150ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ: ನಳಿನ್ ಕುಮಾರ್ ಕಟೀಲ್

Update: 2023-02-22 16:50 GMT

ಬೆಂಗಳೂರು, ಫೆ. 22: ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಸರಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಬಿಜೆಪಿಗೆ ಬರ ಮಾಡಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಗಳಿಸಲು ಹೋರಾಡುವ ಪಕ್ಷ. ಬಿಜೆಪಿ ದೇಶವನ್ನು ಉಳಿಸಲು ಕಾರ್ಯ ಮಾಡುವ ಪಕ್ಷ ಎಂದರು.

ಬಿಜೆಪಿ ಕಾರ್ಯಕರ್ತರ ಆಧರಿತ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಿವಾಸಿಗರು ಮತ್ತು ವಲಸಿಗರು ಎಂಬ ಭಾವನೆ, ಕಿತ್ತಾಟ ಇದೆ. ವಲಸಿಗ ಮುಖ್ಯಮಂತ್ರಿ ಆಗಬೇಕೆ ಅಥವಾ ಮೂಲ ನಿವಾಸಿ ಸಿಎಂ ಆಗಬೇಕೆ ಎಂಬ ಚರ್ಚೆ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದೆ ಎಂದು ಅವರು ವ್ಯಂಗ್ಯ ವಾಡಿದರು.

5 ವರ್ಷ ಆಡಳಿತ ಮಾಡಿ 2018ರಲ್ಲಿ ಚುನಾವಣೆಗೆ ಹೋದಾಗ ಮುನಿರತ್ನ, ಸುಧಾಕರ್, ಎಂ.ಡಿ.ಲಕ್ಷ್ಮೀನಾರಾಯಣ ಅಲ್ಲಿದ್ದರು. ಆದರೂ ಪಡೆದದ್ದು ಕೇವಲ 80 ಸೀಟು. ಅವರೆಲ್ಲ ಈಗ ಬಿಜೆಪಿಯಲ್ಲಿದ್ದಾರೆ. ನಮ್ಮ ಸ್ಥಾನಗಳು ಮತ್ತಷ್ಟು ಹೆಚ್ಚಲಿದೆ ಎಂದು ನಳಿನ್ ಕುಮಾರ್  ಹೇಳಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಿಂದ ಅನೇಕ ಮುಖಂಡರು ಬಿಜೆಪಿ ಸೇರುತ್ತಿರುವುದು ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಿದರು.

ತೋಟಗಾರಿಕಾ ಸಚಿವ ಮುನಿರತ್ನ ಮಾತನಾಡಿ, ಕಾಂಗ್ರೆಸ್ ಮುಖಂಡರು ಗೆಲ್ಲುವ ಮಾತನಾಡುತ್ತಾರೆ. 5 ವರ್ಷ ಅಧಿಕಾರ ನಡೆಸಿದ್ದ ಸಿದ್ದರಾಮಯ್ಯ ಅಧಿಕಾರ ಪಡೆಯಲಾಗಲಿಲ್ಲ. ಸಮ್ಮಿಶ್ರ ಸರಕಾರ ರಚನೆಯ ಸ್ವಯಂಕೃತ ಅಪರಾಧ ಮಾಡಿದ್ದು, ಅದಕ್ಕೆ ಕ್ಷಮೆ ಇಲ್ಲ. ಕಾಂಗ್ರೆಸ್ ಮತ್ತೆ ಬಲಹೀನವಾಗಿದೆ. ಅದು ಸರಕಾರ ಮಾಡಲು ಅಸಾಧ್ಯ. 60ಕ್ಕಿಂತ ಹೆಚ್ಚು ಸ್ಥಾನಗಳನ್ನು  ಗೆಲ್ಲಲು ಸಾಧ್ಯವಿಲ್ಲ ಎಂದರು.

Similar News