×
Ad

ಮಂಗಳೂರು: ಮಾಸ್ಕೊ ಗ್ರ್ಯಾಂಡ್ಯೂರ್ ವಸತಿ ಸಮುಚ್ಚಯ ಉದ್ಘಾಟನೆ

Update: 2023-02-26 22:54 IST

ಮಂಗಳೂರು: ಎಂಎಎಸ್ ಸಮೂಹದ ಮಾಸ್ಕೊ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ವತಿಯಿಂದ ಪಾಂಡೇಶ್ವರದ ಸುಭಾಸ್ ನಗರದಲ್ಲಿ ನಿರ್ಮಾಣಗೊಂಡ ಮಾಸ್ಕೊ ಗ್ರ್ಯಾಂಡ್ಯೂರ್ ವಸತಿ ಸಮುಚ್ಚಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್  ರವಿವಾರ ನೆರವೇರಿಸಿದರು.

ಮಾಸ್ಕೊ ಗ್ರ್ಯಾಂಡ್ಯೂರ್ ವಸತಿ ಸಮುಚ್ಚಯವನ್ನು ವೇದವ್ಯಾಸ ಕಾಮತ್ ಉದ್ಘಾಟಿಸಿದರು. ವಾಣಿಜ್ಯ ವಿಭಾಗವನ್ನು ಬಿಎಂ ಫಾರೂಕ್ ಉದ್ಘಾಟಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಾ, ಮಂಗಳೂರು ವೇಗವಾಗಿ ಎತ್ತರಕ್ಕೆ ಬೆಳೆಯುತ್ತಿದೆ. ಅದಕ್ಕೆ ಪೂರಕವಾದ ಸೌಕರ್ಯಗಳನ್ನು ನಾಗರಿಕರಿಗೆ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ 400 ಕೋಟಿ ರೂ.ಗಳ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ ಸುಮಾರು 1,800 ಕೋಟಿ ರೂ. ಯೋಜನೆ ಅನುಷ್ಠಾನ ಗೊಂಡಿದೆ. 2025ರ ವೇಳೆಗೆ ಮಂಗಳೂರಿನ ಚಿತ್ರಣ ಬದಲಾಗಲಿದೆ. ಹಲವು ದಾಖಲೆಗಳಿಗೆ ಕಂಪ್ಯೂಟರೀಕರಣದ ಮೂಲಕ ನಿರ್ಮಾಣ ಕ್ಷೇತ್ರದ ಸಮಸ್ಯೆ ಸರಳಗೊಳಿಸಲಾಗಿದೆ. ಅದನ್ನು ಇನ್ನಷ್ಟು ಸರಳಗೊಳಿಸಲಾಗುವುದು ಎಂದು ಹೇಳಿದರು. ಸ್ವಂತ ಮನೆ ಎಲ್ಲರ ಕನಸು. ಈ ಕನಸನ್ನು ನನಸು ಮಾಡಲು ಈ ರೀತಿಯ ಇನ್ನಷ್ಟು ವಸತಿ ಸಮುಚ್ಚಯ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡುತ್ತಾ, ಮಂಗಳೂರು ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಒಳಚರಂಡಿ, ಅತ್ಯುತ್ತಮ ಅಗ್ನಿಶಾಮಕ ವ್ಯವಸ್ಥೆಗಳು ಬೇಕಾಗಿದೆ. ವಸತಿ ಸಮುಚ್ಚಯದಲ್ಲಿ ಉತ್ತಮ ಮನೆಯ ವಾತಾವರಣ ಇರುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದರು.

ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಕತರ್ ನ ಯುರೋ ಕಂಪೆನಿ ಸಮೂಹ ಸಂಸ್ಥೆಯ ಮುಖ್ಯಸ್ಥ ಹಾಗೂ ಎಂಎಎಸ್ ಬಿಲ್ಡರ್ಸ್ ನ ಪಾಲುದಾರ ಅಬ್ದುಲ್ಲಾ ಮೋನು ಮೊಯ್ದಿನ್ ಮಾತನಾಡಿ, ಇದು ಈವರೆಗಿನ ಎಲ್ಲ ಯೋಜನೆಗಳ ಪೈಕಿ ನಮ್ಮ ಕನಸಿನ ಯೋಜನೆಯಾಗಿತ್ತು ಎಂದರು.

ಸಮಾರಂಭದಲ್ಲಿ ಮನಪಾ ಸದಸ್ಯ ಅಬ್ದುಲ್ ಲತೀಫ್  ಶುಭ ಹಾರೈಸಿದರು.

ಬ್ಯಾರೀಸ್ ಗ್ರೂಪ್ ನ ನಿರ್ದೇಶಕ ಎ. ಸಿದ್ದೀಕ್ ಬ್ಯಾರಿ ಸ್ವಾಗತಿಸಿ, ಮಾಸ್ಕೊ‌ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ 15ನೆ ನಿರ್ಮಾಣ ಯೋಜನೆ ಮಾಸ್ಕೊ ಗ್ರೂಪ್ ಈವರೆಗೆ ಅತ್ಯುತ್ತಮ ಯೋಜನೆಗಳನ್ನು ಗ್ರಾಹಕರಿಗೆ ನೀಡಿ, ವಿಶ್ವಾಸಾರ್ಹತೆಯನ್ನುಗಳಿಸಿಕೊಂಡಿದೆ ಎಂದು ಹೇಳಿದರು.

ಈ ಸಮುಚ್ಚಯ ತಳ ಅಂತಸ್ತು ಸೇರಿದಂತೆ 5+1 ಅಂತಸ್ತುಗಳನ್ನು, 25 ವಸತಿ ಸಮುಚ್ಚಯಗಳನ್ನು, ಒಂದು ಸೂಪರ್ ಮಾರ್ಕೆಟನ್ನು ಒಳಗೊಂಡಿದೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.

ಸಂಸ್ಥೆಯ ಪಾಲುದಾರ ಸಹೋದರರಾದ ಮೊಹಮ್ಮದ್ ಇಕ್ಬಾಲ್, ಅಬ್ದುಲ್ ರಶೀದ್, ಅಬ್ದುಲ್ ರಹೀಮ್  ಅತಿಥಿಗಳನ್ನು ಸ್ವಾಗತಿಸಿದರು.

ಸಮಾರಂಭದಲ್ಲಿ ಮಾಸ್ಕೊ ಗ್ರ್ಯಾಂಡ್ಯೂರ್ ಸಮುಚ್ಚಯದ ಆರ್ಕಿಟೆಕ್ಟ್ ವೆಂಕಟೇಶ್ ಪೈ, ಸ್ಟ್ರಕ್ಚರಲ್ ಇಂಜಿನಿಯರ್ ದೇವದಾಸ್ ಕಾಮತ್ ಹಾಗೂ ವಿವಿಧ ಗುತ್ತಿಗೆದಾರರು ಹಾಗೂ ಸೇವ್ ಪೂರೈಕೆದಾರರಾದ ಎನ್.ಎಂ.ಶರೀಫ್, ಮುರುಗೇಶ್, ಸಂಶುದ್ದೀನ್, ಕಾರ್ತಿಕ್, ವಿಜಯ್, ಮುಹಮ್ಮದ್ ಶಾಫಿ, ಬಾವಾಕಾ, ಅಲ್ತಾಫ್ ಮೊದಲಾದವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು. ರಿದ್ವಾನ್ ವಂದಿಸಿದರು.

Similar News