ಕಾಶ್ಮೀರ: ಸೇನೆಯ ಗುರಿ ತಪ್ಪದಿರಲಿ

Update: 2023-03-08 04:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಬಿಂಬಿಸಿ ಮೂವರು ಕಾಶ್ಮೀರಿಗಳನ್ನು ಬರ್ಬರವಾಗಿ ಕೊಂದ ಪ್ರಕರಣದ ವಿಚಾರಣೆ ಕೊನೆಗೂ ಮುಗಿದು ತೀರ್ಪು ಹೊರ ಬಿದ್ದಿದೆ. ಕ್ಯಾಪ್ಟನ್ ಭೂಪೇಂದ್ರ ಸಿಂಗ್‌ನ ಆರೋಪ ಸಾಬೀತಾಗಿದ್ದು, ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. 2020ರಲ್ಲಿ ಅಬ್ರಾರ್ ಅಹ್ಮದ್, ಇಮ್ತಿಯಾಝ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್ ಎಂಬವರನ್ನು ಈತ ಗುಂಡು ಹಾರಿಸಿ ಕೊಂದಿದ್ದ. ಬಳಿಕ, 'ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಉಗ್ರರನ್ನು ಕೊಂದಿರುವುದಾಗಿ' ಹೇಳಿಕೆ ನೀಡಿದ್ದ. ಕುಟುಂಬಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ, ಉಗ್ರರ ದಮನದ ಹೆಸರಿನಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಕಗ್ಗೊಲೆಯ ಇನ್ನೊಂದು ಪ್ರಕರಣ ಬೆಳಕಿಗೆ ಬಂತು. ಕೊಲೆಗೈಯಲ್ಪಪಟ್ಟ ಮೂವರು ಬಡ ಕಾರ್ಮಿಕರಾಗಿದ್ದು, ಅವರಿಗೂ ಉಗ್ರರಿಗೂ ಯಾವ ಸಂಬಂಧವೂ ಇಲ್ಲ ಎನ್ನುವ ಸತ್ಯ ಪೊಲೀಸರ ತನಿಖೆಯಿಂದ ಹೊರ ಬಿತ್ತು. ಆರೋಪಿಗೇನೋ ಶಿಕ್ಷೆಯಾಯಿತು. ಆದರೆ ಈತನಿಂದ ಕಾಶ್ಮೀರದ ಎದೆಗೆ ಬಿದ್ದ ಗುಂಡಿನ ಗಾಯ ಒಣಗುವುದು ಮಾತ್ರ ಅಷ್ಟು ಸುಲಭವಿಲ್ಲ. ಈ ಘಟನೆಯ ಮೂಲಕ ಕಾಶ್ಮೀರ ಸೇನೆಯ ಕೈಯಲ್ಲಿ ಎಷ್ಟರಮಟ್ಟಿಗೆ ಸುಭದ್ರವಾಗಿದೆ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು, ಅದರ ರಾಜ್ಯದ ಸ್ಥಾನಮಾನವನ್ನೂ ಇಲ್ಲವಾಗಿಸಿ ಸಂಪೂರ್ಣ ಸೇನೆಯ ನಿಯಂತ್ರಣಕ್ಕೆ ಒಪ್ಪಿಸಿದ ದಿನದಿಂದ ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ವಶವಾಗಿದೆ ಎಂದು ನಾವೆಲ್ಲರೂ ನಂಬಿದ್ದೇವೆ. ಸೇನೆಯ ಕೋವಿಯ ಮೊನೆಯಿಂದ ನಿಯಂತ್ರಿಸಲ್ಪಡುತ್ತಿರುವ ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಎಲ್ಲವೂ ಚೆನ್ನಾಗಿದ್ದರೆ 'ಕಾಶ್ಮೀರದಲ್ಲಿ ನಿಲ್ಲುವುದಕ್ಕೆ ಪಂಡಿತರೇಕೆ ಅಂಜುತ್ತಿದ್ದಾರೆ? ಅವರೇಕೆ ಕಚೇರಿಗಳಲ್ಲಿ ಕೆಲಸ ಮಾಡದೇ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ?' ಎನ್ನುವ ಪ್ರಶ್ನೆಗೆ ಉತ್ತರಿಸಲು ಸರಕಾರ ವಿಫಲವಾಗಿದೆ. ಕಳೆದೆರಡು ವರ್ಷಗಳಿಂದ ಕಾಶ್ಮೀರಿ ಪಂಡಿತರು ಹೆಚ್ಚು ಜೀವಭಯದ ಜೊತೆಗೆ ಬದುಕುತ್ತಿದ್ದಾರೆ. 'ಕಾಶ್ಮೀರ್ ಫೈಲ್ಸ್' ಸಿನೆಮಾದ ಮೂಲಕ ಸರಕಾರ ಕಾಶ್ಮೀರದಲ್ಲಿರುವ ಹಿಂದು-ಮುಸ್ಲಿಮ್ ನಡುವಿನ ಬಿರುಕನ್ನು ಇನ್ನಷ್ಟು ಆಳಕ್ಕಿಳಿಸಿತು. ಸರಕಾರ ಪ್ರಾಯೋಜಿತ ಕಾಶ್ಮೀರ್ ಫೈಲ್ಸ್ ಸಿನೆಮಾದಿಂದ ಪಂಡಿತರ ಸಮಸ್ಯೆ ಇನ್ನಷ್ಟು ಹೆಚ್ಚಿತು. ಕಾಶ್ಮೀರಿಗಳ ಪಾಲಿಗೆ ಉಗ್ರರಷ್ಟೇ ಸೇನಾಧಿಕಾರಿಗಳೂ ಕೂಡ ಹೇಗೆ ಭಯಾನಕವಾಗಬಲ್ಲರು ಎನ್ನುವ ಅಂಶವನ್ನು ಇದೀಗ ಶೋಪಿಯಾನ್ ಎನ್‌ಕೌಂಟರ್ ಹೇಳುತ್ತಿದೆ. ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸುವ ಉಗ್ರರ ಪ್ರಯತ್ನವನ್ನು ತಡೆಯಬಹುದು.

