ಛಾವ್ಲಾ ಪ್ರಕರಣ: ಆರೋಪಿಗಳ ಖುಲಾಸೆ; ತೀರ್ಪು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ

Update: 2023-03-01 18:09 GMT

ಹೊಸದಿಲ್ಲಿ, ಮಾ. 1: ಇಲ್ಲಿನ ಚಾವ್ಲಾ ಪ್ರದೇಶದಲ್ಲಿ 2012ರಲ್ಲಿ 19 ವರ್ಷದ ಯುವತಿಯ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ಮರಣ ದಂಡನೆ ಎದುರಿಸುತ್ತಿರುವ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ 5ಕ್ಕೂ ಅಧಿಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ. 

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಹಾಗೂ ಬೇಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ಪೀಠ ಈ ಐದು ಮರು ಪರಿಶೀಲನಾ ಅರ್ಜಿಯ ಭವಿಷ್ಯವನ್ನು ಮಾರ್ಚ್ 2ರಂದು ಅಪರಾಹ್ನ 1.50ಕ್ಕೆ ನಿರ್ಧರಿಸಲಿದ್ದಾರೆ. 
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಚಾರಣೆ ನಡೆಸುವ ಪ್ರಕರಣಗಳ ಪಟ್ಟಿಯಲ್ಲಿ, ಈ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಲು ಪಟ್ಟಿ ಮಾಡಲಾಗಿದೆ. 

ಈ ಪ್ರಕರಣದಲ್ಲಿ ಮರಣ ದಂಡನೆ ಎದುರಿಸುತ್ತಿರುವ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪರಿಶೀಲಿಸಲು ಮೂವರು ನ್ಯಾಯಾಧೀಶರ ಪೀಠವನ್ನು ರಚಿಸಲು ಸುಪ್ರೀಂ ಕೋರ್ಟ್ ಫೆಬ್ರವರಿ 8ರಂದು ಒಪ್ಪಿಕೊಂಡಿತ್ತು. 
ದಿಲ್ಲಿ ಸರಕಾರವಲ್ಲದೆ, ಯುವತಿಯ ತಂದೆ, ಉತ್ತರಾಖಂಡ್ ಬಚಾವೊ ಚಳುವಳಿ ಹಾಗೂ ಉತ್ತರಾಖಂಡ ಲೋಕ ಮಂಚ್ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

Similar News