ಗ್ರಂಥಾಲಯಗಳಿಗೆ 121ಕೋಟಿ ರೂ.ಮೀಸಲಿಟ್ಟ ಬಿಬಿಎಂಪಿ

Update: 2023-03-01 07:50 GMT

ಬೆಂಗಳೂರು: ನಗರದಲ್ಲಿರುವ ಎಲ್ಲ ಗ್ರಂಥಾಲಯಗಳ ನಿರ್ವಹಣೆಗಾಗಿ ಪ್ರಸಕ್ತ ಆರ್ಥಿಕ ವರ್ಷಕ್ಕೆ 121.81 ಕೋಟಿ ರೂ.ವೆಚ್ಚವನ್ನು ಭರಿಸಲು ಬಿಬಿಎಂಪಿ ಅನುಮೋದನೆ ನೀಡಲಾಗಿದೆ ಎಂದು ಬಿಬಿಎಂಪಿ ಆಡಳಿತಗಾರರ ರಾಕೇಶ್ ಸಿಂಗ್ ತಿಳಿಸಿದ್ದಾರೆ. 

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ವಲಯದ ಹೊಸದಾಗಿ ಡಾ. ವಿಷ್ಣುವರ್ಧನ್ ಸಭಾಂಗಣವನ್ನು ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಯುವಕ, ಯುವತಿಯರಿಗೆ ಅನುಕೂಲವಾಗಲೆಂದು ಪ್ರತಿವಾರ 2 ದಿನ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಲು ಸೂಚನೆ ನೀಡಿದರು.  

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಿದ್ವಾಯಿ ಸಂಸ್ಥೆಯ ಆವರಣದಲ್ಲಿ ಮತ್ತು ಬಾಲಭವನದಲ್ಲಿ ಹೊಸದಾಗಿ ಆಡಿಟೋರಿಯಂ ನಿರ್ಮಾಣ ಮಾಡಿದ್ದು, ಇಲ್ಲ ಹೊಸದಾಗಿ ಗ್ರಂಥಾಲಯ ತೆರೆಯಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. 

ಗ್ರಂಥಾಲಯಗಳ ವೆಚ್ಚವನ್ನು ಸರಿದೂಗಿಸಲು ಹೊಸ ಕಟ್ಟಡವನ್ನು ನಿರ್ಮಿಸುವ ಯೋಜನೆಯಲ್ಲಿ ಗ್ರಂಥಾಲಯಗಳ ಸ್ವಂತ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮೊಬೈಲ್ ಗ್ರಂಥಾಲಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ಪ್ರತಿ ವಲಯಕ್ಕೆ ಒಂದು ಮೊಬೈಲ್ ವ್ಯಾನ್ ಖರೀದಿಸಿ ಓದುಗರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.  

ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರಂಥಾಲಯದ ಇಲಾಖೆಗೆ ಪಾವತಿಸಬೇಕಾದ ಸೆಸ್ ಮೊತ್ತವನ್ನು ಪಾವತಿಸಲು ಎಸ್ಕ್ರೋ ಖಾತೆಯನ್ನು ತೆರೆಯಬೇಕು. ಗ್ರಂಥಾಲಯಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಸಿಬ್ಬಂದಿ ಮತ್ತು ಸಹಾಯಕರು ಕನಿಷ್ಟ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. 

Similar News