ಹಿಂದುಳಿದ ವರ್ಗದ ಪತ್ರಿಕೆಗಳಿಗೆ ಜಾಹೀರಾತು ನೀಡಲು ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ
ಅಲ್ಪಸಂಖ್ಯಾತ ಸಮುದಾಯದ ಪತ್ರಿಕೆಗಳಿಗೆ ''ಕಾರ್ಯಾಗಾರ''
ಬೆಂಗಳೂರು, ಫೆ.23: ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪತ್ರಿಕೆಗಳಿಗೆ 2 ಪುಟ ಜಾಹೀರಾತು ನೀಡಲು ಸರಕಾರ ಆದೇಶಿಸಿದ್ದು, ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು 5 ಅಥವಾ 10 ವರ್ಷಗಳಿಂದ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಹಿಂದುಳಿದ ಸಮುದಾಯಗಳು ನಡೆಸಿಕೊಂಡು ಬರುತ್ತಿರುವ ಪತ್ರಿಕೆಗಳಿಗೆ ಜಾಹೀರಾತು ನೀಡಲು ಸರಕಾರದಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳಿಂದ ರಾಜ್ಯ ಮಟ್ಟದ ಪತ್ರಿಕೆಗಳು ಸೇರಿದಂತೆ ಸ್ಥಳೀಯ ಪತ್ರಿಕೆಗಳಿಗೆ ಸರಕಾರದ ಜಾಹೀರಾತು ಏಜೆನ್ಸಿ ಮೂಲಕ ಹಾಗೂ ಎಂಪ್ಯಾನಲ್ ಆಗಿರುವ ಏಜೆನ್ಸಿಗಳ ಮೂಲಕ ಜಾಹೀರಾತು ಬಿಡುಗಡೆ ಮಾಡಲಾಗಿದೆ ಎಂದರು.
ಅಲ್ಪಸಂಖ್ಯಾತ ಸಮುದಾಯದ ಪತ್ರಿಕೆಗಳಿಗೆ ''ಕಾರ್ಯಾಗಾರ'':
ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಪತ್ರಿಕೆಗಳ ಮಾಹಿತಿಯನ್ನು ತರಿಸಿ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಪ್ರಚುರಪಡಿಸುವ ಕುರಿತು ಕಾರ್ಯಾಗಾರ ಏರ್ಪಡಿಸಿ ಜಾಗೃತಿ ಮೂಡಿಸಲಾಗುವುದು. ಜತೆಗೆ ಅವರಿಗೂ ಜಾಹೀರಾತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆ.ಅಬ್ದುಲ್ ಜಬ್ಬಾರ್ ಅವರು ಪ್ರಶ್ನೆಗೆ ಉತ್ತರಿಸಿ ಹೇಳಿದರು.