ಪ್ರೀತಿ, ಮೋಹಗಳ ನಡುವೆ ‘ಅರಣ್ಯ ಕಾಂಡ’

ರಂಗ ಪ್ರಸಂಗ

Update: 2023-02-24 05:04 GMT

ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ಪ್ರೇಮಿಗಳಂತೆ ಕಳೆದರು. ಹಾಗಾಗಿ ಅರಣ್ಯಕಾಂಡವು ಒಂದು ಅಸಾಧಾರಣ ಪ್ರೇಮ ಕಥೆಯೂ ಹೌದು.ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ. ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ. ಸೀತೆ ಗೋಧಿ ಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿ ಬಣ್ಣದ ಸುಂದರಿ. ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯು ಕೊಡುವುದು ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ.ರಾಮ ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ. ಇವಳು ಅಸುರಳೆಂಬುದು ಇವಳ ಕೀಳರಿಮೆಯಲ್ಲ.

-ಪ್ರಸನ್ನ

ಅಧಿಕಾರ, ಅಹಂಕಾರ ಎನ್ನುವುದು ರಾಕ್ಷಸತನ. ನಗರಗಳೇ ದಂಡಕಾರಣ್ಯಗಳು. ನಾವು ಹಿಂಸ್ರಪಶುಗಳು... ಮನೆ ಬೇಕು, ಮಠ ಬೇಕು. ಯಂತ್ರ-ತಂತ್ರ, ಮಂತ್ರ ಎಲ್ಲಾ ಬೇಕು. ಬೇಕು ಬೇಕು ಬೇಕು. ಈ ಮಿತಿ ಮೀರಿದ ಬೇಕುಗಳೇ ರಾಕ್ಷಸತನ...

ಇದು ಕಳೆದ ವಾರ ಮೈಸೂರಿನಲ್ಲಿ ನವೋದಯ ತಂಡ ಪ್ರಸ್ತುತಪಡಿಸಿದ ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೆಯ ಭಾಗ ‘ಅರಣ್ಯ ಕಾಂಡ’ ನಾಟಕದಲ್ಲಿ ಕಾಡುವ ಮಾತುಗಳು. ಅನುಷ್ ಶೆಟ್ಟಿ ಅವರು ಸೂತ್ರಧಾರರಾಗಿ, ಕಂಪೆನಿ ಮಾಲಕರಾಗಿ ಆರಂಭಿಸುವ ಈ ನಾಟಕದ ಮಾತುಗಳು ಗಮನಾರ್ಹ. ನಾಟಕದ ನಾಂದಿ ಹಾಡು ಹಾಡುತ್ತಿರುವಾಗಲೇ ಶೂರ್ಪನಖಿ ಪಾತ್ರ ಒಲ್ಲೆ ಎಂದು ಬರುವ ಕಲಾವಿದೆ ಕುರಿತು ‘‘ಕಂಪನಿ ಉಳಿಯಲಿ ಅಂತ ಇಬ್ಬರನ್ನು ಕಟ್ಟಿಕೊಂಡೆ’’ ಎಂದು ತಮಾಷೆ ಮಾಡುತ್ತಾರೆ. ಈ ಮೂಲಕ ನಾಟಕ ಕಂಪೆನಿಗಳ ಮಾಲಕರ ಕಷ್ಟವನ್ನೂ ಹೇಳಿದಂತಾಗುತ್ತದೆ. ‘‘ಇವತ್ತೇ ನನ್ನ ಕೂದಲಿಗೆ ಸ್ಪಾಮಾಡಿಸಿರುವೆ. ಕೋರೆ ಹಲ್ಲಿನ ಶೂರ್ಪನಖಿ ಪಾತ್ರ ಹೇಗೆ ಮಾಡಲಿ? ಅದರಲ್ಲೂ ‘ಅತ್ತೆ ಅತ್ತತ್ತ, ಸೊಸೆ ಇತ್ತತ್ತ’ ಸೀರಿಯಲ್ ನಿರ್ಮಾಪಕರು ನಾಟಕ ನೋಡಲು ಬಂದಿದ್ದಾರೆ. ಪಾತ್ರ ಬದಲಾಯಿಸಿ’’ ಎಂದು ಗೋಗರೆದಾಗ ಸೂತ್ರಧಾರ ‘‘ಮನೆಮುರುಕ ಸೀರಿಯಲ್‌ಗಳು ಬಂದು ರಂಗಭೂಮಿ ಮುಳುಗಿಸಿದ್ವು’’ ಎಂದು ವ್ಯಥೆಪಡುತ್ತಾರೆ. ಆಮೇಲೆ ಶೂರ್ಪನಖಿ ಪಾತ್ರಧಾರಿಯನ್ನು ರಮಿಸಿ ಶೂರ್ಪನಖಿ ಪಾತ್ರ ಕೂಡಾ ಸುಂದರವಾಗಿರುತ್ತದೆ ಎಂದು ಹೇಳಿದ ಮೇಲೆ ಆಕೆಗೆ ಸಮಾಧಾನ. ಈ ಮೂಲಕ ಶೂರ್ಪನಖಿ ಸುಂದರಿಯಾಗಿರುತ್ತಾಳೆಂದು ತಿಳಿಸಲಾಯಿತು.

