ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆಗೆ ಚಾಲನೆ: 10 ಸಾವಿರ ಸ್ವಸಹಾಯ ಸಂಘಗಳಿಗೆ ₹100 ಕೋಟಿ ಆನ್ ಲೈನ್ ಮೂಲಕ ಬಿಡುಗಡೆ
ಅರಮನೆ ಮೈದಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಡಗರ
ಬೆಂಗಳೂರು: ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದ 500 ಕೋಟಿ ರೂಪಾಯಿ ವಿಶೇಷ ಸಮುದಾಯ ಬಂಡವಾಳ ನಿಧಿ ಪೈಕಿ ಮೊದಲ ಹಂತದಲ್ಲಿ ರೂ 100 ಕೋಟಿಯನ್ನು ಫಲಾನುವಿಗಳ ಖಾತೆಗೆ ನೇರವಾಗಿ ಬಿಡುಗಡೆ ಮಾಡುವ ಮೂಲಕ 'ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ'ಯಂದು (ಬುಧವಾರ) 'ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆ'ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಳಿದ ಹಣವನ್ನು ಮುಂದಿನ ಪ್ರತಿವಾರ ಕಂತುಗಳಲ್ಲಿ ಬಿಡುಗಡೆಗೊಳಿಸಿ, ಏಪ್ರಿಲ್ ತಿಂಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಕೊಡಲಾಗುವುದು ಎಂದರು.
ಯೋಜನೆಯಡಿ 500 ಕೋಟಿ ರೂಪಾಯಿ ಹಣವನ್ನು 50,000 ಸ್ವಸಹಾಯ ಸಂಘಗಳಿಗೆ ತಲಾ 1 ಲಕ್ಷದಂತೆ ನೀಡುವುದು ಸರ್ಕಾರದ ಗುರಿ. ಈಗ ಮೊದಲ ಹಂತದ 100 ಕೋಟಿಯಲ್ಲಿ 9,890 ಮಹಿಳಾ ಸ್ವ ಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂಪಾಯಿಯನ್ನು ಕೊಡಲಾಗಿದೆ. ಇದರ ಜೊತೆಗೆ 11 ಕ್ಯಾಂಟೀನ್, 9 ಸ್ಯಾನಿಟರಿ ಪ್ಯಾಡ್, 24 ಚಿಕ್ಕಿ ಘಟಕ ಸೇರಿ 44 ಘಟಕಗಳಿಗೆ ತಲಾ 2.5 ಲಕ್ಷ ಕೊಡಲಾಗಿದೆ. ಫಲಾನುಭವಿ ಸಂಘಗಳ ಖಾತೆಗೆ ನೇರವಾಗಿ ಆನ್ ಲೈನ್ ಮೂಲಕ ಜಮೆ ಮಾಡಲಾಗಿದೆ ಎಂದು ವಿವರಿಸಿದರು.
"ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ" ಯೋಜನೆಯಡಿ ಮುಖ್ಯವಾಗಿ ಪ್ರತಿ ಜಿಲ್ಲೆಯಲ್ಲಿ 3 ಉದ್ಯಮ ಘಟಕಗಳು ಮತ್ತು 15 ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು 50,000 ಫಲಾನುಭವಿ ಸಂಘಗಳನ್ನು ಗುರುತಿಸಲಾಗಿದೆ. ಶುದ್ದ ಗಾಣದ ಎಣ್ಣೆ, ಫ್ಲೋರ್ ಕ್ಲೀನರ್, ಉಪ್ಪಿನಕಾಯಿ, ಹಣ್ಣಿನ ಜಾಮ್, ಬಾಳೆಕಾಯಿ/ ಹಲಸಿನ ಚಿಪ್ಸ್, ಜೋಳದ ರೊಟ್ಟಿ, ಹಪ್ಪಳ, ಮಣ್ಣಿನ ವಸ್ತುಗಳು, ಗೃಹೋಪಯೋಗಿ ಹಾಗೂ ಗೃಹ ಅಲಂಕಾರಿಕ ವಸ್ತುಗಳು, ಕ್ಷಣ ಸೆಣಬಿನ ಕೈ ಚೀಲಗಳು, ರಾಗಿ ಬಿಸ್ಕತ್ತು, ಯೋಗ ಮ್ಯಾಟ್ ಇತ್ಯಾದಿ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಯನ್ನು ಇದು ಒಳಗೊಂಡಿದೆ.
ಯೋಜನೆಯಡಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ತಾಂತ್ರಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಪ್ರಮುಖ 8 ತರಬೇತಿಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಿದರು. ಒಟ್ಟು 50,000 ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಿ ಉದ್ಯಮ ಕೈಗೊಳ್ಳಲು ಬೆಂಬಲಿಸಲಾಗುವುದು.
ಸ್ವಸಹಾಯ ಗುಂಪಿನ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ 2ನೇ ಹಂತದಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಒಟ್ಟು 3,500 ಫಲಾನುಭವಿಗಳಿಗೆ ಸಾಲ ಮಂಜೂರಾಗಿದ್ದು ಬೊಮ್ಮಾಯಿಯವರು ಸಾಂಕೇತಿಕವಾಗಿ ಮೂರು ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರ ನೀಡಿದರು.
ಯೋಜನೆಯಡಿ ರಾಜ್ಯದ ಎಲ್ಲಾ ಜಿಪಿಎಲ್ಎಫ್ ಗಳಿಗೆ ಕಂಪ್ಯೂಟರ್ ವಿತರಿಸುವ ಉದ್ದೇಶವಿದ್ದು ಮುಖ್ಯಮಂತ್ರಿ ಅವರು ಇದೇ ವೇಳೆ 3 ಜಿಪಿಎಲ್ಎಫ್ ಗಳಿಗೆ ಸಾಂಕೇತಿಕವಾಗಿ ಕಂಪ್ಯೂಟರ್ ವಿತರಿಸಿದರು.
ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಒಟ್ಟಾರೆ ರೂ. 46,278 ಕೋಟಿಗಳ ಅನುದಾನ ಒದಗಿಸಿದೆ. ಪ್ರಸಕ್ತ ಸಾಲಿನಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರೂ. ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಗುರಿ ಇದೆ ಎಂದರು.
"ಗೃಹಿಣಿ ಶಕ್ತಿ" ಯೋಜನೆಯಡಿ ಭೂರಹಿತ ರೈತ ಮಹಿಳೆಯರಿಗಾಗಿ ಮಾಸಿಕ ರೂ. 500 ಗಳನ್ನು ನೀಡಲಾಗುವುದು. 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು, ಮಹಿಳೆಯರ ಅಪೌಷ್ಟಿಕತೆ ತಡೆಯಲು ಅಂಗನವಾಡಿಗಳ ಮೂಲಕ ಬಿಸಿಯೂಟ ನೀಡಲಾಗುವುದು.
ವಿದ್ಯಾರ್ಥಿನಿಯರಿಗೆ 350 ಕೊಟಿ ರೂ.ಗಳ ವೆಚ್ಚದಲ್ಲಿ ಉಚಿತ ಬಸ್‌ಪಾಸ್ ಸೌಲಭ್ಯ ಒದಗಿಸಲಾಗುತ್ತಿದ್ದು, ಒಟ್ಟು 8 ಲಕ್ಷ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ನಗರ ಪ್ರದೇಶದಲ್ಲಿ 4,000 ಶಿಶುಪಾಲನಾ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮೌಲ್ಯವರ್ಧನೆ, ಬ್ರಾಂಡಿಂಗ್, ಪ್ಯಾಕಿಂಗ್ ಮತ್ತು ಮಾರುಕಟ್ಟೆ ಗಾಗಿ ಇಡಿಐಐ, ಕೇರಳದ ಕುಟುಂಬ ಶ್ರೀ ಸೇರಿದಂತೆ ಎಂಟು ಸಂಸ್ಥೆಗಳೊಂದಿಗೆ ತಾಂತ್ರಿಕ ಬೆಂಬಲ ಒಡಂಬಡಿಕೆಯನ್ನೂ ಕಾರ್ಯಕ್ರಮದಲ್ಲಿ ಮಾಡಿಕೊಳ್ಳಲಾಯಿತು.
ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಸ್ಥೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಸಂಸ್ಥೆಯ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಿ ಮಾರಾಟ ಮಳಿಗೆಗಳಿಗೂ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ಜಿಲ್ಲೆಗಳ ಸ್ವಸಹಾಯ ಸಂಘಗಳ 15,000ಕ್ಕೂ ಹೆಚ್ಚಿನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳಾ ದಿನಾಚರಣೆ ನಿಮಿತ್ತ ಬೆಳಿಗ್ಗೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ ಸೆಲ್ವಕುಮಾರ್, ಅಭಿಯಾನದ ನಿರ್ದೇಶಕಿ ರಾಗಪ್ರಿಯ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ ಮತ್ತಿತರರು ಪಾಲ್ಗೊಂಡಿದ್ದರು