2014-15ರಿಂದ ನಿಜಕ್ಕೂ ಭಾರತದ ತಲಾದಾಯ ದ್ವಿಗುಣಗೊಂಡಿದೆಯೇ?: ಇಲ್ಲಿದೆ ಮಾಹಿತಿ

Update: 2023-03-08 14:53 GMT

ಹೊಸದಿಲ್ಲಿ: ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ)ಯು ಫೆ.28ರಂದು ಬಿಡುಗಡೆಗೊಳಿಸಿದ ಅಂಕಿಅಂಶಗಳಂತೆ ಭಾರತದ ರಾಷ್ಟ್ರೀಯ ತಲಾದಾಯವು 2014-15ರಿಂದ ದ್ವಿಗುಣಗೊಂಡಿದೆ. ಆದರೆ ಅದು ಈಗಲೂ ಹಿಂದಿನ ವರ್ಷಗಳಲ್ಲಿ ಕಂಡುಬಂದಿದ್ದ ಬೆಳವಣಿಗೆಗಿಂತ ತುಂಬ ಕೆಳಗೇ ಇದೆ. ಎನ್ಎಸ್ಒ ಪ್ರಕಾರ 2014-15ರಲ್ಲಿ 86,647 ರೂ.ಗಳಿದ್ದ ರಾಷ್ಟ್ರೀಯ ತಲಾದಾಯ (ಪ್ರಸ್ತುತ ಬೆಲೆಗಳಲ್ಲಿ)ವು ಈಗ 1,72,000 ರೂ.ಗಳಷ್ಟಾಗಿದೆ. ಅಂದರೆ ಶೇ.98.5ರಷ್ಟು ಏರಿಕೆಯಾಗಿದೆ ಎಂದು thewire.in ವರದಿ ಮಾಡಿದೆ.

ಆದರೆ ಅದು ಈಗಲೂ 2014-15ರವರೆಗಿನ ಎಂಟು ವರ್ಷಗಳಲ್ಲಿ ಕಂಡುಬಂದಿದ್ದ ಶೇ.157ರಷ್ಟು ಬೆಳವಣಿಗೆಗಿಂತ ತುಂಬ ಕಡಿಮೆಯಾಗಿದೆ. 2006-07ರಲ್ಲಿ 33,717 ರೂ.ಗಳಿದ್ದ ರಾಷ್ಟ್ರೀಯ ತಲಾದಾಯವು 2014-15ರಲ್ಲಿ 86,647 ರೂ.ಗೆ ಏರಿಕೆಯಾಗಿತ್ತು.

ತಲಾದಾಯವು ನಿರ್ದಿಷ್ಟ ವರ್ಷದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ವ್ಯಕ್ತಿಯೋರ್ವ ಗಳಿಸಿದ ಸರಾಸರಿ ಆದಾಯವಾಗಿದೆ. ಪ್ರದೇಶದ ಒಟ್ಟು ಆದಾಯವನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ತಲಾದಾಯವನ್ನು ಲೆಕ್ಕ ಹಾಕಲಾಗುತ್ತದೆ.

ಒಂದು ದೇಶದ ತಲಾದಾಯವು ಏರಿಕೆಯಾಗಿದ್ದರೆ ಇಡೀ ಜನಸಂಖ್ಯೆಯ ಆದಾಯ ಹೆಚ್ಚಾಗಿದೆ ಎಂಬ ಅರ್ಥವಲ್ಲ ಎನ್ನುವುದನ್ನು ಇಲ್ಲಿ ಗಮನಿಸುವುದು ಮುಖ್ಯ. ಈ ಡೇಟಾ ಯಾವಾಗಲೂ ಜೀವನ ಮಟ್ಟದ ನಿಖರವಾದ ಪ್ರಾತಿನಿಧ್ಯವನ್ನು ಒದಗಿಸುವುದಿಲ್ಲ ಮತ್ತು ಅದು ಆದಾಯ ಸಮಾನತೆಯನ್ನೂ ಪರಿಗಣಿಸುವುದಿಲ್ಲ.