ಈ ನಾಟಕದ ಕಥೆ ಕೂಡಾ ನಿಮಗೆ ಗೊತ್ತಿರುವುದೇ. ವನವಾಸ ಅನುಭವಿಸುವ ಪ್ರಯುಕ್ತ ಅರಣ್ಯಕ್ಕೆ ತೆರಳುವ ರಾಮ, ಸೀತೆ, ಲಕ್ಷ್ಮಣ ಅವರನ್ನು ಕಾಣುವ ಶೂರ್ಪನಖಿ, ರಾಮನನ್ನು ಭೇಟಿಯಾಗಲು ತವಕಿಸುತ್ತಾಳೆ. ಇದಕ್ಕೂ ಮೊದಲು ಕಟ್ಟಿಗೆ ತರಲು ಹೋಗಿರುವ ಲಕ್ಷ್ಮಣ ಇಲ್ಲದಾಗ ಹಸಿಕಟ್ಟಿಗೆಯಿಂದ ಅಡುಗೆ ಆಗುತ್ತಿಲ್ಲವೆಂದು ಮುನಿಸಿಕೊಳ್ಳುವ ಸೀತೆಗೆ ‘ಬೆಚ್ಚಗಿನ ಬಿಸುಪೆ ನೀನು’ ಎಂದು ರಾಮ ಹೇಳುತ್ತ ರಮಿಸುತ್ತಾನೆ. ಈ ದೃಶ್ಯದ ಹಾಡು-ಸಂಭಾಷಣೆ ಚೆಂದ. ಆಮೇಲೆ ಲಕ್ಷ್ಮಣ ಬಂದು ಹಸಿವಾಗಿದೆಯೆನ್ನುವಲ್ಲಿಗೆ ಅಡುಗೆಯೂ ಮುಗಿದಿರುತ್ತದೆ.

ನಂತರ ರಾಮನನ್ನು ಭೇಟಿಯಾಗುವ ಶೂರ್ಪನಖಿ ‘‘ಎಂಥ ಗಂಡಸು ಇಂವ. ಮೋಹವಾಯಿತು ನನಗೆ ಈ ಮಾನವನ ಮೇಲೆ’’ ಎಂದು ಹಾಡುವ ಹಾಡು ಗುಂಗು ಹಿಡಿಸುತ್ತದೆ.

