ಬೆಂಗಳೂರು: ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ
Update: 2023-02-27 12:37 IST
ಬೆಂಗಳೂರು, ಫೆ.27: ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಪೌರ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸಿದರು.
2022ರಲ್ಲಿ 4 ದಿನಗಳ ಮುಷ್ಕರದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೌರಕಾರ್ಮಿಕರ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡು ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದರು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕೇವಲ 3,673 ಪೌರಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಲು ಬಿಬಿಎಂಪಿ ಅಧಿಸೂಚನೆ ಪ್ರಕಟಿಸಿದೆ. ಆದ್ದರಿಂದ ಬೆಂಗಳೂರು ನಗರದ ಪೌರ ಕಾರ್ಮಿಕರು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತಮ್ಮ ಆಕ್ಷೇಪ ಪತ್ರವನ್ನು ಸಲ್ಲಿಸಲು ಮತ್ತು ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿ ಆಕ್ರೋಶ ಹೊರಹಾಕಿದರು.