1 ರೂ. ಚಿಲ್ಲರೆ ವಾಪಸ್ ಮಾಡದ ಹಿನ್ನೆಲೆ: 2,000 ರೂ.ಪರಿಹಾರ ಪಾವತಿಸಲು ಬಿಎಂಟಿಸಿಗೆ ಗ್ರಾಹಕರ ಆಯೋಗ ನಿರ್ದೇಶನ

Update: 2023-02-22 16:32 GMT

ಬೆಂಗಳೂರು, ಫೆ.22: ಪ್ರಯಾಣಿಕರೊಬ್ಬರಿಗೆ 1 ರೂ. ಚಿಲ್ಲರೆ ಪಾವತಿಸಲು ನಿರಾಕರಿಸಿದ ಹಿನ್ನೆಲೆ ಅವರಿಗೆ 2 ಸಾವಿರ ರೂ. ಪರಿಹಾರ ಪಾವತಿಸಲು ಬಿಎಂಟಿಸಿಗೆ (BMTC) ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ನಿರ್ದೇಶಿಸಿದೆ.

ರಮೇಶ್ ನಾಯಕ್ ಎನ್ನುವವರು ಐದು ವರ್ಷಗಳ ಹಿಂದೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದ ವೇಳೆ 29 ರೂ. ಟಿಕೆಟ್ ದರಕ್ಕೆ 30 ರೂ. ಪಾವತಿಸಿದ್ದರು. ಆದರೆ, ಬಸ್‌ನ ನಿರ್ವಾಹಕರು 1 ರೂ. ಚಿಲ್ಲರೆ ವಾಪಸ್ ಮಾಡಿರಲಿಲ್ಲ. ಇದಕ್ಕಾಗಿ ನಾಯಕ್ ಅವರು 15 ಸಾವಿರ ಪರಿಹಾರ ಕೋರಿ ಗ್ರಾಹಕರ ಕೋರ್ಟ್ನ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ಆಯೋಗವು ನಾಯಕ್ ಅವರಿಗೆ 2 ಸಾವಿರ ರೂ.ಪರಿಹಾರ ಪಾವತಿಸಲು ಆದೇಶಿಸಿದ್ದು, ಜೊತೆಗೆ 1 ಸಾವಿರ ರೂ. ನ್ಯಾಯಾಲಯದ ವೆಚ್ಚ ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಿದೆ. 

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಬಿಎಂಟಿಸಿಯು ಇದೊಂದು ಕ್ಷುಲ್ಲಕ ಕೇಸ್ ಎಂದು ಹೇಳಿತ್ತು. ಸೇವಾ ಕೊರತೆಯಾಗಿದೆ ಎಂಬುದನ್ನು ನಿರಾಕರಿಸಿದ್ದ ಸಾರಿಗೆ ಇಲಾಖೆಯು ದೂರನ್ನು ವಜಾ ಮಾಡುವಂತೆ ಕೋರಿತ್ತು.

ವ್ಯಾಜ್ಯವು ಕ್ಷುಲ್ಲಕ ಎಂದೆನಿಸಿದರೂ ದೂರುದಾರರು ವಿಚಾರವನ್ನು ಹಕ್ಕು ಎಂದು ಪರಿಗಣಿಸಿ, ಅದನ್ನು ಆಯೋಗದ ಮುಂದೆ ಇಟ್ಟಿದ್ದಾರೆ. ಇದನ್ನು ಗ್ರಾಹಕರ ಹಕ್ಕಿನ ವಿಚಾರವಾಗಿದ್ದು ಅದನ್ನು ಗುರುತಿಸಬೇಕಿದೆ ಮತ್ತು ಅರ್ಜಿದಾರರ ಪ್ರಯತ್ನವನ್ನು ಮೆಚ್ಚಬೇಕಿದೆ. ಹೀಗಾಗಿ, ದೂರುದಾರರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಆಯೋಗವು ತನ್ನ ಆದೇಶದಲ್ಲಿ ಹೇಳಿದೆ.

Similar News