ಶೇ.50ರ ರಿಯಾಯಿತಿ ಬಳಸಿ 33 ಲಕ್ಷ ರೂ.ದಂಡ ಪಾವತಿಸಿದ ಬಿಎಂಟಿಸಿ

Update: 2023-03-05 12:43 GMT

ಬೆಂಗಳೂರು, ಮಾ.5: ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ ಚಾಲಕರು ನಿಗಮಕ್ಕೆ ಬರೋಬ್ಬರಿ 1ಕೋಟಿ ರೂ.ನಷ್ಟವುಂಟು ಮಾಡಿದ್ದು, ಶೇ.50ರ ರಿಯಾಯಿತಿ ಮೂಲಕ 33 ಲಕ್ಷ ರೂ.ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ, ಸಂಚಾರ ಪೊಲೀಸರಿಗೆ ಪಾವತಿ ಮಾಡಿದೆ. 

ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರ ಅಜಾಗರೂಕತೆಯ ಚಾಲನೆಗೆ ಹಲವು ಜೀವಗಳು ಬಲಿಯಾಗಿವೆ. ಚಾಲಕರ ಅಜಾಗರೂಕತೆಯ ಜೊತೆ ಸಂಚಾರ ನಿಯಮಗಳನ್ನು ಸಹ ಉಲ್ಲಂಘನೆ ಮಾಡಿ ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ.ನಷ್ಟವುಂಟು ಮಾಡಿದ್ದು, 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಕೇಸ್‍ಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. 

ಸಂಚಾರ ನಿಯಮಗಳನ್ನ ಉಲ್ಲಂಘಿಸಿದ ಕೇಸ್‍ಗಳಲ್ಲಿ 66 ಲಕ್ಷ ರೂ. ದಂಡದಲ್ಲಿ, ಸಂಚಾರ ಪೊಲೀಸರ ಶೇ.50 ರಿಯಾಯಿತಿ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕರಿಗೆ, ಅವರ ವೇತನದಲ್ಲೇ ದಂಡದ ಮೊತ್ತ ಪಾವತಿಸಲಾಗುತ್ತಿತ್ತು. 

ಹಾಗಿದ್ದರೂ ಸಂಚಾರ ಉಲ್ಲಂಘನೆ ಬಗ್ಗೆ ಚಾಲಕರಿಗೆ ಅರಿವು ಬರುತ್ತಿಲ್ಲ. ಹೀಗಾಗಿ ಎಲ್ಲ ಬಸ್ ಚಾಲಕರಿಗೂ ಸಂಚಾರ ನಿಯಮ ಪಾಲನೆ, ಸುರಕ್ಷಿತ ಚಾಲನಾ ಬಗ್ಗೆ ತರಬೇತಿ ನೀಡಲು ಬಿಎಂಟಿಸಿ ತೀರ್ಮಾನಿಸಿದೆ. 

ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ನಗರದ ಎಲ್ಲ ಡಿಪೋ ವ್ಯವಸ್ಥಾಪಕರ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಲಾಗಿದೆ. ನಗರದಲ್ಲಿ ಸುರಕ್ಷಿತ ಪ್ರಯಾಣದ ಜೊತೆಗೆ ದಂಡಮುಕ್ತ ಸಂಚಾರ ನಡೆಸಬೇಕೆಂದು ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ. 

Similar News