×
Ad

ರಾಜ್ಯದ ಹಾಲು ಉತ್ಪಾದಕ ರೈತರು, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭ್ರಷ್ಟ ಬಿಜೆಪಿಯೇ ನೇರ ಕಾರಣ: ಸಿದ್ದರಾಮಯ್ಯ

''ಆರೆಸ್ಸೆಸ್ಸಿಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ''

Update: 2023-03-08 15:29 IST

ಬೆಂಗಳೂರು, ಮಾ. 8: ‘ಪ್ರತಿದಿನ 28ಲಕ್ಷ ಲೀ.ಗಳಷ್ಟು ಹಾಲು ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ಪಶುಪಾಲಕರಿಗೆ ಪ್ರತಿದಿನ ಸುಮಾರು 11 ಕೋಟಿ ರೂ.ಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಪ್ರಮುಖ ಸಾಧನ. ಇದಕ್ಕೆ ಯಾರು ಹೊಣೆ? ಕೇಂದ್ರ-ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಮತ್ತು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಗಳ ಹಾದಿ ತಪ್ಪಿದ ಅಡ್ಡ ಕಸುಬಿ ನೀತಿಗಳೆ ನೇರ ಕಾರಣ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಮಾಧ್ಯಮ ಪ್ರಕಟನೆ ನೀಡಿರುವ ಅವರು, ರಾಜ್ಯದ ರೈತರು ಹಸುಗಳನ್ನು ವ್ಯಾಪಕವಾಗಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಚರ್ಮಗಂಟು ಕಾಯಿಲೆ ಲಕ್ಷಾಂತರ ಜಾನುವಾರುಗಳನ್ನು ರೋಗಗ್ರಸ್ತವಾಗುವಂತೆ ಮಾಡಿದೆ. 32ಸಾವಿರ ಜಾನುವಾರುಗಳು ಈ ರೋಗದಿಂದ ಮರಣ ಹೊಂದಿವೆ. ಗುಜರಾತ್ ಮೂಲದ ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ಕೆಎಂಎಫ್ ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರೈತರಿಗೂ ಸಂಕಷ್ಟ ಬಂದೊದಗಿದೆ. ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ನಂದಿನಿ ಮಳಿಗೆಗಳಲ್ಲಿ ಕಲಬೆರಕೆ ತುಪ್ಪವೂ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ದೂರುತ್ತಿದ್ದಾರೆ. ಜನರಿಗೆ ಉತ್ತಮ ನಂದಿನಿ ತುಪ್ಪ ಸೇರಿದಂತೆ ಗುಣಮಟ್ಟದ ಪದಾರ್ಥಗಳು ಸಿಗುತ್ತಿಲ್ಲ. ಕೊಳ್ಳುವ ಗ್ರಾಹಕರ ಕೈಸುಡುವಷ್ಟು ಮಟ್ಟಿಗೆ ಬೆಲೆಗಳು ಏರಿಕೆಯಾಗಿವೆ ಎಂದು ದೂರಿದ್ದಾರೆ.

‘ಬಿಜೆಪಿಯ ದುಷ್ಟ ಆಡಳಿತದಿಂದಾಗಿ ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಕೆಂಎಂಎಫ್‍ಗೆ ಇಂದು ಈ ಗಂಡಾಂತರ ಬಂದೊದಗಿದೆ. ಕೇಂದ್ರದ ಮೋದಿ ಸರಕಾರ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‍ಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಯಾರಿ ನಡೆಸಿತ್ತು. ರೈತರು ವಿರೋಚಿತ ಪ್ರತಿಭಟಿಸಿದ ಕಾರಣದಿಂದ ತಾತ್ಕಾಲಿಕವಾಗಿ ಮೋದಿ ಸರಕಾರ ಹಿಂದೆ ಸರಿದಿದೆ ಎಂದು ಅವರು ಟೀಕಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಹಾಲನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಹೈನುಗಾರಿಕೆಯ ಚೈತನ್ಯವನ್ನು ನಾಶ ಮಾಡಲು ಮನುವಾದಿ ಶಕ್ತಿಗಳು ಹಾಗೂ ಕಾರ್ಪೊರೇಟ್ ಶಕ್ತಿಗಳು ಒಂದಾಗಿ ಶ್ರಮಿಸುತ್ತಿವೆ.

