×
Ad

ಜಿ-20 ದೇಶಗಳ ನಡುವಿನ ಒಮ್ಮತ ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ: ಅನುರಾಗ್ ಸಿಂಗ್ ಠಾಕೂರ್

Update: 2023-02-22 21:30 IST

ಬೆಂಗಳೂರು, ಫೆ. 22: ಜಾಗತಿಕವಾದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅವುಗಳಿಗೆ ಪರಿಹಾರ, ಮಾರ್ಗೋಪಾಯ ಕಂಡುಕೊಳ್ಳಲು ಜಿ-20 ಸಮಾವೇಶ ಪ್ರಮುಖ ವೇದಿಕೆಯಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಬುಧವಾರ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಆಯೋಜಿಸಲಾಗಿದ್ದ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್‍ಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಭಾರತ ಹೊಂದಿರುವ ಪರಿಣತಿ ಪ್ರದರ್ಶಿಸಲು ಮತ್ತು ಸದಸ್ಯ ರಾಷ್ಟ್ರಗಳ ಸಂಕಷ್ಟ(ಸಮಸ್ಯೆ)ಗಳನ್ನು ಆಲಿಸಲು ಮತ್ತು ಜಾಗತಿಕ ಒಳಿತಿಗಾಗಿ ಸತ್ಕಾರ್ಯಗಳನ್ನು ಮುನ್ನಡೆಸಲು ಭಾರತಕ್ಕೆ ಸಿಕ್ಕಿರುವ ಜಿ-20 ಅಧ್ಯಕ್ಷೀಯ ಸ್ಥಾನವು ದೇಶಕ್ಕೆ ಲಭಿಸಿದ ಬಹುದೊಡ್ಡ ಗೌರವವಾಗಿದೆ ಎಂದು ಅಸಚಿವರು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಎದುರಾದ ಆರ್ಥಿಕ ಹಿಂಜರಿತವನ್ನು ಭಾರತ ಬಹುಯಶಸ್ವಿಯಾಗಿ ನಿಭಾಯಿಸಿದೆ. ‘ವಸುದೈವ ಕುಟುಂಬಕಂ' ಎಂಬ ಮನೋಭಾವ ಅಳವಡಿಸಿಕೊಂಡು ಭಾರತವು 101 ದೇಶಗಳಿಗೆ ಕೋವಿಡ್ ಲಸಿಕೆ ಸೇರಿದಂತೆ ಔಷಧ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಿದೆ ಎಂದು ಅವರು ಹೇಳಿದರು.

ಭಾರತವು ಅಭಿವೃದ್ಧಿಪಡಿಸಿದ ಕೋವಿನ್ ಮತ್ತು ಆರೋಗ್ಯ ಸೇತು ಅಪ್ಲಿಕೇಶನ್‍ಗಳು ಜಾಗತಿಕವಾಗಿ ವ್ಯಾಪಕ ಮೆಚ್ಚುಗೆ ಪಡೆದಿವೆ. ‘ಒಂದೇ ಭೂಮಿ, ಒಂದೇ ಕುಟುಂಬ, ಒಂದೇ ಭವಿಷ್ಯ’ ಎಂಬ ಜಿ-20 ಶೃಂಗಸಭೆಯ ಘೋಷವಾಕ್ಯವು ಸುಂದರ ಪೃಥ್ವಿಯ ಮೇಲಿರುವ ಮಾನವರು, ಪ್ರಾಣಿಗಳು, ಸಸ್ಯಗಳು ಮತ್ತು ಸೂಕ್ಷ್ಮ ಜೀವಿಗಳು ಮತ್ತು ಅವುಗಳ ಅವಿನಾಭಾವ ಸಂಬಂಧಗಳ ಜೀವನ ಮೌಲ್ಯವನ್ನು ಪುಷ್ಟೀಕರಿಸುತ್ತದೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದರು.

ಜಾಗತಿಕ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಮತ್ತು ಜಾಗತಿಕ ಕಳವಳದ ಅನೇಕ ವಿಷಯಗಳ ವಿರುದ್ಧ ಭಾರತವು ಸಹಭಾಗಿತ್ವದ ಪ್ರಯತ್ನಗಳಲ್ಲಿ ವಹಿಸುವ ಮಹತ್ವದ ಪಾತ್ರವನ್ನು ಇದು ಪ್ರತಿಬಿಂಬಿಸುತ್ತಿದೆ. ಯುಪಿಐ ಭೀಮ್ ಆಪ್(ಅಪ್ಲಿಕೇಷನ್) ಬಳಕೆಯಲ್ಲಿ ದೇಶವು ಗಮನಾರ್ಹ ಪ್ರಗತಿ ಸಾಧಿಸಿದ್ದು, ಕಳೆದ ಒಂದೇ ತಿಂಗಳಲ್ಲಿ 782 ಕೋಟಿ ರೂ.ಗಳ ವಹಿವಾಟುಗಳು ದಾಖಲಾಗಿವೆ ಎಂದು ಅವರು ಹೇಳಿದರು.

ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಯೋಜನೆಗೆ ಸಂಬಂಧಿಸಿದ  ಕಾರ್ಯವಿಧಾನವು ಪಾರದರ್ಶಕತೆ ತಂದಿದೆ. ಇದು ಕಟ್ಟ ಕಡೆಯ ವ್ಯಕ್ತಿಗೂ ವಿತರಣೆಯನ್ನು ಖಚಿತಪಡಿಸಿದ್ದು ಅತ್ಯಮೂಲ್ಯ ಸಮಯ ಉಳಿಸಿದೆ.  ಭಾರತವು ಜಾಗತಿಕ ಇಂಧನ ಪರಿವರ್ತನೆ ಸಾಧಿಸಿದೆ, ಮುಂದಿನ 3 ವರ್ಷಗಳಲ್ಲಿ 5 ದಶಲಕ್ಷ ಮೆಟ್ರಿಕ್ ಟನ್ ಹೈಡ್ರೋಜನ್ ಹಸಿರು ಇಂಧನ ಉತ್ಪಾದನಾ ಗುರಿ ಹೊಂದಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದರು.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‍ಗಳ ಶೃಂಗಸಭೆಗೆ ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳು, ಆಹ್ವಾನಿತ ಸದಸ್ಯರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.  ಒಟ್ಟು 72 ನಿಯೋಗಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕರಾದ ಪ್ರಗ್ಯಾ ಗೌರ್, ಎಸ್.ಜಿ. ರವೀಂದ್ರ ಉಪಸ್ಥಿತರಿದ್ದರು.

Similar News