ಹೃದಯ, ಮನಸ್ಸು ಶ್ರೀಮಂತವಾದರೆ ಏನನ್ನೂ ಸಾಧಿಸಬಹುದು: ಖ್ಯಾತ ಅನಿವಾಸಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ

Update: 2023-02-24 13:27 GMT

ಮಂಗಳೂರು: ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಶ್ರೇಷ್ಠತಾ ಪ್ರಮಾಣ ಪತ್ರ ಪಡೆದ ಕೊಡುಗೈ ದಾನಿ, ಸಮಾಜ ಸೇವಾಸಕ್ತ ಡಾ. ರೊನಾಲ್ಡ್ ಕೊಲಾಸೊ ಹಾಗೂ ಅವರ ಪತ್ನಿ ಜೀನ್ ಕೊಲಾಸೊ ಅವರನ್ನು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರು ಕ್ರೈಸ್ತ ಧರ್ಮಪ್ರಾಂತದ ಆರ್ಚ್ ಬಿಷಪ್ ಅತಿ ವಂ.ಡಾ.ಪೀಟರ್ ಮಚಾದೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ರೊನಾಲ್ಡ್ ಕೊಲಾಸೊ, ಇಂದಿನ ಈ ಸಮಾರಂಭದಿಂದ ನನ್ನ ಕಣ್ತುಂಬಿವೆ. ಹೃದಯ ಹಿಗ್ಗಿವೆ. ಮಿಡಿತ ಹೆಚ್ಚಾಗಿವೆ. ನಾನು ಯಾವತ್ತೂ ಕೂಡ ಪ್ರಶಸ್ತಿ, ಸನ್ಮಾನದ ಹಿಂದೆ ಬಿದ್ದವನಲ್ಲ. ಹೆಸರಿಗಾಗಿ, ಪ್ರತಿಷ್ಠೆಗಾಗಿಯೂ ಮಾಡಿಲ್ಲ. ನಮ್ಮಲ್ಲಿ ಮದುವೆಯ ಸಂದರ್ಭ ದೇವರ ಮುಂದೆ ಹರಕೆ ಹೊರುವ ಕ್ರಮವಿದೆ. 1983ರಲ್ಲಿ ನಾನು ಜೀನ್ ಅವರನ್ನು ಮದುವೆಯಾದೆ. ನವದಂಪತಿಗಳಾದ ನಾವು ಆವಾಗ ಒಂದು ಹರಕೆ ಹೊತ್ತಿದ್ದೆವು. ಅಂದರೆ ನಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗಾಗಿ, ಅಗತ್ಯವುಳ್ಳರಿಗೆ ಮೀಸಲಿಡಬೇಕು ಎಂದು ಬಯಸಿದೆವು. ಆ ಬಳಿಕ ನಾವು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದೇವೆ. ಇದರಿಂದ ನಮ್ಮ ಸಂಪತ್ತು ಕೂಡಿಕೊಂಡಿದೆಯೇ ವಿನಃ ಕಳೆದುಕೊಳ್ಳುವ ಪ್ರಮೇಯವೇ ಬರಲಿಲ್ಲ. ನನ್ನೆಲ್ಲಾ ಸೇವೆಗೆ ಜೀನ್ ಅವರೇ ಪ್ರೇರಣೆ, ಸ್ಫೂರ್ತಿ ಎಂದು ಹೇಳಿದರು.

ನಾನು ಸನ್ಮಾನ ಕಾರ್ಯಕ್ರಮವನ್ನು ಎಂದೂ ಆಶಿಸಿದವನಲ್ಲ. ಆದರೆ ‘ಮಂಗಳೂರು ನಾಗರಿಕ ಸಮಿತಿ’ಯವರು ನನ್ನನ್ನು  ಇಂದು ಅದ್ದೂರಿಯಾಗಿ ಸನ್ಮಾನಿಸಿದ್ದಾರೆ. ಈ ಸನ್ಮಾನಕ್ಕೆ ವ್ಯಯಿಸುವ ವೆಚ್ಚವನ್ನು ಅರ್ಹರಿಗೆ ನೀಡಿದ್ದರೆ ನನಗೆ ನೀಡುವ ದೊಡ್ಡ ಗೌರವ ಆಗುತ್ತಿತ್ತು. ಆದಾಗ್ಯೂ ಜಾತಿ, ಧರ್ಮ, ಭಾಷೆಯ ಗಡಿಮೀರಿ ತಾವೆಲ್ಲಾ ನನ್ನನ್ನು ಸನ್ಮಾನಿಸಿ ಹರಸಿದ್ದೀರಿ. ನಿಮ್ಮ ಈ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದರು.