‘ಸರಕಾರ ಹಾಲು ಉತ್ಪಾದಕರಿಗೆ ನೀಡುವ ಸಹಾಯಧನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಿದೆ. 2017-18ರಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ 1,356 ಕೋಟಿ ರೂ.ಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ, ಬಿಜೆಪಿ ಸರಕಾರ 2020-21ರಲ್ಲಿ 1,186 ಕೋಟಿ ರೂ. ಖರ್ಚು ಮಾಡಿದ್ದರೆ, 2023-24ಕ್ಕೆ ಕೇವಲ 1,200 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಒದಗಿಸಿದ್ದಾರೆ. ಇದಿಷ್ಟೆ ಸಾಕಲ್ಲ ಬಿಜೆಪಿಯವರ ದುರುದ್ದೇಶ ಏನು ಎಂದು ಅರ್ಥ ಮಾಡಿಕೊಳ್ಳಲು. ಸರಕಾರ ತನ್ನ ಪಶುಪಾಲಕ ವಿರೋಧಿ ನೀತಿಗಳಿಂದಾಗಿ ಹಾಲು ಉತ್ಪಾದಕರ ಬದುಕನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಅವರು ದೂರಿದ್ದಾರೆ.

ಜೊತೆಯಲ್ಲಿ ಈ ದುಷ್ಟ ಬಿಜೆಪಿ ಸರಕಾರ ಸರಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರೆಸ್ಸೆಸ್ಸಿನವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಕಾರಣದಿಂದ ಹಳೆ ಮೈಸೂರು ಭಾಗದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ‘ಅಮೃತ್ ಮಹಲ್ ಕಾವಲು’ಗಳೆಂದು ಮೀಸಲಿರಿಸಲಾಗಿತ್ತು. ಇದರಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೆ 23,189 ಎಕರೆಗೂ ಹೆಚ್ಚಿನ ಭೂಮಿಯನ್ನು ಅಮೃತ್ ಮಹಲ್ ಕಾವಲ್ ಎಂದು ಕಾಯ್ದಿರಿಸಿದ್ದ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ಜಮೀನುಗಳ ಮೇಲೆ ಕಣ್ಣು ಹಾಕಿದೆ. ಚಿತ್ರದುರ್ಗದ ಪಶುಪಾಲಕರ ಬೆನ್ನಿಗೆ ಇರಿಯಲು ನಿಂತಿದ್ದು, ಸಾವಿರಗಟ್ಟಲೆ ಎಕರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿದೆ. ಇದು ಅಕ್ಷಮ್ಯ. ಜಾನುವಾರುಗಳ ಸಂರಕ್ಷಣೆ ಮತ್ತು ಅವುಗಳಿಗೆ ಆಹಾರವಿಲ್ಲದಂತೆ ಮಾಡುವುದು ಇವೆರಡೂ ಎಂದಿಗೂ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಆದರೂ ಜನದ್ರೋಹಿ ಬಿಜೆಪಿ ಹುಲ್ಲುಗಾವಲುಗಳನ್ನು ಜನರಿಂದ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಆರೆಸ್ಸೆಸ್ಸಿಗೆ ಸರಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ. ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ಸರಕಾರ ಕೂಡಲೆ ಮಧ್ಯಪ್ರವೇಶಿಸಿ ರೈತರು ಮತ್ತು ಗ್ರಾಹಕರ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆ ಸಶಕ್ತಗೊಳಿಸಬೇಕು. ರೈತರಿಗೆ ಸಂಭವಿಸುತ್ತಿರುವ ನಷ್ಟವನ್ನು ಸರಕಾರ ತುಂಬಿಕೊಡಬೇಕು. ಹಿಂಡಿ ಬೂಸಾ ಸೇರಿ ಎಲ್ಲ ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಿ ರಿಯಾಯಿತಿ ದರದಲ್ಲಿ ಒದಗಿಸಬೇಕು. ಹಿಂಡಿಯ ಮೇಲಿನ ಜಿಎಸ್‍ಟಿ ಕೂಡಲೆ ರದ್ದು ಮಾಡಬೇಕು’

-ಸಿದ್ದರಾಮಯ್ಯ ವಿಪಕ್ಷ ನಾಯಕ

Similar News