2011-12ನ್ನು ಮೂಲವರ್ಷವನ್ನಾಗಿ ಪರಿಗಣಿಸುವ ಸ್ಥಿರ ಬೆಲೆಗಳಲ್ಲಿ 2014-15ರಲ್ಲಿ 72,805 ರೂ.ಗಳಿದ್ದ ತಲಾದಾಯವು 2022-23ರಲ್ಲಿ ಸುಮಾರು ಶೇ.35ರಷ್ಟು,ಅಂದರೆ 98,118 ರೂ.ಗಳಿಗೆ ಏರಿಕೆಯಾಗಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆರ್ಥಿಕ ತಜ್ಞೆ ಜಯತಿ ಘೋಷ್ ಅವರು ತಲಾದಾಯ ದ್ವಿಗುಣಗೊಳ್ಳುವುದರ ಕುರಿತಂತೆ, ‘ನೀವು ಪ್ರಸ್ತುತ ದರಗಳಲ್ಲಿ ಜಿಡಿಪಿಯನ್ನು ನೋಡುತ್ತಿದ್ದೀರಿ, ಆದರೆ ನೀವು ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ ಏರಿಕೆಯು ತುಂಬ ಕಡಿಮೆಯಾಗಿದೆ. ಈ ಏರಿಕೆಯ ಹೆಚ್ಚಿನ ಪಾಲು ಜನಸಂಖ್ಯೆಯ ಅಗ್ರ ಶೇ.10ರಿಂದ ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಸರಾಸರಿ ವೇತನಗಳು ಕುಸಿಯುತ್ತಿವೆ ಮತ್ತು ವಾಸ್ತವದಲ್ಲಿ ಬಹುಶಃ ಇನ್ನೂ ಕಡಿಮೆಯಿರಬಹುದು, ಈ ಆದಾಯ ಹಂಚಿಕೆಯು ಕಳವಳಕಾರಿಯಾಗಿದೆ’ ಎಂದು ಹೇಳಿದರು.

ಅಲ್ಲದೆ, ಈ ಎಲ್ಲ ವರ್ಷಗಳಲ್ಲಿ ಸಂಪತ್ತು ಹೇಗೆ ಹಂಚಿಕೆಗೊಂಡಿದೆ ಎನ್ನುವುದನ್ನು ಎನ್ಎಸ್ಒ ಡೇಟಾ ತೋರಿಸುವುದಿಲ್ಲ, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ಹೆಚ್ಚಾಗಿದೆ ಎಂದು ತೋರಿಸಿರುವ ಅಧ್ಯಯನಗಳಿಗೆ ಸಂಬಂಧಿಸಿದಂತೆ.

ಆಕ್ಸ್ಫಾಮ್ ಇಂಡಿಯಾದ ವರದಿಯಂತೆ 2021ರಲ್ಲಿ ಭಾರತದ ಶೇ.1ರಷ್ಟು ಜನರು ದೇಶದ ಒಟ್ಟು ಸಂಪತ್ತಿನ ಶೇ.40.5ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದರೆ ಶೇ.3ರಷ್ಟು ತಳಸ್ತರದ ಶೇ.50 ಅಥವಾ 70 ಕೋ.ಜನರ ಬಳಿಯಿತ್ತು. ಹೆಚ್ಚುವರಿಯಾಗಿ ಸಾಂಕ್ರಾಮಿಕದ ಸಮಯದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದು, ವಾಸ್ತವದಲ್ಲಿ ಅವರ ಸಂಪತ್ತು ಶೇ.121ರಷ್ಟು ಅಥವಾ ದಿನವೊಂದಕ್ಕೆ 3,608 ಕೋ.ರೂ.ಗಳಷ್ಟು ಏರಿಕೆಯಾಗಿತ್ತು.