ಸಮಾಜ ಸೇವೆಯಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ನನಗೆ ಆದರ್ಶರು. ಪರಿಸರ ಸ್ವಚ್ಛದೊಂದಿಗೆ ಹೃದಯ ಸ್ವಚ್ಛ ಮಾಡುವ ರಾಮಕೃಷ್ಣ ಮಠದ ಸ್ವಾಮೀಜಿ ಕೂಡ ನನಗೆ ಮಾರ್ಗದರ್ಶಕರು. ಇಷ್ಟೆಲ್ಲಾ ಹಣವನ್ನು ವ್ಯಯಿಸಲು ನಿಮಗೆ ಹೇಗೆ ಮನಸ್ಸು ಬರುತ್ತದೆ ಎಂದು ಕೆಲವರು ನನ್ನಲ್ಲಿ ಕೇಳುವುದುಂಟು. ಕೆಲವು ಪತ್ರಕರ್ತ ಮಿತ್ರರು ನನ್ನ ಸೇವೆಯನ್ನು ಗುರುತಿಸಿ ಅವುಗಳನ್ನು ದಾಖಲೀಕರಣ ಮಾಡಿದ್ದರಿಂದ ನನಗೆ ಯುರೋಪಿಯನ್ ಇಂಟರ್‌ನ್ಯಾಷನಲ್ ವಿಶ್ವವಿದ್ಯಾನಿಲಯವು ವೃತ್ತಿಪರ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ. ಹೃದಯ ಮತ್ತು ಮನಸ್ಸು ಶ್ರೀಮಂತವಾದರೆ, ವಿಶಾಲವಾದರೆ ಏನನ್ನೂ ಸಾಧಿಸಬಹುದಾಗಿದೆ. ಹೃದಯಗಳನ್ನು ಬೆಸೆದರೆ ಮಾತ್ರ ನಮ್ಮ ಸಂಪತ್ತು ವೃದ್ಧಿಸಬಹುದು. ಬೆಸೆಯದಿದ್ದರೆ ಸಂಪತ್ತು ಕಡಿಮೆಯಾಗಬಹುದು. ಸೇವೆಯಿಂದ ಗಳಿಸಿದ ಪುಣ್ಯವು ಸದಾ ಕಾಲ ನಮ್ಮೊಂದಿಗೆ ಇರುತ್ತದೆ. ಅದರಿಂದ ನಮ್ಮ ಪ್ರೀತಿ-ಗೌರವ ಕೂಡ ಹೆಚ್ಚಾಗಲಿದೆ ಎಂದು ಅವರು ಡಾ. ರೊನಾಲ್ಡ್ ಕೊಲಾಸೊ ಹೇಳಿದ್ದಾರೆ.
 
ಚುನಾವಣೆ ಬಂದಾಗ ಜಾತಿ ಆಧಾರದ ಮೇಲೆ ಕೆಲವರು ಮತ ಯಾಚಿಸಲು ಬರುತ್ತಾರೆ. ಅಂತಹದಕ್ಕೆ ನಾವು ಪ್ರಾಮುಖ್ಯತೆ ಕೊಡಬಾರದು. ಯಾರು ನಿಜವಾದ ಜನಸೇವಕರಿದ್ದಾರೋ ಅಂತಹವರನ್ನು ಗುರುತಿಸಿ ಗೌರವಿಸಿರಿ. ಹೀಗೆಲ್ಲಾ ಹೇಳಲು ನನಗೆ ಯಾವ ಅಂಜಿಕೆಯೂ ಇಲ್ಲ. ಯಾಕೆಂದರೆ ನಾನು ನುಡಿದಂತೆ ನಡೆದಿದ್ದೇನೆ. ಕೆಲವು ಭಾಷಣಕಾರರು ವೇದಿಕೆಗಳಲ್ಲಿ ಮಾತನಾಡುವಾಗ ನೀವು ಗಾಂಧೀಜಿಯಂತಾಗಬೇಕು, ಬಾಲಗಂಗಾಧರ ತಿಲಕರಂತಾಗಬೇಕು, ಸುಭಾಷ್‌ಚಂದ್ರ ಬೋಸ್‌ರಂತಾಗಬೇಕು ಎನ್ನುತ್ತಾರೆ. ಆದರೆ ಆ ಭಾಷಣಕಾರರು ಯಾವತ್ತೂ ಕೂಡ ತನ್ನ ಹಾಗೆ ಆಗಬೇಕು ಎನ್ನುವುದಿಲ್ಲ. ಯಾಕೆ, ಹೀಗೆ?. ಈ ಪ್ರಶ್ನೆಯನ್ನು ಸದಾ ನಾವು ನಮ್ಮಲ್ಲಿ ಕೇಳಿಕೊಳ್ಳಬೇಕಾಗಿದೆ ಎಂದು ಹೇಳಿದರು.
 
