ಮಾ.16ರಂದು ಮಂಗಳೂರಿನಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ: ಸಚಿವ ಸುನಿಲ್ ಕುಮಾರ್

''ಸಮ್ಮೇಳನದಲ್ಲಿ 25,000 ಮಂದಿ ಭಾಗವಹಿಸುವ ನಿರೀಕ್ಷೆ''

Update: 2023-03-02 07:35 GMT

ಮಂಗಳೂರು, ಮಾ.2: ಅಧಿಕಾರಿಗಳ ಕಣ್‌ತಪ್ಪಿನಿಂದ ಸರಕಾರದ ವಿವಿಧ ಯೋಜನೆಗಳ ಸೌಲಭ್ಯದಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡುವುದು ಮತ್ತು ಸರಕಾರದ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವ ಉದ್ದೇಶಕ್ಕಾಗಿ ಮಾ.16ರಂದು ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು .

ಫಲಾನುಭವಿಗಳ ಸಮ್ಮೇಳನ ಸರಕಾರದ ಕಾರ್ಯಕ್ರಮವಾಗಿದ್ದು, ಸಮ್ಮೇಳನಕ್ಕೆ ಎಲ್ಲರನ್ನು ಕರೆ ತರಲು ಸಾಧ್ಯವಾಗುವುದಿಲ್ಲ. ಈ ಸಮ್ಮೇಳನದಲ್ಲಿ ಸುಮಾರು 20,000-25,000 ಮಂದಿ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬರುವ ವಿಚಾರ ಇನ್ನೂ ನಿರ್ಧಾರ ಆಗಿಲ್ಲ. ರಾಜ್ಯ ಸಚಿವ ಸಂಪುಟದ ಹಲವು ಮಂದಿ ಸಚಿವರು ಭಾಗವಹಿಸಿ ಫಲಾನುಭವಿಗಳಿಗೆ ಸರಕಾರದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ವಿತರಿಸಲಿರುವರು ಎಂದು ಎಂದು ಮಾಹಿತಿ ನೀಡಿದರು.

ಈ ಉದ್ದೇಶಕ್ಕಾಗಿ ಮೊದಲ ಸಿದ್ಧತಾ ಸಭೆ ನಡೆದಿದೆ.ಈ ಸಭೆಯಲ್ಲಿ ಸಮ್ಮೇಳನದ ತಯಾರಿ ಬಗ್ಗೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ವಿವಿಧ ತಾಲೂಕುಗಳಲ್ಲಿ ಅಧಿಕಾರಿಗಳ ಸಭೆ ನಡೆಯಲಿದ್ದು, ಮಾ.10ರ ಬಳಿಕ ಇನ್ನೊಂದು ಸಭೆ ನಡೆಸಿ ಚರ್ಚಿಸಲಾಗುವುದು. ಎಷ್ಟು ಫಲಾನುಭವಿಗಳು ಸಮ್ಮೇಳನಕ್ಕೆ ಬರುತ್ತಾರೆಂದು ಆ ಬಳಿಕ ಗೊತ್ತಾಗಲಿದೆ ಎಂದರು.

ಸಭೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್, ಜಿಪಂ ಸಿಇಒ ಡಾ.ಕುಮಾರ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಚನ್ನಬಸಪ್ಪ, ಉಪಮೇಯರ್ ಪೂರ್ಣಿಮಾ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

Similar News