×
Ad

ಭಾರತ ದೇಶದ ಮಾರುಕಟ್ಟೆ ದೊಡ್ಡದಾಗಿದೆ: ಜೆಕೋಮಿ ಸಿಇಒ ಸರ್ವೋತ್ತಮ ಪೇಜಾವರ್

Update: 2023-03-06 19:47 IST

ಮಂಗಳೂರು: ಉದ್ಯಮಶೀಲತೆಯಲ್ಲಿ ಉನ್ನತ ಮನಸ್ಥಿತಿಯನ್ನು ಬೆಳೆಸುವುದರಿಂದ ವ್ಯವಹಾರದಲ್ಲಿ ಏಳಿಗೆಯನ್ನು ಪಡೆಯಲು ಸಹಾಕಾರಿಯಾಗುವುದೆಂದು ಎಂದು ಬೆಂಗಳೂರಿನ ಜೆಕೋಮಿ ಸಂಸ್ಥಾಪಕ ಮತ್ತು ಸಿಇಒ ಸರ್ವೋತ್ತಮ ಪೇಜಾವರ್ ಅಭಿಪ್ರಾಯಪಟ್ಟರು.

ಅವರು ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ಹಾಗೂ ನಿಟ್ಟೆಯ ಅಟಲ್ ಇನ್‌ಕ್ಯುಬೇಶನ್ ಸೆಂಟರ್ (ಎಐಸಿ ನಿಟ್ಟೆ) ಸಂಯುಕ್ತ ಆಶ್ರಯದಲ್ಲಿ ಉದ್ಯಮ ಶೀಲತೆಗೆ ಉತ್ತೇಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ದೇಶದ ಮಾರುಕಟ್ಟೆ ದೊಡ್ಡದಾಗಿದೆ ಮತ್ತು ಪ್ರಪಂಚದ ಎಲ್ಲಾ ದೇಶಗಳಿಗೆ ಭಾರತವು ಅಂತಿಮ ತಾಣವಾಗಿದೆ. ಇನ್ನು 25 ವರ್ಷಗಳಲ್ಲಿ ಭಾರತ ಎಲ್ಲಾ ದೇಶಗಳನ್ನು ಸೋಲಿಸಿ ನಂ.೧ ಆಗಲಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳು ಹುಟ್ಟಿಕೊಳ್ಳುತ್ತಿದೆ. ಈಗಿನ ಕಾಲಘಟ್ಟದಲ್ಲಿ ಎಲ್ಲವೂ ಲಭ್ಯವಿದೆ. ನೀವು ನಿಮ್ಮನ್ನು ಅನ್‌ಲಾಕ್ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್ ವಿಟ್ಟಲ್‌ದಾಸ್ ಲೀಲಾಧರ್ ಭಾಗವಹಿಸಿದ್ದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಎಐಸಿ ನಿಟ್ಟೆ ಇನ್‌ಕ್ಯುಬೇಷನ್ ಸೆಂಟರ್‌ನ ಸಿ.ಇ.ಒ ಡಾ.ಎ.ಪಿ.ಆಚಾರ್ ಅವರು ‘ಮಂಗಳೂರಿನಲ್ಲಿ ವಾಣಿಜ್ಯೋದ್ಯಮ ಅಭಿವೃದ್ಧಿಗಾಗಿ ರಸ್ತೆ ನಕ್ಷೆ’ ಎಂಬ ವಿಷಯದ ಬಗ್ಗೆ ಮೊದಲ ಅಧಿವೇಶನಯನ್ನು ನಡೆಸಿದರು. ಈ ಮೊದಲ ಅಧಿವೇಶನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜಿ.ಎಂ. ರತೀಶ್. ಆರ್, ಮಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಎ.ಎಂ.ಖಾನ್ ಹಾಗೂ ಕೆನರಾ ಚೇಂಬರ್‌ನ  ಅಧ್ಯಕ್ಷ ಎಂ.ಗಣೇಶ್ ಕಾಮತ್ ಭಾಗವಹಿಸಿದ್ದರು.

