ತೋಕೂರು ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯ, ಕಲುಷಿತಗೊಳ್ಳುತ್ತಿರುವ ಫಲ್ಗುಣಿ ನದಿ: ನಾಗರಿಕ ಹೋರಾಟ ಸಮಿತಿ ಆರೋಪ
ಸುರತ್ಕಲ್. ಮಾ.2: ಬೈಕಂಪಾಡಿ ಕೈಗಾರಿಕಾ ವಲಯ, ಎಂಆರ್‌ಪಿಎಲ್, ಸೆಝ್‌ಗಳು ತಮ್ಮ ಕೈಗಾರಿಕಾ ತ್ಯಾಜ್ಯಗಳನ್ನು ತೋಕೂರು ಹಳ್ಳಕ್ಕೆ ಬಿಟ್ಟಿದ್ದು, ಅದರ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತು ನಾರುತ್ತಿದ್ದೆ. ಹಳ್ಳದ ನೀರು ನೇರವಾಗಿ ಫಲ್ಗುಣಿ ನದಿ ಸೇರುತ್ತಿರುವುದರಿಂದ ನದಿ ನೀರು ಹಾಳಾಗುತ್ತಿದೆ ಎಂದು ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
ಈ ಕುರಿತು ಗುರುವಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶೀಕ ಅಧಿಕಾರಿಗೆ ಹೋರಾಟ ಸಮಿತಿ ಜೋಕಟ್ಟೆ ದೂರು ನೀಡಿತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಧಿಕಾರಿ ರಮೇಶ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ, ನೀರಿನ ಮಾದರಿ ಸಂಗ್ರಹಿಸಿತು. ಕೈಗಾರಿಕಾ ಮಾಲಿನ್ಯ ಆಗುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವುದಾಗಿ ಒಪ್ಪಿಕೊಂಡಿತು. ಈ ಕುರಿತು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಕಂಪೆನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪಲ್ಗುಣಿ ನದಿಯನ್ನು ಉಳಿಸಬೇಕು ಎಂದು ನಾಗರಿಕ ಹೋರಾಟ ಸಮಿತಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಆಗ್ರಹಿಸಿತು. ಇಲ್ಲದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿತು.
ಈ ಸಂದರ್ಭ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಫಾರೂಕ್, ಪಂಚಾಯತ್ ಸದಸ್ಯ, ಹೋರಾಟ ಸಮಿತಿ ಪ್ರಮುಖ ಅಬೂಬಕ್ಕರ್ ಬಾವ ಉಪಸ್ಥಿತರಿದ್ದರು.