ಆದರೆ ನಮ್ಮದೇ ಸೇನೆಯ ಕೆಲವು ಅಧಿಕಾರಿಗಳು ಎಸಗುತ್ತಿರುವ ದೌರ್ಜನ್ಯಗಳಿಂದ ಕಾಶ್ಮೀರವನ್ನು ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಕಾಶ್ಮೀರಕ್ಕೆ ಉಗ್ರರು ಮಾಡುತ್ತಿರುವ ಹಾನಿಗಿಂತಲೂ ಇದು ಗಂಭೀರವಾದುದು. ಯಾಕೆಂದರೆ, ಉಗ್ರರಿರುವುದೇ ಹಿಂಸಾಚಾರಕ್ಕಾಗಿ. ಆ ಹಿಂಸೆಯ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ನಮ್ಮದೇ ಸೇನೆಯೊಳಗಿರುವ ಕೆಲವು ಅಧಿಕಾರಿಗಳು ಕಾಶ್ಮೀರದಲ್ಲಿ ನಡೆಸುತ್ತಿರುವ ಹಿಂಸೆಯನ್ನು ನಾವು ಅರ್ಥಮಾಡಿಕೊಳ್ಳುವುದು ಹೇಗೆ? ಉಗ್ರರಿಂದ ಕಾಶ್ಮೀರದ ಜನರಿಗೆ ರಕ್ಷಣೆಯನ್ನು ನೀಡಬೇಕಾಗಿರುವ ಸೇನೆಯೇ, ಅಲ್ಲಿನ ನಾಗರಿಕರನ್ನು ಬೇರೆ ಬೇರೆ ಕಾರಣಗಳಿಗಾಗಿ ಕೊಂದು ಹಾಕಿದರೆ ಕಾಶ್ಮೀರಿಗಳು ಯಾರನ್ನು ನಂಬಬೇಕು? ಕಾಶ್ಮೀರಿಗಳು ಒಂದೆಡೆ ಉಗ್ರರಿಗೆ, ಇನ್ನೊಂದೆಡೆ ಸೇನೆಗೆ ಹೆದರುತ್ತಾ ಬಾಳಬೇಕಾದ ಸ್ಥಿತಿಯಿದೆ. ಉಗ್ರರ ಕೈಯಲ್ಲಿ ನಾಗರಿಕರು ಹತರಾದರೆ ಕನಿಷ್ಠ 'ನಾಗರಿಕರು' ಎನ್ನುವ ಮಾನ್ಯತೆಯಾದರೂ ಸಂತ್ರಸ್ತರಿಗೆ ದೊರಕುತ್ತದೆ. ಇದೇ ಸಂದರ್ಭದಲ್ಲಿ ಸೇನೆಯ ಬೇಜವಾಬ್ದಾರಿಗೆ ಬಲಿಯಾದರೆ, ಆ ನಾಗರಿಕರ ತಲೆಗೆ 'ಉಗ್ರರು' ಎನ್ನುವ ಹಣೆಪಟ್ಟಿ ಕಟ್ಟಿ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ.