ಆದ್ದರಿಂದ ಮೊದಲೇ ಹೇಳಿದಂತೆ,ಒಂದು ದೇಶದ ತಲಾದಾಯ ಹೆಚ್ಚಾದರೆ ಇಡೀ ಜನಸಂಖ್ಯೆಯ ಆದಾಯವೂ ಹೆಚ್ಚಾಗಿದೆ ಎಂದು ಅರ್ಥವಲ್ಲ.

ಬೆಳವಣಿಗೆಯ ವಿಶ್ವಾಸಾರ್ಹ ಸೂಚಕವೇ?
ಈ ಡೇಟಾ ಆರ್ಥಿಕತೆಯ ಬೆಳವಣಿಗೆಗೆ ವಿಶ್ವಾಸಾರ್ಹ ಸೂಚಕವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಜೆಎನ್ಯು ಪ್ರೊಫೆಸರ್ ಅರುಣ್ ಕುಮಾರ್ ಅವರು, ‘ನಿಮ್ಮ ಆದಾಯದ ಮಟ್ಟವು ಸಮಾಜದ ಏಳಿಗೆಯ ಮಟ್ಟವನ್ನು ಸೂಚಿಸುತ್ತದೆ, ಏಕೆಂದರೆ ಸಮಾಜದ ಏಳಿಗೆಯಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ಯಾವ ರೀತಿಯ ಪೌಷ್ಟಿಕತೆ ಹಾಗೂ ಇತರ ಹಲವಾರು ಅಂಶಗಳಿವೆ. ವಿಶಾಲವಾಗಿ, ಮಾನವ ಅಭಿವೃದ್ಧಿ ಸೂಚಕವು ರಾಷ್ಟ್ರೀಯ ಆದಾಯ ಸೂಚಕದ ಜೊತೆಯಲ್ಲಿಯೇ ಸಾಗುತ್ತದೆ ಮತ್ತು ರಾಷ್ಟ್ರೀಯ ಆದಾಯ ಸೂಚಕವು ತಲಾದಾಯವು ಎಷ್ಟು ಎನ್ನುವುದನ್ನು ತೋರಿಸುತ್ತದೆ. ಆದರೆ ಶ್ರೀಮಂತರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಮತ್ತು ಬಡವರಿಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತಿಲ್ಲ ಎಂಬ ವಾಸ್ತವವನ್ನು ಅದು ಮರೆಮಾಚುತ್ತದೆ’ ಎಂದು ಹೇಳಿದರು.

ಹೀಗಾಗಿ ತಲಾದಾಯವು ಕೇವಲ ಸರಾಸರಿಯ ಸೂಚಕವಾಗಿದೆ. ‘ಆದರೆ ಸರಾಸರಿಯು ಸಂಪತ್ತಿನ ಹಂಚಿಕೆಯನ್ನು ಮರೆಮಾಚುತ್ತದೆ ಮತ್ತು ಭಾರತವು ತೀವ್ರ ಅಸಮಾನತೆಯನ್ನು ಹೊಂದಿದೆ. ಆದ್ದರಿಂದ ತಲಾದಾಯವು ಜನಸಂಖ್ಯೆಯ ಕೆಳಗಿನ ಶೇ.60-70ರಷ್ಟು ಜನರಲ್ಲಿ ಏನಾಗುತ್ತಿದೆ ಎನ್ನುವುದರ ಉತ್ತಮ ಸೂಚಕವಲ್ಲ. ಹೀಗಾಗಿ, ತಲಾದಾಯದ ಹೆಚ್ಚಳದ ದರದಲ್ಲಿಯೇ ಕೆಳಗಿನ ಶೇ.60-70 ಜನರೂ ಏಳಿಗೆಯಾಗುತ್ತಿದ್ದಾರೆ ಎಂದು ನಾವು ಹೇಳಲು ಸಾಧ್ಯವಿಲ್ಲ ’ಎಂದರು.

ಕೃಪೆ: thewire.in

Similar News