ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಆರೋಪ: ಲಿಂಗತ್ವ ಅಲ್ಪಸಂಖ್ಯಾತೆಯ ವಿಚಾರಣೆ
ಮಂಗಳೂರು, ಫೆ. 22: ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆಂಬ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಮಾಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡವು ಬುಧವಾರ ಪೊಲೀಸ್ ಕಮಿಷನರ್ ಕಚೇರಿಗೆ ಆಕೆಯನ್ನು ಕರೆಸಿ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ, ಅರಿವು ಕಾರ್ಯಾಗಾರದಲ್ಲಿ ನ್ಯಾಯಾಧೀಶೆಯ ಸಮ್ಮುಖದಲ್ಲೇ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ‘ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ’ ಎಂದು ಆರೋಪಿಸಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಲಿಂಗತ್ವ ಅಲ್ಪಸಂಖ್ಯಾತೆ ಯನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
‘ಯಾವ ದಿನ, ಎಲ್ಲಿ, ಅಧಿಕಾರಿಯ ಹೆಸರೇನು ? ಇತ್ಯಾದಿಯ ಬಗ್ಗೆ ಮಾಹಿತಿ ಕೇಳಿದ್ದು, ಅದಕ್ಕೆ ಆರೋಪ ಮಾಡಿದ ಲಿಂಗತ್ವ ಅಲ್ಪಸಂಖ್ಯಾತೆಯು ಸ್ಪಂದಿಸಿ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.
ಈ ಸಂದರ್ಭ ನಗರ ಅಪರಾಧ ವಿಭಾಗದ ಎಸಿಪಿ ಪರಮೇಶ್ವರ್ ಹೆಗ್ಡೆ, ಉರ್ವ ಇನ್‌ಸ್ಪೆಕ್ಟರ್ ಭಾರತಿ ಮತ್ತಿತರರು ಉಪಸ್ಥಿತರಿದ್ದರು.