ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಕಾಡ್ಗಿಚ್ಚು: ಬೆಂಕಿ ಆರಿಸಲು ಹರಸಾಹಸಪಟ್ಟ ಅಗ್ನಿಶಾಮಕ ದಳ

Update: 2023-03-01 12:14 GMT

ಬೆಂಗಳೂರು, ಮಾ1: ನಗರದ ಪ್ರತಿಷ್ಠಿತ ಬಡಾವಣೆಯಾಗಿರುವ ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಗೆ ಹೊಂದಿಕೊಂಡಿರುವ ಅರಣ್ಯ ಭೂಮಿಗೆ ಹತ್ತಿದ ಕಾಡ್ಗಿಚ್ಚು ಉರಿಯುತ್ತಿರುವುದನ್ನು ಯಲಹಂಕ ಠಾಣೆಯ ಹೊಯ್ಸಳ ಸಿಬ್ಬಂದಿ ನೋಡಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ.

ತಕ್ಷಣ ಧಾವಿಸಿಬಂದ ಅಗ್ನಿಶಾಮಕ ದಳದ ವಾಹನ ತುರ್ತಾಗಿ ನ್ಯಾಯಾಂಗ ಬಡಾವಣೆಗೆ ಪ್ರವೇಶಿಸಲು ಮಾರ್ಗ ಇಲ್ಲದೆ ಸುತ್ತುವರಿದು ಅಲ್ಲಾಳಸಂದ್ರ ಮುಖಾಂತರ ಬಹಳಷ್ಟು ಶ್ರಮಪಟ್ಟು ನ್ಯಾಯಾಂಗ ಬಡಾವಣೆಗೆ ಬಂದು ನಾಲ್ಕನೇ ಅಡ್ಡರಸ್ತೆ ಮೂಲಕ ರೈಲ್ವೆ ಪ್ಯಾರಲರ್ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಭೂಮಿಗೆ ಹೊತ್ತಿದ ಬೆಂಕಿಯನ್ನು   ನಂದಿಸುವಲ್ಲಿ ಯಶಸ್ವಿಯಾದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕಿಸುವ ರೈಲ್ವೆ ಅಂಡರ್ ಪಾಸ್ ಅನ್ನು ಕಿರಿದಾಗಿ ಮಾಡಿ ಕಾರುಗಳು ಮಾತ್ರ ಸಂಚರಿಸುವಂತೆ ಮಾಡಿರುವುದರಿಂದ ಅಗ್ನಿಶಾಮಕ ವಾಹನ ಮತ್ತು ಆಂಬುಲೆನ್ಸ್ ವಾಹನಗಳು ಸೇರಿದಂತೆ ಈ ಬಡಾವಣೆಗೆ ತುರ್ತಾಗಿ ಬರಲು ಸಾಧ್ಯವಾಗದೆ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಇನ್ನುಳಿದಂತೆ ರಾಷ್ಟ್ರೀಯ ಹೆದ್ದಾರಿಯಿಂದ ಹತ್ತಿರದ ಸಂಪರ್ಕವಾದ ಜಿಕೆವಿಕೆ ಮಾರ್ಗವಾಗಿ, ಸುಲಭವಾಗಿ ಮತ್ತು ತುರ್ತಾಗಿ ಬರುವ ವಾಹನಗಳಿಗೆ ಯೋಗ್ಯವಾದ ರಸ್ತೆ ಇದ್ದರು ಅಲ್ಲಿ  ಅಗ್ನಿಶಾಮಕ ವಾಹನಗಳು ಮತ್ತು ದೊಡ್ಡ ಆಂಬುಲೆನ್ಸ್ ಗಳು ಸಂಚರಿಸದಂತೆ ರಸ್ತೆಯ ಮೇಲ್ಭಾಗದಲ್ಲಿ ಕಬ್ಬಿಣದ ರಾಡುಗಳನ್ನು ಅಳವಡಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಸುತ್ತಿ ಬಳಸಿ ಅಳ್ಳಾಲಸಂದ್ರ ಮುಖಾಂತರ ಕಿರಿದಾದ ರಸ್ತೆಯಲ್ಲಿಯೆ ಸಂಚರಿಸಬೇಕಾಗಿದೆ. 

ಈ ಬಗ್ಗೆ ಸರಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯು ಒಮ್ಮತದ ಅಭಿಪ್ರಾಯ ಪಡೆದು ಈ ಪ್ರತಿಷ್ಠಿತ ನ್ಯಾಯಾಂಗ ಬಡಾವಣೆಗೆ ಅಗ್ನಿಶಾಮಕ ದಳದ ವಾಹನ ಮತ್ತು ಆಂಬುಲೆನ್ಸ್ ಗಳು ತುರ್ತು ಸಮಯದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂಬುದು ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Similar News