ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆದ್ದು ಮೋದಿ, ಅಮಿತ್ ಶಾಗೆ ಕೊಡುಗೆ: ಯಡಿಯೂರಪ್ಪ

Update: 2023-02-24 16:17 GMT

ಬೆಂಗಳೂರು, ಫೆ.24: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೊಡುಗೆ ನೀಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುತ್ಥಳಿಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ನಾಯಕತ್ವದಲ್ಲಿ ನಾವು 140 ಸ್ಥಾನಗಳನ್ನು ಗೆಲ್ಲುತ್ತೇವೆ. ವಿಧಾನ ಮಂಡಲದ ಅಧಿವೇಶನ ಇವತ್ತು ಮುಗಿದಿದೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯ ನಿವೃತ್ತಿ ಪಡೆಯುವುದಿಲ್ಲ. ಒಂದು ದಿನವೂ ಮನೆಯಲ್ಲಿ ಕೂರದೇ ಪಕ್ಷ ಸಂಘಟನೆಗಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಜನರ ಆಶೀರ್ವಾದದಿಂದ ಬಿಜೆಪಿಯನ್ನು ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಆಯ್ಕೆ ಮಾಡಿಸಿ, ವಿಧಾನಸೌಧದಲ್ಲಿ ಆಡಳಿತ ನಡೆಸುವಂತೆ ಮಾಡುವುದು ಅಷ್ಟೇ ಸತ್ಯ ಎಂದರು.

ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಪಕ್ಷ ಸೂಚಿಸಿದರೆ ತಾನು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾನೆ ಎಂದು ಯಡಿಯೂರಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಶಾಸಕ ಪಿ.ರಾಜೀವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News