ವಿಧಾನಸಭಾ ಚುನಾವಣೆ: ಕುರುಬ ಸಮುದಾಯಕ್ಕೆ 40 ಸೀಟು ಮೀಸಲಿಡಲು ಆಗ್ರಹ

Update: 2023-03-08 11:39 GMT

ಬೆಂಗಳೂರು, ಮಾ.8: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕೀಯ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು  ಕರ್ನಾಟಕ ಪ್ರದೇಶ ಕುರುಬರ ಸಂಘ ಆಗ್ರಹಿಸಿದೆ.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರಭಾರ ಅಧ್ಯಕ್ಷ ಬಿ.ಸುಬ್ರಮಣ್ಯ, ರಾಜ್ಯದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯವಿದ್ದರೂ ಹಲವು ದಶಕಗಳಿಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡದೇ ಸಮಾಜವನ್ನು ಕೇವಲ ಮತದಾನಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂದರು.

ಸಮಾಜದ ಅಭ್ಯರ್ಥಿಗಳು ಗೆಲ್ಲುವ ಕಡೆಗೂ ಟಿಕೆಟ್ ನೀಡದೇ ಇರುವುದು ನಮ್ಮನ್ನು ಜಾಗೃತಗೊಳಿಸಿದೆ. ಆದುದರಿಂದ ಈ ಬಾರಿಯ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಮ್ಮ ಸಮಾಜದ ಕನಿಷ್ಠ 40 ಆಕಾಂಕ್ಷಿಗಳನ್ನ ಗುರುತಿಸಿ ಗೆಲ್ಲುವಂತಹ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು.

ರಾಜ್ಯದಲ್ಲಿ ಪ್ರಬಲ ಜಾತಿಗಳ ಪೈಕಿ ಮೂರನೆ ಸ್ಥಾನದಲ್ಲಿರುವ ಕುರುಬ ಸಮುದಾಯವು ಸುಮಾರು 75 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ರಾಜ್ಯದ 150ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕರಾಗಿದ್ದಾರೆ ಎಂದರು.

ರಾಜ್ಯದ 30 ಜಿಲ್ಲೆಗಳ ಪೈಕಿ, ಎಲ್.ಜಿ.ಹಾವನೂರು ವರದಿಯ ಅಂದಾಜಿನಂತೆ ಕುರುಬ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ರಾಜಕೀಯ ಪಕ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ರಾಜಕೀಯ ನಾಯಕರು ತಮ್ಮ ವರ್ಚಸ್ಸಿನಿಂದಲೇ ಗೆದ್ದುಬಂದವರಾಗಿದ್ದಾರೆ. ಉಳಿದವರು ಗೆಲ್ಲಲು ಶಕ್ತರಾಗಿದ್ದರೂ ಟಿಕೆಟ್ ವಂಚಿತರಾಗಿ ರಾಜಕೀಯವಾಗಿ ಸ್ಥಾನಮಾನ ಕಳೆದುಕೊಳ್ಳುವಂತಾಗಿದೆ. ಕುರುಬ ಸಮಾಜದ ಮತದಾರರು ರಾಜ್ಯಾದ್ಯಂತ ಹರಡಿರುವು ದರಿಂದ 2023ರ ಚುನಾವಣೆಯಲ್ಲಿ ಈ ಹಿಂದಿನಂತೆ ಅನ್ಯಾಯ ಮುಂದುವರಿಯಬಾರದು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 2008ರಲ್ಲಿ ಒಟ್ಟು 6 ಮಂದಿ ಶಾಸಕರಾಗಿದ್ದರು. 2013ರಲ್ಲಿ 14 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ 12 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕಾಂಗ್ರೆಸ್‍ನ 8 ಮಂದಿ, ಒಬ್ಬರು ಬಿಜೆಪಿ ಮತ್ತು ಇಬ್ಬರು ಜೆಡಿಎಸ್‍ನಿಂದ ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ಪಕ್ಷದಿಂದ 11 ಮಂದಿ, ಬಿಜೆಪಿ ಪಕ್ಷದಿಂದ 5 ಮಂದಿಗೆ ಟಿಕೆಟ್ ನೀಡಿದ್ದು, ಅದರಲ್ಲೂ ಕುರುಬರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶ್‍ಮೂರ್ತಿ, ನಿರ್ದೇಶಕ ಕೆ.ಎಂ.ರಾಮಚಂದ್ರಪ್ಪ, ಖಜಾಂಚಿ ದೇವರಾಜ ಸುಬ್ಬರಾಯಪ್ಪ ಸೇರಿದಂತೆ ಪ್ರಮುಖರಿದ್ದರು.

Similar News