ಎಂಎಸ್‌ಎನ್‌ಐಎಂನ ಸಹಾಯಕ ಪ್ರಾಧ್ಯಾಪಕಿ ನಂದಿತಾ ಸುನಿಲ್ ‘ಉದ್ಯಮಶೀಲತೆಯ ಅತ್ಯುತ್ತಮ ಅಭ್ಯಾಸಗಳು-ಅನುಭವ ಹಂಚಿಕೆ’ ಎಂಬ ವಿಷಯದ ಬಗ್ಗೆ ೨ನೇ ಅಧಿವೇಶನ ನಡೆಸಿದರು. ಝೆಕಾಮಿಯ ಸರ್ವೋತ್ತಮ ಪೇಜಾವರ, ಅಜಿತ್ ಎಂಟರ್‌ಪ್ರೈಸಸ್‌ನ ಅಜಿತ್ ಕಾಮತ್ ಮತ್ತು ಜೂಸ್ ಬೋಟಲ್‌ನ ಪ್ರೀತಿ ಗಣೇಶ್ ನಾಯಕ್ ಭಾಗವಹಿಸಿದರು.

ನಿರ್ಮಲಾ ಟ್ರಾವೆಲ್ಸ್‌ನ ಮುಖ್ಯಸ್ಥೆ ವತಿಕಾ ಪೈ  ‘ಮಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ಗಳಿಗಾಗಿ ವಿಕಾಸಗೊಳ್ಳುತ್ತಿರುವ ಪರಿಸರ ವ್ಯವಸ್ಥೆಗಳು’ ಎಂಬ ವಿಷಯದ ಬಗ್ಗೆ ೩ನೇ ಅಧಿವೇಶನವನ್ನು ನಡೆಸಿದರು. ಕೆ.ಡಿ.ಇ.ಎಂನ ಶೈಲಜಾ ರಾವ್, ಸಿ.ಐ.ಐನ ಮೊಹಮ್ಮದ್ ಹನೀಫ್ ಮತ್ತು ಕರ್ನಾಟಕ ಇಂಡಸ್ಟ್ರೀಸ್ ಅಸೋಸಿಯೇಶನ್‌ನ ಆತ್ಮಿಕಾ ಅಮೀನ್ ಭಾಗವಹಿಸಿದರು.

ಎಂ.ಎಸ್.ಎನ್.ಐ.ಎಂ ನ ನಿರ್ದೇಶಕಿ ಡಾ.ಮೊಲ್ಲಿ ಎಸ್.ಚೌಧುರಿ ‘ಮಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಅವಕಾಶಗಳು ಮತ್ತು ಬೆಂಬಲ’ ಎಂಬ ವಿಷಯದ ಬಗ್ಗೆ ೪ನೇ ಅಧಿವೇಶನವನ್ನು ನಡೆಸಿದರು. ಮಣಿಪಾಲ-ಕರ್ನಾಟಕ ಸರಕಾರ ಬಯೋ ಇನ್‌ಕ್ಯುಬೇಟರ್‌ನ ಸಿ.ಇ.ಒ ಡಾ.ಮನೇಶ್ ಥಾಮಸ್, ಮಣಿಪಾಲ್ ವಿವ್ವಿದ್ಯಾಲಯದ ಟೆಕ್ನಾಲಜಿ ಬ್ಯುಸಿನೆಸ್ ಇನ್ಕ್ಯುಬೇಟರ್‌ನ ಸಿ.ಇ.ಒ ಶ್ರೀಹರಿ ಉಪಾಧ್ಯಾಯ, ನಿಟ್ಟೆಯ ಎಐಸಿಯ ಸಿಇಒ ಡಾ.ಎ.ಪಿ.ಆಚಾರ್ ಮತ್ತು ಸಹ್ಯಾದ್ರಿ ಇನ್‌ಕ್ಯುಬೇಶನ್ ಸೆಂಟರ್‌ನ ಜಾನ್ಸನ್ ಟೆಲ್ಲಿಸ್ ಭಾಗವಹಿಸಿದ್ದರು.

ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್.ಚೌಧುರಿ ಸ್ವಾಗತಿಸಿದರು. ನಂದಿತಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ರೀಮಾ ಆಗ್ನೆಸ್ ಫ್ರಾಂಕ್ ವಂದಿಸಿದರು.

Similar News