×
Ad

ಚಿನ್ನಾಭರಣ ಅಂಗಡಿ ಸಿಬ್ಬಂದಿ ಕೊಲೆ ಪ್ರಕರಣ: ಆರೋಪಿಯ ಸೆರೆ ಹಿಡಿದ ಕಾಸರಗೋಡು ಪೊಲೀಸರಿಗೆ ಸನ್ಮಾನ

ಮಂಗಳೂರು ಪೊಲೀಸ್ ತಂಡಕ್ಕೆ ಬಹುಮಾನ

Update: 2023-03-04 19:51 IST

ಮಂಗಳೂರು: ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯ ಮಂಗಳೂರು ಜ್ಯುವೆಲ್ಲರ್ಸ್‌ನಲ್ಲಿ ಕಳೆದ ತಿಂಗಳು ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಸೆರೆ ಹಿಡಿದ ಕಾಸರಗೋಡು ಠಾಣೆಯ ಪೊಲೀಸರಿಗೆ ಶನಿವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸನ್ಮಾನಿಸಲಾಯಿತು.

ಕೇರಳದ ಕಲ್ಲಿಕೋಟೆ ಜಿಲ್ಲೆಯ ಕೊಯಿಲಾಂಡಿ ತಾಲೂಕಿನ ಆರೋಪಿ ಸಿಫಾಝ್ ಪಿ.ಪಿ. ಯಾನೆ ಇಕ್ಕ (30)ನನ್ನು ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಸೈಬರ್ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಪ್ರೇಮ್ ಸದನ್, ಸೈಬರ್ ಸೆಲ್‌ನ ಎಸ್ಸೈ ಅಜಿತ್ ಪಿ.ಕೆ., ಪೊಲೀಸ್ ಕಾನ್‌ಸ್ಟೇಬಲ್‌ಗಳಾದ  ನಿಜಿನ್ ಕುಮಾರ್, ರಜೀಶ್ ಕಟ್ಟಂಪಲ್ಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಶನಿವಾರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಈ ತಂಡವನ್ನು ಪ್ರಶಂಸಿದರಲ್ಲದೆ ಶಾಲು ಹೊದಿಸಿ ಸನ್ಮಾನಿಸಿದರು. ಇದೇ ವೇಳೆ ಮಂಗಳೂರಿನ 8 ಪೊಲೀಸ್ ತಂಡಕ್ಕೆ 25 ಸಾವಿರ ರೂ. ಬಹುಮಾನವನ್ನು ಇಲಾಖಾ ವತಿಯಿಂದ ನೀಡಲಾಗುವುದು ಎಂದು ಘೋಷಿಸಿದರು.

ಆರೋಪಿಯ ತೀವ್ರ ವಿಚಾರಣೆ: ಕೊಲೆ ಕೃತ್ಯ ನಡೆಸಿದ್ದ ಆರೋಪಿ ಸಿಫಾಝ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ಗಡಿಭಾಗದಲ್ಲೇ ಹೆಚ್ಚು ತಿರುಗಾಡಿ ಒಂಟಿ ಸಿಬ್ಬಂದಿಗಳಿರುವ ಜ್ಯುವೆಲ್ಲರಿಯ ಮೇಲೆ ಕಣ್ಣಿಟ್ಟು, ಗ್ರಾಹಕರ ಸೋಗಿನಲ್ಲಿ ಅಂಗಡಿಯೊಳಗೆ ಹೊಕ್ಕು ಬಳಿಕ ಕೊಲೆ ಮಾಡುವ ಯೋಜನೆ ರೂಪಿಸುತ್ತಿದ್ದ. ಅದರಂತೆ ಫೆ..3ರಂದು ನಗರದ ಮಂಗಳೂರು ಜ್ಯುವೆಲ್ಲರ್ಸ್‌ನ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ.

ಕೊಲೆಗೈದ ಬಳಿಕ ಸ್ವಲ್ಪ ಹೊತ್ತು ನಡೆದುಕೊಂಡು ಹೋಗಿ ಬಳಿಕ ರಿಕ್ಷಾ ಹತ್ತಿ ಜಪ್ಪಿನಮೊಗರುವರೆಗೆ ಸಾಗಿರುವ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಲಭಿಸಿವೆ. ಬಳಿಕ ಊರಿಗೆ ತೆರಳಿದ್ದ. ಈತ 3-4 ಬಟ್ಟೆಗಳನ್ನು ಧರಿಸುತ್ತಿದ್ದು, ಕೃತ್ಯ ನಡೆದ ಬಳಿಕ ರಕ್ತದ ಕಲೆಯಾದರೆ ಬಟ್ಟೆಯನ್ನು ಕಳಚುತ್ತಿದ್ದ. ರಾಘವೇಂದ್ರ ಆಚಾರ್ಯರನ್ನು ಕೊಂದ ಬಳಿಕವೂ ಬಟ್ಟೆಯನ್ನು ಕಳಚಿ ಎಸದಿದ್ದ ಎಂದು ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ಮಾಹಿತಿ ನೀಡಿದ್ದಾರೆ.

ಆರೋಪಿಯ ಮೊಬೈಲ್ ಕರೆಯನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ. ಇತರ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈತನ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಈವರೆಗೆ ಬೇರೆ ಯಾವ ದೂರು ಬಂದಿಲ್ಲ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ತೀವ್ರಗೊಳಿಸಲಾಗುತ್ತಿದೆ ಎಂದರು.

ಆರೋಪಿಯು ಮಂಗಳೂರು ಅಲ್ಲದೆ ತಮಿಳುನಾಡು, ಕೇರಳ, ಗೋವಾದಲ್ಲಿಯೂ ಇದೇ ರೀತಿಯ ಕೃತ್ಯ ನಡೆಸುವ ಉದ್ದೇಶದಿಂದ ಓಡಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅಲ್ಲಿ ಇಂತಹ ಕೃತ್ಯ ನಡೆದಿದ್ದರೆ ಆ ಬಗ್ಗೆ ಮಾಹಿತಿ ನೀಡುವಂತೆ ಅಲ್ಲಿನ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದರು.

ಆರೋಪಿಯ ಪತ್ತೆಯು ಸವಾಲಿನ ಕೆಲಸವಾಗಿತ್ತು. ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರಲಿಲ್ಲ. ಹಾಗಾಗಿ ಆತನ ಚಹರೆ ಮತ್ತು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕಾಸರಗೋಡಿನ ಪೊಲೀಸರು ಶಿಫಾಝ್‌ನನ್ನು ಶಂಕೆಯ ಮೇರೆಗೆ ವಶಕ್ಕೆ ಪಡೆದು ವಿಚಾರಿಸಿದರು. ಆತ ಧರಿಸಿದ್ದ ಬ್ಯಾಗ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Similar News