‘‘ಹೊಸ ನೆನಪು ಹುಟ್ಟಿದೆ, ಹಳೆ ನೆನಪು ಹಳಸಿದೆ. ಇವನಿಗೆ ಕೊಬ್ಬಿಲ್ಲ, ಕೊಂಕಿಲ್ಲ. ಕೆಟ್ಟ ನಟನಂತಿಲ್ಲ’’ ಎಂದು ಶೂರ್ಪನಖಿ ಮೆಚ್ಚುಗೆಯಾಡುತ್ತಾಳೆ. ಇದಕ್ಕೂ ಮೊದಲು ಪಾಪಾಸುರನಿಗೆ ಶೂರ್ಪನಖಿಯು ಕಾಡಿನಲ್ಲಿರುವವರ ಪರಿಚಯ ಕೇಳಿದಾಗ ‘‘ರಾಮ ಅಂತ. ಅವರ ಸಹವಾಸ ಮಾಡಿದರೆ ರಾಮ ರಾಮಾ. ಸೀತೆ ಶೀತೆ ಅಂದ್ರೆ ಚಂಡಿ. ಮೂರನೆಯವನು ಮುಳ್ಳುಬೇಲಿ ಲಕ್ಷ್ಮಣ’’ ಎಂದು ಪರಿಚಯಿಸುತ್ತಾನೆ. ಜೊತೆಗೆ ‘‘ಹೂಂ ಕಣಕ್ಕಾ’’ ಎಂದು ದೇಸಿ ಭಾಷೆ ಬಳಸುತ್ತಾನೆ. ‘‘ನನ್ನ ತಾಯಿ ತಾಟಕಿ ಅಡುಗೆ ಮಾಡಲು ಬರದೆ ಹಸಿಯಾದ ಮಾಂಸದ ಪೀಸುಗಳನ್ನು ಎಸೀತಿದ್ಲು’’ ಎಂದು ನಗಿಸುತ್ತಾನೆ.

ತಂಡ: ನವೋದಯ, ಮೈಸೂರು

ರಚನೆ: ಪ್ರಸನ್ನ, ಹೆಗ್ಗೋಡು

ವಿನ್ಯಾಸ, ನಿರ್ದೇಶನ: ಶ್ರೀಪಾದ ಭಟ್

ಸಂಗೀತ: ಅನುಷ್ ಶೆಟ್ಟಿ

ಸಂಗೀತ ಸಹಾಯ: ಮುನ್ನ

ವಸ್ತ್ರವಿನ್ಯಾಸ: ರಂಜನಾ ಕೇರ

ಬೆಳಕಿನ ವಿನ್ಯಾಸ: ಮಧುಸೂದನ್ ನೀನಾಸಂ

ಪಾತ್ರವರ್ಗ:

ಸುಪ್ರೀತ್ ಎಸ್.ಭಾರದ್ವಾಜ್

ಅಕ್ಷತಾ ಕುಮಟಾ, ಯದು ಶ್ರೇಷ್ಠ, ಅನುಷ್ ಶೆಟ್ಟಿ, ಮುನ್ನ,

ಶಾಲೋಮ್ ಸನ್ನುತ, ಭ್ರಮರ ಕೆ.ಉಡುಪ, ನೂರ್ ಅಹ್ಮದ್ ಶೇಕ್, ಹರಿ ಸಿಂಗ್

ನಾಟಕಗಳಲ್ಲಿ ಇಂಟರ್‌ವಲ್‌ಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಈ ನಾಟಕಕ್ಕೆ ಇಂಟರ್‌ವಲ್ ಕೊಟ್ಟಿದ್ದು ಹಾಸ್ಯಮಯವಾಗಿ - ‘‘ಕಾಪಿ/ಚಾ ಕುಡಕ್ಕೊಂಡು ಬನ್ನಿ, ಹಾಗೆ ಹೋಗಬೇಡಿ. ಮತ್ತೆ ಬನ್ನಿ’’ ಎಂದು ಪಾಪಾಸುರ ಹೇಳಿದಾಗ ಪ್ರೇಕ್ಷಕರ ಮುಖದಲ್ಲಿ ನಗು ಅರಳುತ್ತದೆ.

