×
Ad

ಪತ್ರಕರ್ತ ಡಿ.ಉಮಾಪತಿಗೆ ‘ಡಾ.ಅಂಬೇಡ್ಕರ್ ದತ್ತಿ ಪ್ರಶಸ್ತಿ’

Update: 2023-02-23 21:20 IST

ಬೆಂಗಳೂರು, ಫೆ.23: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ 2022-23ನೆ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಡಿ.ಉಮಾಪತಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಗುರುವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಭಾರತದ ಪತ್ರಿಕೋದ್ಯಮಕ್ಕೆ ಮತ್ತು ಪತ್ರಕರ್ತನಿಗೆ ಮೌಲಿಕ ಮಾದರಿಯೊಂದನ್ನು ಕಟ್ಟಿಕೊಟ್ಟ ಶ್ರೇಷ್ಠ ಪತ್ರಕರ್ತ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ವರದಿ ಮತ್ತು ವಿಶ್ಲೇಷಣಾ ಬರಹಗಳೊಂದಿಗೆ ಪತ್ರಿಕೋದ್ಯಮದಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ ಪ್ರಶಸ್ತಿಯನ್ನು ಡಿ.ಉಮಾಪತಿಯವರಿಗೆ ನೀಡಿ ಸಂಘ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

2021-22ನೆ ಸಾಲಿನ ಮೊದಲ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರಿಗೆ ಪ್ರಧಾನ ಮಾಡುವ ಮೂಲಕ ಬಾಬಾಸಾಹೇಬ ಅಂಬೇಡ್ಕರ್ ದತ್ತಿ  ಪ್ರಶಸ್ತಿಗೆ ಸಾರ್ಥಕ ಮುನ್ನುಡಿಯನ್ನು ಬರೆಯಲಾಗಿತ್ತು. ಈಗ 2022-23ನೆ ಸಾಲಿನ ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಡಿ. ಉಮಾಪತಿ ಅವರನ್ನು ಆಯ್ಕೆ ಮಾಡುವ ಮೂಲಕ  ಪ್ರಶಸ್ತಿಯ ಆಶಯಕ್ಕೆ ಮೆರಗು ತಂದಂತಾಗಿದೆ. ಇನ್ನು ಈ ಪ್ರಶಸ್ತಿಯು 10 ಸಾವಿರ ರೂ.ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿದ್ದು, ಸದ್ಯದಲ್ಲೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳು ಅದೆಷ್ಟೇ ಕಲುಷಿತಗೊಂಡಿದ್ದರೂ ಅವುಗಳ ನಡುವೆಯೇ ಇದ್ದು ಅವುಗಳನ್ನು ಮಾನವೀಯಗೊಳಿಸುವ, ನ್ಯಾಯಬದ್ಧಗೊಳಿಸುವ ಹಾಗೂ ಆ ದಿಕ್ಕಿನಲ್ಲಿ ಜನಸಮುದಾಯಗಳನ್ನು ವೈಚಾರಿಕವಾಗಿ ಎಚ್ಚರಿಸಬೇಕಾಗುತ್ತದೆ. ಅದಕ್ಕಾಗಿ ಚಳವಳಿ ಮಾದರಿಯಲ್ಲಿ ಬರೆಯುವುದು, ಬದುಕುವುದು ನೈಜ ಪತ್ರಕರ್ತನ ಗುಣಲಕ್ಷಣಗಳಾಗುತ್ತವೆ ಎಂದು ಕೆಯುಡಬ್ಲೂಜೆ ತಿಳಿಸಿದೆ.

Similar News