ವಸತಿ ಯೋಜನೆ ಅಸಮರ್ಪಕ ನಿರ್ವಹಣೆ: ಸಿಎಜಿ ಆಕ್ಷೇಪ

Update: 2023-02-22 16:57 GMT

ಬೆಂಗಳೂರು, ಫೆ. 22: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಣಿಮಿಣಿಕೆಯಲ್ಲಿ ವಸತಿ ಯೋಜನೆಯನ್ನು ಅಸಮರ್ಪಕವಾಗಿ ಕಾರ್ಯಗತಗೊಳಿಸಿದ್ದು, 451 ಕೋಟಿ ರೂ.ಮೊತ್ತದಷ್ಟು ವರಮಾನವನ್ನು ಪಡೆದುಕೊಂಡಿಲ್ಲ. ಇದರ ಪರಿಣಾಮ 27.24 ಕೋಟಿ ರೂ.ಗಳನ್ನು ವ್ಯರ್ಥ ವೆಚ್ಚವಾಗಿದೆ ಎಂದು ಭಾರತ ಲೆಕ್ಕನಿಯಂತ್ರಣಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಉಲ್ಲೇಖಿಸಿದೆ.

ಬುಧವಾರ ವಿಧಾನಸಭೆಯಲ್ಲಿ ಮಾರ್ಚ್-2021ಕ್ಕೆ ಕೊನೆಗೊಂಡ ವರ್ಷಕ್ಕೆ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು. ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಜನರಿಗೆ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದ ಉದ್ದೇಶವೂ ಈಡೇರಿಲ್ಲ. ಬಿಡಿಎ ಅನ್ವಯವಾಗುವ ನಿಯಮಗಳನ್ನು ಉಲ್ಲಂಘಿಸಿ 1.52 ಕೋಟಿ ರೂ. ನಷ್ಟು ಪ್ರಾರಂಭಿಕ ಠೇವಣಿಯನ್ನು ನಿಯಮಬಾಹಿರವಾಗಿ ಮರುಪಾವತಿಸಲಾಗಿದೆ. ಇದು ಹರಾಜಿನಲ್ಲಿ ಭಾಗವಹಿಸಿದ್ದಂತಹ ಖರೀದಿದಾರರಿಗೆ ಲಾಭ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.

ಮೈಷುಗರ್ ಕಂಪೆನಿ ರೋಗಗ್ರಸ್ತ ಎಂಬುದಾಗಿ ಘೋಷಿಸಿದ ನಂತರವೂ ಸರಕಾರವು 526.51 ಕೋಟಿ ರೂ.ಮೊತ್ತವನ್ನು ಹೂಡಿಕೆ ಮಾಡಿದೆ. ಖಾಸಗಿಯವರಿಗೆ ಕಂಪೆನಿಯನ್ನು ನೀಡುವ ಕುರಿತು 2020ರ ನವೆಂಬರ್ ತಿಂಗಳಲ್ಲಿ ಮಾಡಿರುವ ತೀರ್ಮಾನ ಫಲಪ್ರದವಾಗಲಿಲ್ಲ. ಮಾರುಕಟ್ಟೆ ಸ್ಥಿತಿಗತಿ ಮತ್ತು ಮಾರಾಟಗಳ ಸಾಧ್ಯತೆಯನ್ನು ಅಧ್ಯಯನ ಮಾಡದೆಯೇ ಎಂಎಸ್‍ಐಎಲ್ ಮರಳನ್ನು ಆಮದು ಮಾಡಿಕೊಂಡಿದೆ. ಪರಿಣಾಮ 21.14ಕೋಟಿ ರೂ.ನಷ್ಟು ಮರಳಿನ ದಾಸ್ತಾನು 4 ವರ್ಷ ನಿರುಪಯುಕ್ತವಾಗಿತ್ತು ಎಂದು ತಿಳಿಸಿದೆ.

Similar News