ಜಟಾಯುವಿಗೆ ನಮ್ಮ ಹುಡುಗಿಗೆ ಹುಡುಗನನ್ನು ನೋಡಿ ಎಂದ ಪಾಪಾಸುರನಿಗೆ ‘‘ಕ್ಯಾಸ್ಟು?’’ ಎಂದು ಜಟಾಯು ಕೇಳುತ್ತಾನೆ. ‘‘ಕ್ಯಾಸ್ಟು? ಅಸುರ ಕ್ಯಾಸ್ಟು. ಹೆಚ್ಚಿನ ಪ್ರೇಕ್ಷಕರೆಲ್ಲ ಅಸುರ ಕ್ಯಾಸ್ಟಿನವರು’’ ಎಂದು ಪಾಪಾಸುರ ನಗಿಸುತ್ತಾನೆ. ಬಳಿಕ ರಾಮ- ಶೂರ್ಪನಖಿಯ ಭೇಟಿಯ ವೇಳೆ ಮಾತು ಎಷ್ಟೊಂದು ಅರ್ಥಪೂರ್ಣ. ‘‘ಕೊಡುವುದು ಪ್ರೀತಿ, ಕೊಡದಿರುವುದು ಮೋಹ’’ ಎಂದ ರಾಮನಿಗೆ ‘‘ಸೀತೆ ಪೇಟೆಯವಳು. ಪೇಟೆಯಲ್ಲಿರಲಿ. ನಾನು ಕಾಡಿನವಳು. ಕಾಡಿನಲ್ಲಿರುವಷ್ಟು ದಿನ ನನ್ನೊಂದಿಗಿರಿ’’ ಎಂದು ಬೇಡಿಕೊಳ್ಳುತ್ತಾಳೆ. ಆದರೆ ರಾಮನು ನಯವಾಗಿ ನಿರಾಕರಿಸುತ್ತಾನೆ. ಆಗ ಸೀತೆ ಬಂದಾಗ ಶೂರ್ಪನಖಿಯನ್ನು ಪರಿಚಯಿಸಿ ಸವತಿಯಾಗಿ ಬರುತ್ತಾಳಂತೆ ಎಂದಾಗ ‘‘ಸಂತೋಷ’’ ಎಂದು ಸೀತೆ ಹೇಳಿ ‘‘ಮೋಹವಾಗಿದೆ ನಿನಗೆ ನಾಗರಿಕತೆ ಮೇಲೆ’’ ಎನ್ನುತ್ತಾಳೆ. ಆಗ ಶೂರ್ಪನಖಿ ‘‘ನಮ್ಮ ಕಾಡೊಳಗೆ ನುಗ್ಗಿ ಮನೆ ಕಟ್ಟಿಕೊಂಡು ರಾಜ್ಯ ವಿಸ್ತರಣೆ, ಧರ್ಮ ವಿಸ್ತರಣೆ ಮಾಡುವುದು ನಿಮ್ಮ ಸಂಚು. ನಾವು ಇಲ್ಲಿನ ಮೂಲನಿವಾಸಿಗಳು’’ ಎಂದು ಉತ್ತರಿಸುತ್ತಾಳೆ.

ಕೊನೆಗೆ ಲಕ್ಷ್ಮಣನ ಪ್ರವೇಶವಾಗಿ ಶೂರ್ಪನಖಿಯೊಂದಿಗೆ ಕಾದಾ ಟವಾಗುವಾಗ ರಾಮನೇ ನಿಲ್ಲಿಸುತ್ತಾನೆ. ಶೂರ್ಪನಖಿ ‘‘ನನ್ನ ಅಣ್ಣ ರಾವಣನ ಅಹಂಕಾರವನ್ನು ನಿಮ್ಮ ಅಹಂಕಾರದೊಂದಿಗೆ ಢಿಕ್ಕಿ ಹೊಡೆಸುವೆ. ಆಗ ಜ್ವಾಲಾಮುಖಿ ಏಳುತ್ತದೆ. ಆಗ ನೀವೆಲ್ಲ ಸುಟ್ಟು ಹೋಗುತ್ತೀರಿ’’ ಎಂದು ಹೊರಡುತ್ತಾಳೆ.  

