ಬೆಳ್ತಂಗಡಿ ಶಾಸಕರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು: ವಸಂತ ಬಂಗೇರ

Update: 2023-03-01 17:58 GMT

ಬೆಳ್ತಂಗಡಿ; ನಾರಾಯಣ ಗುರುಗಳ ಪಾಠವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮಹತ್ವದ ಪಾತ್ರವಿದೆ ಎಂಬುದು ವೇಣೂರಿನಲ್ಲಿ ರೋಹಿತ್ ಚಕ್ರತೀರ್ಥ ನೀಡಿರುವ ಹೇಳಿಕೆಯಿಂದ ಸ್ಪಷ್ಡವಾಗಿದ್ದು, ಶಾಸಕರ ಈ ನಡೆಯನ್ನು ಗುರುನಾರಾಯಣ ಸ್ವಾಮಿ ಸೇವಾ ಸಂಘ  ತೀವ್ರವಾಗಿ ಖಂಡಿಸುತ್ತಿದ್ದು ಶಾಸಕರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮಾಜಿ ಶಾಸಕ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವ ಅಧ್ಯಕ್ಷ ವಸಂತ ಬಂಗೇರ ಹೇಳಿದರು.

ಅವರು ಬೆಳ್ತಂಗಡಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕರು ಹಟ ಮಾಡಿ ರೋಹಿತ್ ಚಕ್ರತೀರ್ಥ ಅವರನ್ನು ವೇಣೂರಿಗೆ ಕರೆಸಿರುವುದು ಸ್ಪಷ್ಟವಾಗಿದೆ. ಅಳದಂಗಡಿ ಅರಸರಾದ ಡಾ ಪದ್ಮಪ್ರಸಾದ ಅಜಿಲರ ನೇತೃತ್ವದಲ್ಲಿ ವಿವಾದಗಳನ್ನು ಪರಿಹರಿಸಲಾಗಿತ್ತು, ರೋಹಿತ್ ಚಕ್ರತೀರ್ಥ ಅವರ ಉಪನ್ಯಾಸವನ್ನು ರದ್ದುಗೊಳಿಸಲಾಗಿತ್ತು. ಇದಕ್ಕಾಗಿ ಡಾ.ಪದ್ಮಪ್ರಸಾದ ಅಜಿಲ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಆದರೆ ಶಾಸಕರು ಉದ್ದೇಶಪೂರ್ವಕವಾಗಿ ರೋಹಿತ್ ಚಕ್ರತೀರ್ಥರನ್ನು ವೇಣೂರಿಗೆ ಕರೆಸಿ ಮಾದ್ಯಮದವರೊಂದಿಗೆ ಮಾತನಾಡಿಸಿದ್ದಾರೆ. ರೋಹಿತ್ ಚಕ್ರತೀರ್ಥ ಅಲ್ಲಿ ಮಾತನಾಡುತ್ತಾ "ಪಠ್ಯ ಪುಸ್ತಕ ರಚನೆಯ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ನಡೆದ ಅನೇಕ ಘಟನಾವಳಿಗಳಲ್ಲಿ ನನ್ನ ಜೊತೆ ಬಲವಾಗಿ ನಿಂತದ್ದು ಹರೀಶ್ ಪೂಂಜ ಅವರಾಗಿದ್ದಾರೆ" ಎಂದು ಹೇಳಿದ್ದಾರೆ. ಇದನ್ನು ಗಮನಿಸಿದಾಗ ‌ನಾರಾಯಣ ಗುರುಗಳ ವಿಚಾರ ಸೇರಿದಂತೆ ಹಲವರು ದಾರ್ಶನಿಕರ ವಿಚಾರಗಳನ್ನು ಪಠ್ಯಪುಸ್ತಕದಿಂದ ಕೈಬಿಡುವಲ್ಲಿ ಹರೀಶ್ ಪೂಂಜ ಅವರ ಪಾತ್ರವೂ ಇರುವುದು ಸ್ಪಷ್ಟವಾಗುತ್ತಿದೆ. ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ನಿಜ ಬಣ್ಣ ಬಯಲಾಗಿದೆ. ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು  ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಪಿತಾಂಬರ ಹೆರಾಜೆ, ಭಗೀರಥ ಜಿ, ಜಯರಾಂ ಬಂಗೇರ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ಬಂಗೇರ, ಶೇಖರ ಬಂಗೇರ, ಗೋಪಾಲ ಪೂಜಾರಿ, ಜಯವಿಕ್ರಮ, ಉಪಸ್ಥಿತರಿದ್ದರು.

Similar News