×
Ad

ರಸ್ತೆ ಕಾಮಗಾರಿ ಗುಣಮಟ್ಟ ನಿಯಂತ್ರಣ | ಅಧಿಕಾರಿಗಳನ್ನು ಹೊಣೆ ಮಾಡಲು ಆದೇಶ ಹೊರಡಿಸಿ: ಸಿಎಜಿ ಸಲಹೆ

Update: 2023-02-22 20:37 IST

ಬೆಂಗಳೂರು, ಫೆ. 22: ‘ರಸ್ತೆ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷಾ ವರದಿಗಳನ್ನು ಖಚಿತಪಡಿಸಿಕೊಳ್ಳದೆ ಗುತ್ತಿಗೆದಾರರಿಗೆ ಹಣ ಪಾವತಿಸುವ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸುವ ಸಂಬಂಧ ರಾಜ್ಯ ಸರಕಾರವು ಆದೇಶ ಹೊರಡಿಸಬೇಕು’ ಎಂದು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ಸಲಹೆ ನೀಡಿದೆ.

ಬುಧವಾರ ವಿಧಾನಸಭೆಯಲ್ಲಿ ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷಕ್ಕೆ ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆ ಮೇಲಿನ ಕಾರ್ಯನಿರ್ವಹಣಾ ಸಮೀಕ್ಷೆ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು.

ಕಾಮಗಾರಿ ಅನುಷ್ಠಾನದಲ್ಲಿ ಉಂಟಾದ ಅಡಚಣೆಯನ್ನು ಸ್ಪಷ್ಟವಾಗಿ ದಾಖಲಿಸುವ ಮತ್ತು ಒಪ್ಪಂದ ನಿಬಂಧನೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ‘ಅಡಚಣೆ ರಿಜಿಸ್ಟರ್’ ಅನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುವುದನ್ನು ಸರಕಾರ ಖಚಿತಪಡಿಸಿಕೊಳ್ಳಬೇಕು. ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆದ ನಂತರವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ರಸ್ತೆ ಅಭಿವೃದ್ಧಿಗೆ ಸಮಗ್ರ ವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ತಾಂತ್ರಿಕ ಮಂಜೂರಾತಿ ನೀಡುವ ಪ್ರಾಧಿಕಾರಿಗಳು ಅಂದಾಜುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ತಪ್ಪಾದ ಅಂದಾಜಿನಿಂದ ನಷ್ಟ, ಹಾನಿಗಳ ಹೊಣೆಗಾರಿಕೆಯನ್ನು ನಿಗದಿಗೊಳಿಸಬೇಕು.

ರಸ್ತೆ ಸುರಕ್ಷತಾ ಲೆಕ್ಕ ಪರಿಶೋಧನೆಗಳನ್ನು ಕಡ್ಡಾಯವಾಗಿ ನಡೆಸುವುದನ್ನು ಮತ್ತು ತಾಂತ್ರಿಕ ಮಂಜೂರಾತಿ ನೀಡುವ ಮೊದಲು ಅಂದಾಜುಗಳಲ್ಲಿ ಅಗತ್ಯವಿರುವ ರಸ್ತೆ ಸುರಕ್ಷತಾ ನಿಬಂಧನೆಗಳನ್ನು ಸೇರಿಸಲಾಗಿದೆ ಎಂಬುದರ ಕುರಿತು ಗಮನಿಸಬೇಕು. ರಸ್ತೆ ಸುಧಾರಣೆ ಆಥವಾ ಅಭಿವೃದ್ಧಿ ಕಾಮಗಾರಿಗಳ ಸ್ಥಳದಿಂದ ಉಪಯುಕ್ತತೆಗಳನ್ನು ವರ್ಗಾಯಿಸಲು ನೀತಿ ಅಥವಾ ಮಾರ್ಗಸೂಚಿ ರೂಪಿಸುವುದನ್ನು ಪರಿಗಣಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮಗಳಲ್ಲಿ ಭಾಗಿಯಾಗಿರುವ ಟೆಂಡರ್‍ದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಸರಕಾರದ ಸೂಚನೆಗಳನ್ನು ಉಲ್ಲಂಘಿಸಿ ಏಕೈಕ ಬಿಡ್ಡನ್ನು ಸ್ವೀಕರಿಸಿದ ಟೆಂಡರ್ ಅಂಗೀಕರಿಸುವ ಪ್ರಾಧಿಕಾರದ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲು ಅಗತ್ಯ ನಿಬಂಧನೆಗಳನ್ನು ಇಲಾಖೆಯ ಸಂಹಿತೆಯಲ್ಲಿ ಸೇರಿಸಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಸಲಹೆ ನೀಡಿದೆ.

Similar News