ಡಾ.ರೊನಾಲ್ಡ್ ಕೊಲಾಸೊ ತುಳುವ, ಕನ್ನಡಿಗ, ಭಾರತೀಯ ಎನ್ನಲು ನಮಗೆ ತುಂಬಾ ಅಭಿಮಾನವಿದೆ, ಸಂತೋಷವಿದೆ. ದುಬೈಯನ್ನು ಕರ್ಮ ಕ್ಷೇತ್ರವನ್ನಾಗಿಸಿಕೊಂಡಿದ್ದರೂ ಕೂಡ ವಿಶ್ವದೆಲ್ಲೆಡೆ ತನ್ನ ಸೇವೆಯನ್ನು ಮುಂದುವರಿಸಿದರು. ಸಂಪತ್ತನ್ನು ಎಂದೂ ಕೂಡಿಡದೆ ಸಮಾಜದ ದುರ್ಬಲರ, ಆರ್ಥಿಕವಾಗಿ ಹಿಂದುಳಿದವರ ಸೇವೆಗೆ ತನ್ನ ಬದುಕನ್ನು ಮುಡಿಪಾಗಿಟ್ಟುಕೊಂಡರು. ನೂರಾರು ಪ್ರಶಸ್ತಿಯನ್ನು ಪಡೆದಿದ್ದರೂ ಕೂಡ ಅತ್ಯಂತ ಸರಳವಾಗಿ ಜೀವಿಸಿ ಎಲ್ಲರಿಗೂ ಮಾದರಿಯಾದರು. ಜನಸೇವೆಯ ಮೂಲಕ ದೇವರನ್ನು ತಲುಪುವ ಪ್ರಯತ್ನ ಮಾಡಿರುವ ಅವರು ಸರ್ವಧರ್ಮ ಪ್ರಿಯರು. ಮಂಗಳೂರಿನ ನಾಗರಿಕ ಸನ್ಮಾನಕ್ಕೆ ಅವರು ಅರ್ಹರಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ವೀಡಿಯೋ ಸಂದೇಶದಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಪ್ರಮುಖರು ದೇಶ -ವಿದೇಶಗಳಲ್ಲಿ ಹೆಸರುವಾಸಿಯಾದರೂ ಡಾ. ರೊನಾಲ್ಡ್ ಕೊಲಾಸೊ ಅವರ ಸಾಧನೆ ಅಮೋಘವಾಗಿದೆ. ಕೈಗಾರಿಕೋದ್ಯಮಿಯಾಗಿದ್ದರೂ ಕೂಡ ಅವರು ಮಾನವತವಾದಿಯಾಗಿದ್ದಾರೆ. ನಿರಂತರವಾಗಿ ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ವಧರ್ಮೀಯರನ್ನೂ ಕೂಡ ಅವರು ಸಮಾನವಾಗಿ ಕಂಡಿದ್ದಾರೆ. ಅವರ ಈ ಸೇವೆ ಸದಾ ಮುಂದುವರಿಯಲಿ. ಅವರನ್ನು ಸನ್ಮಾನಿಸುವ ಈ ಕಾರ್ಯಕ್ರಮವು ಕರಾವಳಿ ಕರ್ನಾಟಕದ ಪಾಲಿಗೆ ಐತಿಹಾಸಿಕ ಘಟನೆಯಾಗಿದೆ ಎಂದು  ಪತ್ರದ ಮೂಲಕ ಸಂದೇಶ ಮೂಲಕ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದರು.

ಡಾ. ರೊನಾಲ್ಡ್ ಕೊಲಾಸೊ ನಮಗೆ ರೋಲ್ ಮಾಡೆಲ್ ಆಗಿದ್ದಾರೆ. ಅವರು ಜಾತಿ, ಮತ, ಧರ್ಮ ಯಾವುದನ್ನು ನೋಡದೆ ಎಲ್ಲರನ್ನು ಸಮಾನ ರೀತಿಯಲ್ಲಿ ನೋಡುವ ಮತ್ತು ಎಲ್ಲರಿಗೂ ಸಹಾಯ ಮಾಡುವ ಧೀಮಂತ ವ್ಯಕ್ತಿ.
ಡಾ. ಯೆನೆಪೊಯ ಅಬ್ದುಲ್ಲ ಕುಂಞಿ - ಕುಲಾಧಿಪತಿ, ಯೆನೆಪೊಯ ವಿಶ್ವವಿದ್ಯಾನಿಲಯ, ಮಂಗಳೂರು

ಇದನ್ನೂ ಓದಿ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್‌ ಕೊಲಾಸೊರಿಗೆ ನಾಗರಿಕ ಸನ್ಮಾನ

Similar News