ಶೋಪಿಯಾನ್‌ನ ನಕಲಿ ಎನ್‌ಕೌಂಟರ್ ಬೆಳಕಿಗೆ ಬರುವವರೆಗೂ ಸತ್ತವರನ್ನು ಮಾಧ್ಯಮಗಳು 'ಉಗ್ರರು' ಎಂದೇ ಗುರುತಿಸಿದ್ದವು. ಅವರನ್ನು ಕೊಂದ ಸೇನಾಧಿಕಾರಿ 'ದೇಶಭಕ್ತ'ನಾಗಿ ಬಿಂಬಿತನಾಗಿದ್ದ. ಎನ್‌ಕೌಂಟರ್ ವಿರುದ್ಧ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಅದರ ತನಿಖೆ ನಡೆದು ಸತ್ಯಾಸತ್ಯತೆ ಬೆಳಕಿಗೆ ಬಂತು. ಕಾಶ್ಮೀರದ ಜನರಿಗೆ ಇಂತಹ ನಕಲಿ ಎನ್‌ಕೌಂಟರ್ ಹೊಸತೇನೂ ಅಲ್ಲ. ಇಂತಹ ಹತ್ತು ಹಲವು ಸಂಶಯಾಸ್ಪದ ಎನ್‌ಕೌಂಟರ್‌ಗಳು ಕಾಶ್ಮೀರದಲ್ಲಿ ನಡೆದಿವೆ. ಒಮ್ಮೆ ಸೇನೆಯಿಂದ 'ಉಗ್ರರು' ಎನ್ನುವ ಹೇಳಿಕೆ ಹೊರಬಿದ್ದರೆ ಆ ಸಾವಿನ ಸತ್ಯಾಸತ್ಯತೆ ಯಾರಿಗೂ ಬೇಡವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಪ್ರಶಸ್ತಿ, ಭಡ್ತಿ, ಪ್ರಚಾರಕ್ಕಾಗಿಯೂ ಸೇನೆಯ ಕೆಲವು ಅಧಿಕಾರಿಗಳಿಂದ 'ಎನ್‌ಕೌಂಟರ್'ಗಳು ನಡೆಯುತ್ತವೆ. ಕಾಶ್ಮೀರಿಗಳಲ್ಲಿ ಭಾರತದ ಕುರಿತಂತೆ ಇರುವ ಅಸಹನೆಗೆ ಸೇನೆಯ ಕೆಲವು ಅಧಿಕಾರಿಗಳು ನಡೆಸಿರುವ ಇಂತಹ ದೌರ್ಜನ್ಯಗಳು ಕೂಡ ಕಾರಣ. ಸೇನೆ ನಾಗರಿಕರ ಮೇಲೆ ನಡೆಸುವ ದೌರ್ಜನ್ಯಗಳು ಪರೋಕ್ಷವಾಗಿ ಉಗ್ರರಿಗೆ ನೆರವಾಗುತ್ತವೆ. ಸೇನೆಯ ದೌರ್ಜನ್ಯಗಳನ್ನು ಮುಂದಿಟ್ಟುಕೊಂಡೇ ಉಗ್ರರು ಸ್ಥಳೀಯರ ಅನುಕಂಪವನ್ನು ಗಿಟ್ಟಿಸಲು ಯತ್ನಿಸುತ್ತಾರೆ.

ಸೇನೆಯಿಂದ ಕಾಶ್ಮೀರಿಗಳನ್ನು ರಕ್ಷಿಸುವವರಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ. ಉಗ್ರವಾದಿಗಳಲ್ಲಿ ಎಲ್ಲರೂ ಪ್ರತ್ಯೇಕ ಕಾಶ್ಮೀರಕ್ಕಾಗಿಯೇ ಹೋರಾಡುತ್ತಿರುವವರು ಎಂದು ಭಾವಿಸಬೇಕಾಗಿಲ್ಲ. ಸೇನೆಯಿಂದ ನಿರಂತರ ದೌರ್ಜನ್ಯಕ್ಕೊಳಗಾಗಿ ಹತಾಶೆಯಿಂದ ಉಗ್ರವಾದಿಗಳ ತಂಡವನ್ನು ಸೇರಿದವರೂ ಇದ್ದಾರೆ. ಸೇನೆ ಕಾಶ್ಮೀರದಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಅವರು ನಡೆಸುವ ನೇರ ಅಥವಾ ಪರೋಕ್ಷ ದೌರ್ಜನ್ಯ ಕಾಶ್ಮೀರದ ಜನರಲ್ಲಿ ಭಾರತದ ಕುರಿತಂತೆ ಅಸಹನೆಯನ್ನು ಹೆಚ್ಚಿಸುವ ಸಾಧ್ಯತೆಗಳಿರುತ್ತವೆ. ಆದುದರಿಂದಲೇ ನಾವು ಸೇನೆಯಿಂದ ನಡೆಯುವ ಇಂತಹ ಅಪರಾಧಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಶ್ಮೀರವನ್ನು ಭಾರತದೊಂದಿಗೆ ಬೆಸೆಯುವ ಪ್ರಯತ್ನಗಳಿಗೆ ಇದು ದೊಡ್ಡ ಮಟ್ಟದ ಹಾನಿಯನ್ನು ಮಾಡಬಹುದು. ಕಾಶ್ಮೀರದಲ್ಲಿ ನಡೆದ ಇಂತಹ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ಇನ್ನಷ್ಟು ತನಿಖೆಗಳು ನಡೆಯಬೇಕು.

