×
Ad

ಶಿಕ್ಷಣ ಕ್ರಾಂತಿಯನ್ನು ಸಹಿಸದ ಕೇಂದ್ರ ಸರಕಾರ ಮನೀಶ್ ಸಿಸೋಡಿಯಾರನ್ನು ಬಂಧಿಸಿದೆ: ಅಶೋಕ್ ಎಡಮಲೆ ಆರೋಪ

Update: 2023-02-28 20:02 IST

ಮಂಗಳೂರು: ದೇಶದಲ್ಲಿ ಆಮ್ ಆದ್ಮಿ ಪಕ್ಷ ಬೆಳೆಯುತ್ತಿರುವುದನ್ನು ಕಂಡು ಹೆದರಿರುವ ಹಾಗೂ ಹೊಸದಿಲ್ಲಿಯಲ್ಲಿ ಆಗಿರುವ ಶಿಕ್ಷಣ ಕ್ರಾಂತಿಯನ್ನು ಸಹಿಸದ ಕೇಂದ್ರ ಬಿಜೆಪಿ ಸರಕಾರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅಶೋಕ್ ಎಡಮಲೆ ಆರೋಪಿಸಿದ್ದಾರೆ.

ಮಂಗಳವಾರ  ಮಾತನಾಡಿದ ಅವರು, ಹೊಸದಿಲ್ಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿ ಅಲ್ಲಿ ಇನ್ನೂ ಜಾರಿಯಾಗಿಲ್ಲ. ಆದರೂ, ಕಳೆದ ಒಂದು ವರ್ಷದಿಂದ ಕೇಂದ್ರ ಸರಕಾರ ತನಿಖಾಧಿಕಾರಿಗಳು ಸಿಸೋಡಿಯಾ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಆರೋಪ ಸಾಬೀತು ಪಡಿಸುವ ಒಂದು ಸಣ್ಣ ಸಾಕ್ಷಿ ಸಿಕ್ಕಿಲ್ಲ. ಆಮ್ ಆದ್ಮಿಗೆ ಬಿಜೆಪಿ ಸರಕಾರವನ್ನು ಎದುರಿಸುವ ಶಕ್ತಿಯಿದೆ ಎಂದು ಅರಿತು, ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ತೊಂದರೆ ನೀಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಜಂಟಿ ಕಾರ್ಯದರ್ಶಿ ಸಂತೋಷ್ ಕಾಮತ್, ಪ್ರಧಾನ ಕಾರ್ಯದರ್ಶಿ ಪ್ಲೋರಿನಾ ಗೋವಿಸ್, ಮಾಧ್ಯಮ ವಿಭಾಗ ಮುಖ್ಯಸ್ಥ ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.

Similar News