ಮಾಜಿ ಸೈನಿಕನಿಗೆ ವಂಚನೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಯು.ಟಿ.ಖಾದರ್ ಆಗ್ರಹ

Update: 2023-02-22 15:25 GMT

ಬೆಂಗಳೂರು, ಫೆ. 22: ‘ಮಾಜಿ ಸೈನಿಕ ವಿಕ್ರಂ ದತ್ತ ಎಂಬುವರಿಗೆ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಕೊಡಿಸುವ ನೆಪದಲ್ಲಿ 60ಲಕ್ಷ ರೂ.ಗಳಿಂದ 70ಲಕ್ಷ ರೂ.ಗಳಷ್ಟು ವಂಚನೆ ಮಾಡಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಅಬ್ದುಲ್ ರಝಾಕ್ ಎಂಬುವರು ನಕಲಿ ದಾಖಲೆ ಸೃಷ್ಟಿಸಿ, ಸರಕಾರಿ ಅಧಿಕಾರಿ ಸಹಿ ಇರುವ ದಾಖಲೆಗಳ ಆದೇಶ ಪತ್ರ ನೀಡಿದ್ದಾರೆ. ಆದರೆ, ದಾಖಲೆಯಲ್ಲಿರುವಂತೆ ಯಾವುದೇ ನಿವೇಶನ ಲಭ್ಯವಿಲ್ಲ. ವಂಚಿಸಿದ ವ್ಯಕ್ತಿ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಜತೆಗೆ ಹಲವು ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಉದಾಹರಣೆ ಆಗಿದೆ’ ಎಂದು ಗಮನ ಸೆಳೆದರು.

ಸರಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಯಾರು ಯಾರ ಜೊತೆ ಫೋಟೋ ತೆಗೆಸಿಕೊಂಡಿರುವುದಕ್ಕೂ ನಮಗೂ ಸಂಬಂಧವಿಲ್ಲ. ಆತ ವಂಚನೆ ಮಾಡಿರುವ ಆರೋಪ ಕುರಿತು ಕಂದಾಯ ಸಚಿವ ಆರ್.ಅಶೋಕ್ ಅವರ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು’ ಎಂದು ಹೇಳಿದರು.

Similar News