×
Ad

ಬಿಜೆಪಿ ದೂರಿನ ಹಿನ್ನೆಲೆಯಲ್ಲಿ 9,195 ಮತದಾರರಿಗೆ ನೋಟಿಸ್: ಶಾಸಕ ರಿಝ್ವಾನ್ ಅರ್ಶದ್

''1 ವರ್ಗದ ಮತದಾರರನ್ನು ಬಿಟ್ಟು ಚುನಾವಣೆ ಮಾಡಿದರೆ ನ್ಯಾಯಯುತ ಚುನಾವಣೆ ಹೇಗೆ ಸಾಧ್ಯ?''

Update: 2023-03-08 22:17 IST

ಬೆಂಗಳೂರು, ಮಾ.8: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ದೂರಿನ ಹಿನ್ನೆಲೆಯಲ್ಲಿ 9,195 ಮತದಾರರಿಗೆ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿತ್ತು. 193 ಬೂತ್ ಪೈಕಿ ಈ ಮತದಾರರು ಕೇವಲ 91 ಬೂತ್‍ಗಳಿಗೆ ಮಾತ್ರ ಸಂಬಂಧಿಸಿದ್ದಾರೆ. ಇದರಲ್ಲಿ ಕ್ರೈಸ್ತರು, ಮುಸಲ್ಮಾನರು, ಎಸ್ಸಿ-ಎಸ್ಟಿ ಮತದಾರರಿದ್ದಾರೆ ಎಂದು ಶಾಸಕ ರಿಝ್ವಾನ್ ಅರ್ಶದ್ ಹೇಳಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲ ಬಾರಿ ಕೊಟ್ಟ ನೋಟಿಸ್‍ಗೆ ಉತ್ತರಿಸಿದ ನಂತರ, ಎರಡನೆ ಬಾರಿ ನೋಟಿಸ್ ಜಾರಿ ಮಾಡಿದರು. 9195 ಮತದಾರರ ಪೈಕಿ 22 ಮಂದಿ ಈ ಸಂಬಂಧ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು ಎಂದರು.

ಈ ವಿಚಾರವಾಗಿ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದು, ಅದರಲ್ಲಿ ಈ 22 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲವೆಂದು ಹೇಳಿದೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಚುನಾವಣೆಗೆ 6 ತಿಂಗಳ ಮುಂಚಿತವಾಗಿ ಸ್ವಯಂ ಪ್ರೇರಣೆಯಿಂದ ಹೆಸರು ತೆಗೆಯುವಂತಿಲ್ಲ. ಆದರೂ ಬಿಜೆಪಿ ಒತ್ತಡಕ್ಕೆ ಮಣಿದು ನೋಟಿಸ್ ನೀಡಿರುವುದೇಕೆ? ಎಂದು ಅವರು ಪ್ರಶ್ನಿಸಿದರು.

22 ಜನರ ಹೆಸರನ್ನು ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ಉಳಿದ 9 ಸಾವಿರ ಮತದಾರರ ಕಥೆ ಏನು? ಇವರೆಲ್ಲರೂ ಹೈಕೋರ್ಟ್ ಮೊರೆ ಹೋಗಬೇಕೆ? ಹೈಕೋರ್ಟ್ ಹೋದವರಿಗೆ ಮಾತ್ರ ರಕ್ಷಣೆ, ಹೋಗದವರ ಮೂಲಭೂತ ಹಕ್ಕು ಕಸಿಯಲು ಸಾಧ್ಯವೇ? ಯಾರ ನಿರ್ದೇಶನದ ಮೇರೆಗೆ ಈ ರೀತಿ ಮಾಡುತ್ತಿದ್ದೀರಿ? ಎಂದು ಅವರು ಹೇಳಿದರು.

ರಾಜಕೀಯ ಪಕ್ಷದ ಒತ್ತಡಕ್ಕೆ 9 ಸಾವಿರ ಜನರಿಗೆ ನೋಟೀಸ್ ನೀಡಿ ಚುನಾವಣೆಗೆ 2 ತಿಂಗಳು ಬಾಕಿ ಇರುವಾಗ ಅವರ ಹೆಸರು ತೆಗೆಯಲು ಪ್ರಕ್ರಿಯೆ ಆರಂಭಿಸಿರುವುದೇಕೆ? ಚುನಾವಣಾ ಆಯೋಗದ ನೋಟಿಸ್ ಬೋರ್ಡ್ ಮೇಲೆ ಹಾಕಿರುವ ಮತದಾರರ ಪಟ್ಟಿಗೂ ರಾಜಕೀಯ ಪಕ್ಷಗಳಿಗೆ ನೀಡಿರುವ ಪಟ್ಟಿಗೂ ವ್ಯತ್ಯಾಸವಿದೆ ಎಂದು ರಿಝ್ವಾನ್ ಅರ್ಶದ್ ಆರೋಪಿಸಿದರು.

ಮತದಾರರ ಪಟ್ಟಿ ತಿರುಚಿ ಒಂದು ವರ್ಗದ ಮತದಾರರನ್ನು ಬಿಟ್ಟು ಚುನಾವಣೆ ಮಾಡಿದರೆ ನ್ಯಾಯಯುತ ಚುನಾವಣೆ ಹೇಗೆ ಸಾಧ್ಯ? ಚುನಾವಣಾ ಆಯೋಗದ ಕಚೇರಿ ಇರುವ ನನ್ನ ಕ್ಷೇತ್ರದಲ್ಲಿ ಈ ರೀತಿ ಆದರೆ, ಬೇರೆ ಕ್ಷೇತ್ರಗಳ ಕಥೆ ಏನು? ಈ 9 ಸಾವಿರ ಮತದಾರರ ಹೆಸರು ತೆಗೆದು ಚುನಾವಣೆ ಮಾಡಿದರೆ ಅದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ನಾವು ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.

ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಚಿಲುಮೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಕೆಲವು ಐಎಎಸ್ ಅಧಿಕಾರಿಗಳು ಅಮಾನತುಗೊಂಡಿದ್ದರೆ ಅದು ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ದಾಖಲಿಸಿದ ಪರಿಣಾಮ ಎಂದರು.

ಆಳಂದದಲ್ಲಿ 6 ಸಾವಿರ ಮತದಾರರ ಹೆಸರು ತೆಗೆದುಹಾಕಿದ್ದಾರೆ. ಶಿವಾಜಿನಗರದಲ್ಲಿ 26 ಸಾವಿರ ಮತದಾರರ ಹೆಸರು ತೆಗೆಯಲು ಚಿಲುಮೆಯವರು ಆಯೋಗಕ್ಕೆ ಪಟ್ಟಿ  ನೀಡಿದ್ದರು. ಅವರಿಗೆ ಹೇಗೆ ಪಟ್ಟಿ ಸಿಕ್ಕಿತು? ಈ ಖಾಸಗಿ ಸಂಸ್ಥೆ ಮಾಲಕರು ಯಾರು ಈವರೆಗೂ ಸರಕಾರ ಯಾಕೆ ತನಿಖೆ ಮಾಡಿಲ್ಲ? ಅಮಿತ್ ಶಾ, ಬೊಮ್ಮಾಯಿ ಅವರನ್ನು ಪಕ್ಕ ಕೂರಿಸಿಕೊಂಡು ಮೋದಿ ಮುಖ ನೋಡಿ ಮತ ಹಾಕಿ ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.

Similar News