ಕಾನೂನು ಸುವ್ಯವಸ್ಥೆ, ಮಹಿಳಾ ಸುರಕ್ಷತೆ ಹಾಗೂ ಸಂಚಾರ ನಿರ್ವಹಣೆಗೆ ಆದ್ಯತೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು ನಗರದಲ್ಲಿ ನಾಲ್ಕು ನೂತನ ಸಂಚಾರ ಪೊಲೀಸ್ ಠಾಣೆಗಳ ಲೋಕಾರ್ಪಣೆ

Update: 2023-03-07 15:04 GMT

ಬೆಂಗಳೂರು, ಮಾ.7: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ, ಮಹಿಳಾ ಸುರಕ್ಷತೆ ಹಾಗೂ ಸಂಚಾರ ನಿರ್ವಹಣೆಗೆ ಸರಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಬೆಳ್ಳಂದೂರು, ತಲಘಟ್ಟಪುರ, ಮಹದೇವಪುರ ಹಾಗೂ ಹೆಣ್ಣೂರು ನೂತನ ಸಂಚಾರ ಪೊಲೀಸ್ ಠಾಣೆಗಳನ್ನು ಲೋಕಾರ್ಪಣೆ ಮಾಡಿ ಕೆ.ಆರ್.ಪುರ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ವರ್ಷ ನಾಲ್ಕು ಪೊಲೀಸ್ ಠಾಣೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಈ ವರ್ಷ 6 ಮಹಿಳಾ ಪೊಲೀಸ್ ಠಾಣೆ, 5 ಸಂಚಾರ ಪೊಲೀಸ್ ಠಾಣೆ ಹಾಗೂ 9 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ವಾಹನಗಳ ಸಂಖ್ಯೆ 1.28 ಕೋಟಿ ಇದೆ. ಮುಂದಿನ 5 ವರ್ಷಗಳಲ್ಲಿ ವಾಹನಗಳ ಸಂಖ್ಯೆ ಜನಸಂಖ್ಯೆ ಮೀರಿಸಬಹುದು. ಇಲ್ಲಿನ ಸಂಚಾರ ಸಮಸ್ಯೆ ಬಗೆಹರಿಸಲು ಡಾ.ಎಂ.ಎ.ಸಲೀಂ ಅವರನ್ನು ಸಂಚಾರ ವಿಭಾಗದ ವಿಶೇಷ ಆಯುಕ್ತರನ್ನಾಗಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಸಿಗ್ನಲ್ ವ್ಯವಸ್ಥೆ ಸರಿ ಮಾಡುತ್ತಿದ್ದೇವೆ. 7 ಸಾವಿರ ಸಿಸಿ ಕ್ಯಾಮರಾಗಳನ್ನು ಸೇಫ್ ಸಿಟಿ ಯೋಜನೆಯಡಿ ಅಳವಡಿಸುತ್ತಿದ್ದೇವೆ. ಮೆಟ್ರೋ ವಿಸ್ತರಣೆ, ಪೆರಿಫೆರಲ್ ವರ್ತುಲ ರಸ್ತೆ ನಿರ್ಮಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮೂರ್ನಾಲ್ಕು ವರ್ಷಗಳ ಹಿಂದೆ 1 ಲಕ್ಷ ಪೊಲೀಸ್ ಹುದ್ದೆಗಳ ಪೈಕಿ 35 ಸಾವಿರ ಹುದ್ದೆಗಳು ಖಾಲಿ ಇತ್ತು. ಇವತ್ತು ಖಾಲಿ ಹುದ್ದೆಗಳ ಪ್ರಮಾಣ 12 ಸಾವಿರಕ್ಕೆ ಇಳಿದಿದೆ. ಇನ್ನೂ 5 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದ್ದೇವೆ. ನಮ್ಮ ಅವಧಿಯಲ್ಲಿ ಒಟ್ಟು 16,811 ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದರು.

10 ಸಾವಿರ ವಸತಿಗೃಹಗಳು ನಿರ್ಮಿಸಿ ಹಸ್ತಾಂತರ ಮಾಡಿದ್ದೇವೆ. 200 ಕೋಟಿ ರೂ.ವೆಚ್ಚದಲ್ಲಿ 117 ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಿದ್ದೇವೆ. 410 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಹೊಸ ಜೈಲುಗಳನ್ನು ನಿರ್ಮಿಸುತ್ತಿದ್ದೇವೆ. ಕಾರಾಗೃಹ ಅಭಿವೃದ್ಧಿ ಮಂಡಳಿ ರಚನೆ ಮಾಡಿದ್ದೇವೆ‌ ಎಂದು ಅವರು ಹೇಳಿದರು.

31 ಕೋಟಿ ರೂ.ವೆಚ್ಚದಲ್ಲಿ 100 ಮೀಟರ್ ಎತ್ತರದ ಲ್ಯಾಡರ್ ಅನ್ನು ಅಗ್ನಿಶಾಮಕ ದಳಕ್ಕೆ ಖರೀದಿ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಎಫ್.ಎಸ್.ಎಲ್.ವಿವಿ ಉದ್ಘಾಟಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಮಾತನಾಡಿ, ಕೆ.ಆರ್.ಪುರ ಕ್ಷೇತ್ರದಲ್ಲಿ ಕೊತ್ತನೂರು, ವಿಜಿನಾಪುರ ಪೊಲೀಸ್ ಠಾಣೆ, ಕೆ.ಆರ್.ಪುರ ನೂತನ ಸಂಚಾರ ಪೊಲೀಸ್ ಠಾಣೆ ನಿರ್ಮಿಸಿದ್ದೇವೆ. ಇವತ್ತು ಹೆಣ್ಣೂರು ಸಂಚಾರ ಪೊಲೀಸ್ ಠಾಣೆ ಉದ್ಘಾಟಿಸಲಾಗಿದೆ ಎಂದರು.

ಕೆಲವೆಡೆ ಸಿಗ್ನಲ್ ಗಳ ಅಳವಡಿಕೆ ಕುರಿತು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಹೆಣ್ಣೂರು ಸಂಚಾರ ಪೊಲೀಸ್ ಠಾಣೆಗೆ ಕೃಷ್ಣ ಮೂರ್ತಿ ಎಂಬವರು ಕಟ್ಟಡ ನೀಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಂ, ಪೋಲಿಸ್ ಅಧಿಕಾರಿಗಳಾದ ಚಂದ್ರಶೇಖರ್, ಸಂದೀಪ್ ಪಾಟೀಲ್, ಅನುಚೇತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News