ಜೆಡಿಎಸ್ MLC ಭೋಜೇಗೌಡರ ಕಾರ್ ನಂಬರ್ ಮತ್ತೊಂದು ಕಾರಿಗೆ ಹಾಕಿ ಮಾರಾಟಕ್ಕೆ ಯತ್ನ: ಆರೋಪಿ ವಶಕ್ಕೆ

ಪತ್ತೆ ಹಚ್ಚಿದ ಆಪ್ತ ಸಹಾಯಕ!

Update: 2023-02-25 14:48 GMT

ಬೆಂಗಳೂರು, ಫೆ.24: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಎಸ್.ಎಲ್ ಭೋಜೇಗೌಡ ಅವರ ಕಾರಿಗೆ ನಂಬರ್ ಪ್ಲೇಟ್ ಮಾದರಿಯಲ್ಲಿಯೇ ಮತ್ತೊಂದು ಕಾರಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐಕಾರ್ಸ್ ಸ್ಟುಡಿಯೋ ಮಾಲಕನನ್ನು ಇಲ್ಲಿ ಹೈಗ್ರೌಂಡ್ಸ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಭವನದ ಪಕ್ಕದಲ್ಲೇ ಇರುವ ಐಕಾರ್ಸ್ ಸ್ಟುಡಿಯೋದಲ್ಲಿ ಭೋಜೇಗೌಡ ಅವರ ಕಾರಿನ ನಂಬರ್ ಪ್ಲೇಟ್ ಮಾದರಿ ಅಳವಡಿಸಲಾಗಿದ್ದ ಕಾರು ನಿಂತಿರುವುದನ್ನು ಅವರ ಆಪ್ತ ಸಹಾಯಕ ಮಾದೇಶ್ ಗಮನಿಸಿದ್ದಾರೆ. ತಕ್ಷಣ ಮಳಿಗೆ ಒಳಗೆ ತೆರಳಿ ಕಾರಿನ ಬಗ್ಗೆ ವಿಚಾರಿಸಿದಾಗ, ಕಾರು ಮಾರಾಟಕ್ಕಿದೆ, ನೀವು ನೋಡುವಿರಾ ಎಂದು ಮಳಿಗೆ ಸಿಬ್ಬಂದಿ ಕೇಳಿದ್ದಾರೆ. ಮತ್ತಷ್ಟು ಅನುಮಾನಗೊಂಡು ಕಾರಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಚ್ಚರಿ ಎಂಬಂತೆ ಆರ್‍ಸಿ ಕೂಡ ಭೋಜೇಗೌಡ ಅವರ ಹೆಸರಿನಲ್ಲಿರುವುದು ಪತ್ತೆಯಾಗಿದೆ. 

ತಕ್ಷಣ ಭೋಜೇಗೌಡ ಅವರಿಗೆ ಕರೆ ಮಾಡಿದ್ದ ಅವರ ಆಪ್ತ ಸಹಾಯಕ, ಈ ಬಗ್ಗೆ ವಿಚಾರಣೆ ನಡೆಸಿದಾಗ ಒಂದೇ ಕಾರಿನ ಸಂಖ್ಯೆಯನ್ನು ಮತ್ತೊಂದು ಕಾರಿಗೆ ಅಳವಡಿಕೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿರುವುದು ಗೊತ್ತಾಗಿದೆ. ಆನಂತರ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನ ಅನ್ವಯ ಪ್ರಕರಣದಾಖಲಿಸಿಕೊಂಡ ಹೈಗ್ರೌಂಡ್ಸ್ ಪೊಲೀಸರು ಕಾರಿನ ಸಮೇತ ಐಕಾರ್ಸ್ ಸ್ಟುಡಿಯೊ ಮಾಲಕ ಇಮ್ರಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Similar News