ತಮಿಳುನಾಡಿನ ಹೊಸೂರುವರೆಗೆ 'ನಮ್ಮ ಮೆಟ್ರೋ' ವಿಸ್ತರಣೆ: ಕನ್ನಡಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ

Update: 2023-02-28 13:38 GMT

ಬೆಂಗಳೂರು, ಫೆ.28: ಕನ್ನಡಿಗರ ವಿರೋಧದ ನಡುವೆಯೂ ತಮಿಳುನಾಡಿನ ಹೊಸೂರಿನವರೆಗೆ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಿಸುವ ‘ಕಾರ್ಯಸಾಧ್ಯತಾ ವರದಿ’ ಅಧ್ಯಯನಕ್ಕೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಕನ್ನಡಿಗರ ಆಕ್ರೋಶವನ್ನು ಹೆಚ್ಚಿಸಿದೆ. ಕೇಂದ್ರದ ಈ ನಿಲುವು ಖಂಡಿಸಿ ಕನ್ನಡಪರ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.

ಬೆಂಗಳೂರು, ಸುತ್ತಮುತ್ತಲ ಜಿಲ್ಲೆಗಳ ಅಭಿವೃದ್ಧಿ, ಮೆಟ್ರೋ ಮಾರ್ಗ ಸಂಪರ್ಕ ಕಲ್ಪಿಸುವುದನ್ನು ಕಡೆಗಣಿಸಿ ತಮಿಳುನಾಡಿನ ಹೊಸೂರುವರೆಗೆ ಮೆಟ್ರೋ ವಿಸ್ತರಿಸಿದ್ದಲ್ಲಿ ಸರಕಾರದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು. ಕೇಂದ್ರದ ಮೆಟ್ರೋ ವಿಸ್ತರಣೆಯ ಅಧ್ಯಯನಕ್ಕೆ ನೀಡಿರುವ ಅನುಮತಿ ವಾಪಸ್ಸು ಪಡೆಯಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಆಗ್ರಹಿಸಿದೆ. 

ಈ ಕುರಿತು ಮಾತನಾಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಆರಂಭದಿಂದಲೂ ಈ ಯೋಜನೆಗಿದ್ದ ಕನ್ನಡಿಗರ ವಿರೋಧ ನಿರ್ಲಕ್ಷಿಸಿ ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ ಒಪ್ಪಿಗೆ ನೀಡಿರುವುದು ಸರಿಯಲ್ಲ. ಹಿಂದೆಯೇ ನಾವೆಲ್ಲರೂ ಇದನ್ನು ಖಂಡಿಸಿದ್ದೇವೆ. ಬೆಂಗಳೂರಿನಿಂದ ಹೊಸೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಿದರೆ ಕನ್ನಡಿಗರಿಗೆ ತೊಂದರೆಯಾಗಲಿದೆ. ಇದರಿಂದ ರಾಜ್ಯದ ಗಡಿಯಲ್ಲಿ ತಮಿಳರ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎಂದರು.

ಮೆಟ್ರೋ ಸಂಪರ್ಕ ಕಲ್ಪಿಸಿದರೆ ಇನ್ನೂ ಸುಲಭವಾಗಿ ಬೆಂಗಳೂರಿಗೆ ಬರುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳುವುದು ಮಾತ್ರವಲ್ಲ, ಕನ್ನಡಿಗರ ಉದ್ಯೋಗ ಕಸಿದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಕರಾವೇ ಸಂಘಟನೆಯ ಪ್ರವೀಣ್‍ಶೆಟ್ಟಿ ಮಾತನಾಡಿ, ಬೆಂಗಳೂರಿನಲ್ಲಿ 2ನೇ ಹಂತದ ಮೆಟ್ರೋ ರೈಲು ಯೋಜನೆ ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ನಡೆಯುತ್ತಿದೆ. ಬೊಮ್ಮಸಂದ್ರದಿಂದ ತಮಿಳುನಾಡಿದ ಕೃಷ್ಣಗಿರಿ ಜಿಲ್ಲೆಯ ಹೊಸೂರಿನವರೆಗೆ ಮೆಟ್ರೋ ರೈಲು ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಚೆನ್ನೈ ಮೆಟ್ರೋ ರೈಲು ಆಡಳಿತದ ಶಿಫಾರಸ್ಸಿನ ಮೇರೆಗೆ ಮೆಟ್ರೋ ರೈಲು ಯೋಜನೆಯನ್ನು ಹೊಸೂರಿಗೆ ವಿಸ್ತರಿಸಲು ಕೇಂದ್ರ ಅನುಮೋದನೆ ನೀಡಿದೆ. ಯಾವುದೇ ಕಾರಣಕ್ಕೂ ಹೊಸೂರಿನವರೆಗೆ ಮೆಟ್ರೋ ರೈಲು ಯೋಜನೆ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ. ಬೆಂಗಳೂರು ಹೊರವಲಯದಲ್ಲಿ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟುವನ್ನು ತಮಿಳುನಾಡು ಸರಕಾರ ವಿರೋಧಿಸುತ್ತಿದೆ. ಆದುದರಿಂದ ಮೆಟ್ರೋ ರೈಲು ಯೋಜನೆಯನ್ನು ಹೊಸೂರಿಗೆ ವಿಸ್ತರಿಸಲು ನೀಡಿರುವ ಅನುಮತಿ ಕೂಡಲೇ ಹಿಂಪಡೆಯಬೇಕು. ಸಂಘಟನೆಯ ವಿರೋಧದ ನಡೆವೆಯೂ ಮೆಟ್ರೋ ರೈಲು ಯೋಜನೆ ವಿಸ್ತರಿಸಿದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

Similar News