21ನೆ ಶತಮಾನದಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‍ಗಳನ್ನು ಬಲಪಡಿಸುವುದು, ಚೇತರಿಸಿಕೊಳ್ಳುವ ಅಂತರ್ಗತ ಮತ್ತು ಸುಸ್ಥಿರ ‘ನಾಳೆಯ ನಗರಗಳಿಗೆ’ ಹಣಕಾಸು ಒದಗಿಸುವುದು, ಆರ್ಥಿಕ ಒಳಗೂಡಿಸುವಿಕೆ ಮತ್ತು ಉತ್ಪಾದಕತೆಯ ಲಾಭಗಳನ್ನು ಹೆಚ್ಚಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಲಭ್ಯಗಳ ಮೇಲೆ ಪ್ರಭಾವ ಬೀರುವುದು ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಅಧಿವೇಶನಗಳು ಜಾಗತಿಕ ಆರ್ಥಿಕತೆ, ಜಾಗತಿಕ ಆರೋಗ್ಯ ಮತ್ತು ಅಂತರರಾಷ್ಟ್ರೀಯ ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕ್ರಿಪ್ಟೋ ಸ್ವತ್ತುಗಳು ಮತ್ತು ಗಡಿಯಾಚೆಯ ಪಾವತಿಗಳಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆಗಳ ಬಗ್ಗೆ ಕಾರ್ಯನೀತಿ ಹೇಗಿರಬೇಕು ಎಂಬುದರ ಕುರಿತು ತಜ್ಞರು, ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಅಜಯ್ ಸೇಠ್ ತಿಳಿಸಿದರು.

ಜಿ20 ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕಾರ್ಯಪಡೆಯ ಸಹ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಈ ಸಭೆಯಲ್ಲಿ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿ, ಮಾತನಾಡಲಿದ್ದಾರೆ. 50 ದೇಶಗಳಲ್ಲಿ ಯಾವ ರೀತಿಯ ಇ-ಪಾವತಿ ವ್ಯವಸ್ಥೆ ಎಂಬುದರ ಬಗ್ಗೆ ವಿಚಾರ ವಿನಿಮಯ ಆಗಲಿದೆ. ನಮ್ಮ ದೇಶದ ಯುಪಿಐ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ ಎಂದು ಅವರು ಹೇಳಿದರು.

ವಾಕ್ ದಿ ಟಾಕ್: ಪಾಲಿಸಿ ಇನ್ ಆ್ಯಕ್ಷನ್: ಹಣಕಾಸು ಮಂತ್ರಿಗಳು ಮತ್ತು ಗವರ್ನರ್‍ಗಳು ಫೆ.25ರಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಗೆ ಭೇಟಿ ನೀಡಲಿದ್ದು, ಜಿ20 ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಕೆಲವು ಸವಾಲುಗಳ ಬಗ್ಗೆ ಸಾಧ್ಯವಿರುವ ಮತ್ತು ಸಾಧಿಸಬಹುದಾದ ಪರಿಹಾರಗಳಲ್ಲಿ ಕೆಲಸ ಮಾಡುತ್ತಿರುವ ತಂತ್ರಜ್ಞರು ಮತ್ತು ಉದ್ಯಮಿಗಳೊಂದಿಗೆ ಚರ್ಚೆಗಳನ್ನು ನಡೆಸಲಿದ್ದಾರೆ ಎಂದು ಅಜಯ್ ಸೇಠ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ವಿ.ಎ.ನಾಗೇಶ್ವರ್, ಪಿಐಬಿ ಹೆಚ್ಚುವರಿ ಮಹಾ ನಿರ್ದೇಶಕರಾದ ಪ್ರಗ್ಯಾ ಜಿ ಗೌರ್, ಎಸ್.ಜಿ.ರವೀಂದ್ರ ಉಪಸ್ಥಿತರಿದ್ದರು.

Similar News