×
Ad

ಸಿದ್ದರಾಮಯ್ಯ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳು ಶೀಘ್ರವೇ ತನಿಖೆಗೆ: ಎನ್.ಆರ್.ರಮೇಶ್

Update: 2023-03-06 19:19 IST

ಬೆಂಗಳೂರು, ಮಾ.6: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಭ್ರಷ್ಟಾಚಾರದ ಕನಿಷ್ಠ ಐದಾರು ಪ್ರಕರಣಗಳನ್ನು ರಾಜ್ಯ ಸರಕಾರವು ಶೀಘ್ರವೇ ತನಿಖೆಗೆ ಒಪ್ಪಿಸಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ತಿಳಿಸಿದರು.

ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದಾಖಲೆಗಳ ಸಹಿತ ದೂರು ಕೊಟ್ಟಿದ್ದೇನೆ. ದಾಖಲೆಗಳ ಸತ್ಯಾಸತ್ಯತೆಯ ಪರಿಶೀಲನೆ ಆಗುತ್ತಿದೆ. ಇದೇ 15ರೊಳಗೆ ಅವುಗಳನ್ನು ತನಿಖೆಗಾಗಿ ಸೂಕ್ತ ಸಂಸ್ಥೆಗೆ ಒಪ್ಪಿಸಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿಗೆ ಸಂಬಂಧಿಸಿದಂತೆ 200 ಕೋಟಿ ಗೂ. ಹೆಚ್ಚು ಹಣವನ್ನು ಅತಿಥಿ ಗಣ್ಯರ ಉಪಚಾರಕ್ಕೆ ಬಳಸಿರುವುದು ಕಂಡು ಬಂದಿದೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದರು. 

ರೀಡೂ ಪ್ರಕರಣದಲ್ಲಿ ಸಿದ್ದರಾಮಯ್ಯ ಬಚಾವ್ ಆಗಿರಬಹುದು. ಆದರೆ, ರೀಡೂ ಸಮಯದಲ್ಲಿ ಬಿಡಿಎದಲ್ಲಿ ನಡೆದ ಅಕ್ರಮಗಳ ದಾಖಲೆಗಳ ಸಹಿತ ನಿಮ್ಮ ಮುಂದೆ ಬರಲಿದ್ದೇನೆ. ಕೆ.ಕೆ.ಗೆಸ್ಟ್ ಹೌಸ್‍ನಲ್ಲಿ ತಂಗುವ ಅತಿಥಿಗಳ ವಾಹನ, ವಾಸ್ತವ್ಯಕ್ಕೆ ಸಂಬಂಧಿಸಿದ ಹಗರಣ ಇದರ ಹಲವು ಪಟ್ಟುಗಳಷ್ಟಿದೆ ಎಂದು ರಮೇಶ್ ದೂರಿದರು. 

ಹಾಸಿಗೆ, ದಿಂಬು, ಇಂದಿರಾ ಕ್ಯಾಂಟೀನ್ ವಿಚಾರದಲ್ಲೂ ಅವ್ಯವಹಾರ ಆಗಿದೆ. ಪ್ರಕರಣ ಸಿಐಡಿಗೆ ಒಪ್ಪಿಸಲು ಮುಖ್ಯಮಂತ್ರಿಗೆ ಕೋರಿದ್ದೇನೆ. ಅಧಿಕಾರಿಗಳು, ನೌಕರರ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಗುರುವಾರ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲಿದ್ದೇನೆ ಎಂದು ಅವರು ತಿಳಿಸಿದರು. 

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಪಕ್ಷವು ತೀವ್ರ ಕ್ರಮ ಕೈಗೊಳ್ಳಲಿದೆ. ಅವರು ತಮ್ಮ ಪದವಿಗೆ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷವೂ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

Similar News