ಸ್ಯಾಂಕಿ ಮೇಲ್ಸೇತುವೆ ಯೋಜನೆಯನ್ನು ಕೈಬಿಡುವಂತೆ ಸ್ಥಳೀಯರ ಪ್ರತಿಭಟನೆ

Update: 2023-03-05 16:23 GMT

ಬೆಂಗಳೂರು, ಮಾ.5: ಮಲ್ಲೇಶ್ವರಂ ಬಳಿಯ ಸ್ಯಾಂಕಿ ಮೇಲ್ಸೇತುವೆ ಯೋಜನೆ ಸಂಪೂರ್ಣವಾಗಿ ಕೈಬಿಡುವಂತೆ ಸ್ಥಳೀಯ ನಿವಾಸಿಗಳು ಪಟ್ಟುಹಿಡಿದ್ದು, ರವಿವಾರ ಸ್ಯಾಂಕಿ ರಸ್ತೆಯಲ್ಲಿ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. 

ವಾಹನ ದಟ್ಟಣೆಯನ್ನು ನಿಯಂತ್ರಿಸುವ ನೆಪವೊಡ್ಡಿ ಸರಕಾರವು ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ನೂರಾರು ಪಕ್ಷಿಗಳಿಗೆ ನೆಲೆಯಾಗಿರುವ 400ಕ್ಕೂ ಹೆಚ್ಚು ಪೇಪರ್ ಮಲ್ಬರಿ ಮರ ಸೇರಿ ಇತರೆ ಮರಗಳನ್ನು ಕಡಿಯುವುದು ಸರಿಯಲ್ಲ. ಪರಿಸರ ವಿನಾಶವನ್ನು ಬಯಸುವ ಈ ಯೋಜನೆಯನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಇದಲ್ಲದೆ, ಇತ್ತೀಚಿನ ಬಿಬಿಎಂಪಿ ಬಜೆಟ್‍ನಲ್ಲಿ ಸ್ಯಾಂಕಿ ಟ್ಯಾಂಕ್ ಅನ್ನು ‘ಟೂರಿಸ್ಟ್ ಪ್ಲಾಜಾ’ ಆಗಿ ಪರಿವರ್ತಿಸಲು ಹಣ ಮಂಜೂರು ಮಾಡಿದ್ದು, ಇದು ಸ್ಥಳೀಯ ನಿವಾಸಿಗಳನ್ನು ಕೆರಳಿಸಿದೆ. ಸ್ಯಾಂಕಿ ಟ್ಯಾಂಕ್‍ನ ಪರಿಸರವನ್ನು ಮತ್ತಷ್ಟು ನಾಶಪಡಿಸುತ್ತದೆ ಎಂದು ತಿಳಿಸಿದರು. 

ಯಾವುದೇ ನಿರ್ಮಾಣವು ಕೆರೆಯಿಂದ 30 ಮೀಟರ್ ಅಂತರ ಇರಬೇಕು ಎಂದು ಎನ್‍ಜಿಟಿ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಇದನ್ನು ಸರಕಾರ ಹಲವು ಬಾರಿ ಉಲ್ಲಂಘಿಸುತ್ತಿದೆ. ಕಾಂಕ್ರೀಟ್ ಕೆಲಸ ಮತ್ತು ಅದರ ಮೇಲೆ ನಿರ್ಮಿಸಲಾದ ರಚನೆಗಳಿಂದ ಉಷ್ಣತೆಯ ಏರಿಕೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.

Similar News