ಬೆಂಗಳೂರು | ಹಾಸಿಗೆ ಮಳಿಗೆಯಲ್ಲಿ ಬೆಂಕಿ ಅವಘಡ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
Update: 2023-03-09 11:56 IST
ಬೆಂಗಳೂರು: ಕಾರ್ಲಾನ್ ಹಾಸಿಗೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಗುರುವಾರ ಬೆಳಗ್ಗೆ ಬೆಳ್ಳಂದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಬೆಂಗಳೂರು- ಸರ್ಜಾಪುರ ಮುಖ್ಯರಸ್ತೆಯ ಕೈಕೊಂಡ್ರಹಳ್ಳಿ ಬಳಿ ಘಟನೆ ಸಂಭವಿಸಿದ್ದು, ಬೆಳಗ್ಗೆ 8.30ರ ಸುಮಾರಿಗೆ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹಾಸಿಗೆ ಮಳಿಗೆ ಮುಖ್ಯ ರಸ್ತೆಯಲ್ಲೇ ಇರುವುದರಿಂದ ಅಕ್ಕಪಕ್ಕದಲ್ಲಿದ್ದ ಮಳಿಗೆಗಳಿಗೂ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಕ್ಷಣಾರ್ಧದಲ್ಲಿ ಕಾರ್ಲಾನ್ ಮಳಿಗೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಈ ವೇಳೆ ಮಳಿಗೆಗಳಲ್ಲಿ ಯಾರು ಇರಲಿಲ್ಲ ಎಂದು ಹೇಳಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.