ತಿಂಗಳಾಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವೀರಪ್ಪ ಮೊಯ್ಲಿ

Update: 2023-03-05 13:48 GMT

ಮಂಗಳೂರು, ಮಾ.5: ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಚುನಾವಣಾ ಸಮಿತಿ ಸದಸ್ಯ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ  ಎಐಸಿಸಿ ಮತ್ತು ಕೆಪಿಸಿಸಿ ಹಂತದಲ್ಲಿ ಚರ್ಚೆ ನಡೆಸಲಾಗಿವೆ. ಈ ತಿಂಗಳ 7 ಮತ್ತು 8ರಂದು ಸ್ಕ್ರೀನಿಂಗ್ ಕಮಿಟಿ ಸಭೆಯು ನಡೆಯಲಿದೆ. ಬಳಿಕ ಪಟ್ಟಿಯನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ರವಾನೆಯಾಗಲಿದೆ ಎಂದರು.

ಬಸವರಾಜ ಬೊಮ್ಮಾಯಿ ರಾಜ್ಯದ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದು, ಪ್ರತಿಯೊಂದಕ್ಕೆ ಯಡಿಯೂರಪ್ಪರ ಕಡೆ ಕೈ ತೋರಿಸುತ್ತಿದ್ದಾರೆ. ಅಲ್ಲದೆ ಬೊಮ್ಮಾಯಿಗೆ ಮಾರ್ಗದರ್ಶನ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಹಿಂದೆ ಜೈಲುವಾಸ ಅನುಭವಿಸಿದವರು. ಗುಜರಾತ್ ರಾಜ್ಯದಿಂದಲೇ ಗಡಿಪಾರು ಶಿಕ್ಷೆ ಅನುಭವಿಸಿದವರು ಎಂದು ವೀರಪ್ಪ ಮೊಯ್ಲಿ ಲೇವಡಿ ಮಾಡಿದರು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೈಕ್ಲೋನ್ ತರಹ ರಾಜ್ಯಕ್ಕೆ ಪದೇ ಪದೇ ಬರುತ್ತಿದ್ದಾರೆ. ಹಾಗೇ ಬಂದರೂ ಕೂಡ ಪ್ರಧಾನಿ ಮೋದಿಗೆ ಸುದ್ದಿಗೋಷ್ಠಿ  ನಡೆಸುವ, ಮಾಧ್ಯಮ ಪ್ರತಿನಿಧಿಗಳನ್ನು ಎದುರಿಸುವ ಧೈರ್ಯ ಇಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಕನಿಷ್ಠ ಎರಡು ತಿಂಗಳಿಗೊಮ್ಮೆ  ಸುದ್ದಿಗೋಷ್ಠಿ, ಸಂವಾದ ನಡೆಸುತ್ತಿದ್ದರು ಎಂದು ವೀರಪ್ಪ ಮೊಯ್ಲಿ ಹೇಳಿದರು.

ಕರ್ನಾಟಕದಲ್ಲಿ ಹಲವು ಮೂಲಭೂತ ಸಮಸ್ಯೆಗಳಿವೆ. ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣವು ನ್ಯಾಯಪೀಠದಲ್ಲಿ ಇತ್ಯರ್ಥವಾಗಿ ಹಲವು ವರ್ಷಗಳಾಗಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸದೆ ಕರ್ನಾಟಕವನ್ನು ಸತಾಯಿಸುತ್ತಿದೆ ಎಂದ ವೀರಪ್ಪ ಮೊಯ್ಲಿ ಶೇ.40 ಭ್ರಷ್ಟಾಚಾರವು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ನಡೀತಾ ಇದೆ. ಈ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ಶಾಸಕರು ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡಿರಲಿಲ್ಲ. ಸಾಂಸ್ಕೃತಿಕವಾಗಿ, ಗುಣದಲ್ಲಿ ಮೇಲ್ಪಂಕ್ತಿಯಲ್ಲಿದ್ದರು. ಆದರೆ ಇದೀಗ ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರೂ ಭ್ರಷ್ಟರಾಗಿದ್ದಾರೆ ಎಂದು ವೀರಪ್ಪ ಮೊಯ್ಲಿ ಆರೋಪಿಸಿದರು.

ಬಿಜೆಪಿಯವರು ಕಮಿಷನ್ ವಸೂಲಿಯಲ್ಲಿ ದೇವಾಲಯವನ್ನು ಬಿಟ್ಟಿಲ್ಲ. ಉಪ್ಪಿನಂಗಡಿಯ ದೇವಸ್ಥಾನದ ಕೆಲಸಗಳಿಗಾಗಿ ಕ್ಷೇತ್ರದ ಜನರು ಬೆಂಗಳೂರಿಗೆ ತೆರಳಿ 6.5 ಕೋ.ರೂ. ಅನುದಾನಕ್ಕೆ ಸರಕಾರದ ಮುಂದೆ ಬೇಡಿಕೆ ಇಟ್ಟಾಗ ತಿರಸ್ಕರಿಸಲಾಗಿತ್ತು.  ಬಳಿಕ ಶೇ.20 ಕಮಿಷನ್ ಒದಗಿಸಿದರೆ ಅನುದಾನ ನೀಡುವ ಭರವಸೆ ಕೊಟ್ಟಿರುವುದು ಗುಟ್ಟಾಗಿ ಉಳಿದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಐವನ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ನವೀನ್ ಡಿಸೋಜ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್‌ದಾಸ್, ಶುಭೋದಯ, ನಝೀರ್ ಬಜಾಲ್, ಅಶೋಕ್ ಡಿ.ಕೆ. ಉಪಸ್ಥಿತರಿದ್ದರು.

Similar News