ಹೀಗೆ ಮುಗಿಯುವ ನಾಟಕ ಕಾಡುತ್ತದೆ. ರಾಮಾಯಣವನ್ನು ಎಷ್ಟೊಂದು ಬಗೆಯಾಗಿ ನೋಡಬಹುದು ಎಂದು ಈ ನಾಟಕ ಅನಾವರಣಗೊಳಿಸುತ್ತದೆ.

ಹಾಡುತ್ತ, ಅಭಿನಯಿಸುತ್ತಿದ್ದ ಹಳೆಯ ಕಂಪೆನಿ ನಾಟಕಗಳಲ್ಲಿರುತ್ತಿದ್ದ ಗಾಯಕ ನಟ/ನಟಿಯರು ಇಲ್ಲಿಯ ಕಲಾವಿದರು. ಆ ಪರಂಪರೆಯನ್ನು ನೆನಪಿಸುವ ನಾಟಕವಿದು. ಗಿಟಾರ್/ಹಾರ್ಮೋನಿಯಂ ಮೂಲಕ ಗಮನ ಸೆಳೆವ ಮುನ್ನ, ಅಬ್ಬರವಿಲ್ಲದ ನಿಬ್ಬೆರಗಾಗಿಸುವ ಸಂಗೀತ ನೀಡುತ್ತ ಹಾಡುವ ಅನುಷ್ ಶೆಟ್ಟಿ, ಜಟಾಯು ಪಾತ್ರದಲ್ಲಿ ಮಿಂಚುವ ರಂಗಾಯಣ ಕಲಾವಿದರಾಗಿ ನಿವೃತ್ತರಾದ ನೂರ್ ಅಹ್ಮದ್ ಶೇಕ್, ಪಾಪಾಸುರ ಪಾತ್ರದಲ್ಲಿ ಪ್ರೇಕ್ಷಕರಿಂದ ಹೆಚ್ಚು ಚಪ್ಪಾಳೆ ಗಿಟ್ಟಿಸಿದ ಸುಪ್ರಿತ್ ಭಾರದ್ವಾಜ್, ಶೂರ್ಪನಖಿ ಪಾತ್ರದಲ್ಲಿ ಶಾಲೋಮ್ ಸನ್ನುತ ಹಾಗೂ ಭ್ರಮರ ಕೆ.ಉಡುಪ ಮಿಂಚುತ್ತಾರೆ. ಹೀಗೆ ಎಲ್ಲರೂ ಪಾತ್ರಗಳ ಔಚಿತ್ಯ ಅರಿತು ಅಭಿನಯಿಸಿದರು.

ಮುಖ್ಯವಾಗಿ ಎಲ್ಲ ಕಲಾವಿದರು ರಂಗದ ಎರಡೂ ಬದಿಗೆ ಕುಳಿತು ಹಾಡುತ್ತ, ಅಭಿನಯಿಸಿದರು. ಇದರಿಂದ ಪರಸ್ಪರರ ಅಭಿನಯ ನೋಡುತ್ತ ಇಡೀ ನಾಟಕದಲ್ಲಿ ತೊಡಗಿಕೊಂಡರು. ಎರಡು ಪರದೆಗಳನ್ನು ಹೊರತುಪಡಿಸಿದರೆ ಕನಿಷ್ಠ ಪರಿಕರಗಳನ್ನು ಬಳಸಲಾಗಿದ್ದು, ಕಲಾವಿದರ ಅಭಿನಯವೇ ನಾಟಕದ ಯಶಸ್ಸಿಗೆ ಕಾರಣ ಎಂಬುದನ್ನು ಈ ನಾಟಕ ಸಾಬೀತುಪಡಿಸಿತು ಮತ್ತು ಯಶಸ್ವಿಯೂ ಆಯಿತು. ಇದನ್ನು ಆಗು ಮಾಡಿಸಿದ ನಾಟಕ ನಿರ್ದೇಶಕ ಶ್ರೀಪಾದ ಭಟ್ ಅಭಿನಂದನಾರ್ಹರು.

Similar News