ಯಾವೆಲ್ಲ ಎನ್‌ಕೌಂಟರ್‌ಗಳ ಬಗ್ಗೆ ಸಾರ್ವಜನಿಕರು ತಮ್ಮ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆಯೋ ಅವುಗಳೆಲ್ಲವನ್ನೂ ಮರು ತನಿಖೆಯಾಗಬೇಕು. ನಾಪತ್ತೆಯಾದ ತಮ್ಮ ಮಕ್ಕಳಿಗಾಗಿ ಕಾಯುತ್ತಿರುವ ಕಾಶ್ಮೀರದ ತಾಯಂದಿರಿಗೆ ನ್ಯಾಯ ಸಿಗಬೇಕು. ಸೇನೆಗೆ ವಿಶೇಷಾಧಿಕಾರವನ್ನು ನೀಡಿರುವುದು ಉಗ್ರರನ್ನು ದಮನಿಸುವುದಕ್ಕೇ ಹೊರತು, ನಾಗರಿಕರ ಮೇಲೆ ದೌರ್ಜನ್ಯವೆಸಗಿ ಅವರನ್ನು ಉಗ್ರರನ್ನಾಗಿ ಪರಿವರ್ತಿಸುವುದಕ್ಕಲ್ಲ. ವಿಶೇಷಾಧಿಕಾರವನ್ನು ದುರ್ಬಳಕೆ ಮಾಡುವ ಸೇನಾ ಅಧಿಕಾರಿಗೂ, ಉಗ್ರರಿಗೂ ದೊಡ್ಡ ಅಂತರವಿಲ್ಲ. ಕಾಶ್ಮೀರದ ಜನರನ್ನು ನಮ್ಮವರನ್ನಾಗಿಸದೆ, ಕಾಶ್ಮೀರವನ್ನು ನಮ್ಮದನ್ನಾಗಿಸುವುದು ಸುಲಭವಿಲ್ಲ.

ಕಾಶ್ಮೀರವೆಂದರೆ ಭೌಗೋಳಿಕ ಭಾಗವಷ್ಟೇ ಅಲ್ಲ. ಅಲ್ಲಿ ತಲೆ ತಲಾಂತರದಿಂದ ಬದುಕುತ್ತಿರುವ ಜನರೂ ಇದ್ದಾರೆ. ಕೋವಿಯಿಂದ ಬೆದರಿಸಿ ಅವರನ್ನು ನಮ್ಮವರನ್ನಾಗಿಸಲು ಸಾಧ್ಯವಿಲ್ಲ. ಒಂದು ರಾಜ್ಯವನ್ನು ಬಹುಕಾಲ ಕೋವಿಯ ಮೊನೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಕೇಂದ್ರ ಸರಕಾರವೂ ಅರ್ಥಮಾಡಿಕೊಳ್ಳಬೇಕು. ಸೇನೆಯ ಮೇಲಿರುವ ಕಾಶ್ಮೀರಿಗಳ ಅಸಮಾಧಾನ ಇಲ್ಲವಾಗಬೇಕಾದರೆ, ಕನಿಷ್ಠ ಸೇನೆಯಿಂದ ದೌರ್ಜನ್ಯಕ್ಕೀಡಾದ ಕುಟುಂಬಗಳಿಗೆ ನ್ಯಾಯ ದೊರಕಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು. ಅಲ್ಲಿ ಪ್ರಜಾಸತ್ತೆಯನ್ನು ಮರುಸ್ಥಾಪಿಸಿ, ಹಂತಹಂತವಾಗಿ ಸೇನೆಯನ್ನು ಹಿಂದೆಗೆದು ತಳಸ್ತರದಿಂದ ಕಾಶ್ಮೀರದ ಅಭಿವೃದ್ಧಿಗೆ ಸರಕಾರ ಆದ್ಯತೆಯನ್ನು ನೀಡಬೇಕು.

Similar News