ಭಾರತದ ಪ್ರಥಮ ರೊಹಿಂಗ್ಯಾ ಪದವೀಧರೆ ತಸ್ಮೀದಾ

ಶಿಕ್ಷಣ, ಸ್ವಾತಂತ್ರ್ಯಕ್ಕಾಗಿ ಹೆಸರಿನಿಂದ ದೇಶದವರೆಗೆ ಎಲ್ಲ ಬದಲಾವಣೆಗಳನ್ನು ಸ್ವೀಕರಿಸಿದ್ದ ಯುವತಿ

Update: 2023-03-09 06:44 GMT

ಹೊಸದಿಲ್ಲಿ: ಜೀವನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದಿಲ್ಲ. ಪ್ರತಿ ಮನುಷ್ಯನ ಜೀವನದಲ್ಲಿಯ ಸಂಘರ್ಷವೂ ಒಂದೇ ರೀತಿಯಾಗಿರುವುದಿಲ್ಲ. 

ಒಮ್ಮೆ ಊಹಿಸಿಕೊಳ್ಳಿ, ನಿಮ್ಮ ಹೆಸರು, ನಿಮ್ಮ ಮನೆ, ನಿಮ್ಮ ದೇಶವನ್ನು ಎರಡೆರಡು ಸಲ ಬದಲಾಯಿಸಬೇಕಾಗಿ ಬಂದರೆ ನೀವು ಒಮ್ಮೆ ಹೊಂದಿದ್ದ ಕನಸನ್ನು ನನಸಾಗಿಸಲು ಸಾಧ್ಯವೇ? ಕಷ್ಟ ಅಲ್ಲವೇ? ಆದರೆ ಈ ಕಠಿಣ ಪಯಣದ ಬಳಿಕವೂ ತನ್ನ ತಾಯಿನಾಡು ಮ್ಯಾನ್ಮಾರ್ನಿಂದ ಬಾಂಗ್ಲಾದೇಶಕ್ಕೆ ಮತ್ತು ನಂತರ ಭಾರತವನ್ನು ತಲುಪಿದ್ದ 26ರ ಹರೆಯದ ತಸ್ಮೀದಾ ಜೌಹರ್ (Tasmida Johar) ಶಿಕ್ಷಣವನ್ನು ಪಡೆಯಬೇಕೆಂದು ತಾನು ಪೋಷಿಸಿಕೊಂಡು ಬಂದಿದ್ದ ಕನಸನ್ನು ನನಸಾಗಿಸಿಕೊಂಡಿದ್ದಾಳೆ. 

ಮ್ಯಾನ್ಮಾರ್ ನಲ್ಲಿಯ ಜನಾಂಗೀಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ದೇಶದಿಂದ ಪರಾರಿಯಾಗಿದ್ದ ತಸ್ಮಿದಾ ಮೊದಲು ತಲುಪಿದ್ದು ಬಾಂಗ್ಲಾದೇಶದಲ್ಲಿನ ವಿಶ್ವದ ಅತ್ಯಂತ ದೊಡ್ಡ ನಿರಾಶ್ರಿತರ ಶಿಬಿರವನ್ನು. ಬಳಿಕ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಭಾರತವನ್ನು ತಲುಪಿದ್ದಳು. ತಸ್ಮಿದಾ ಈಗ ಭಾರತದ ಮೊದಲ ರೊಹಿಂಗ್ಯಾ (Rohingya) ಪದವೀಧರ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ದಿಲ್ಲಿ ವಿವಿ ಅಧೀನದ ಮುಕ್ತ ವಿವಿಯ ಮೂಲಕ ತನ್ನ ಬಿಎ(ಪಿ) ಪದವಿಯನ್ನು ಗಳಿಸಿರುವ ತಸ್ಮಿದಾ ಮುಂದಿನ ವ್ಯಾಸಂಗಕ್ಕಾಗಿ ಕೆನಡಾಕ್ಕೆ ತೆರಳಲು ಸಜ್ಜಾಗಿದ್ದು,ಟೊರೊಂಟೊದ ವಿಲ್ಫ್ರಿಡ್ ಲಾರಿಯರ್ ವಿವಿಯ ದೃಢೀಕರಣ ಪತ್ರಕ್ಕಾಗಿ ಕಾಯುತ್ತಿದ್ದಾಳೆ.
              
ಬದುಕಿನ ಹೋರಾಟದ ಕಥೆ

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತಸ್ಮಿದಾ ಜೌಹರ್, ಇದು ತನ್ನ ನಿಜವಾದ ಹೆಸರಲ್ಲ ಎಂದು ಹೇಳಿದರು. ‘ಮ್ಯಾನ್ಮಾರ್ ನಲ್ಲಿ ನೀವು ರೊಹಿಂಗ್ಯಾ ಹೆಸರಿನೊಂದಿಗೆ ಬದುಕಲು ಅಥವಾ ಶಿಕ್ಷಣ ಪಡೆಯಲು ಸಾಧ್ಯವಿಲ್ಲ, ಹೀಗಾಗಿ ಹೆಸರು ಬದಲಿಸಿಕೊಳ್ಳಬೇಕಾಯಿತು. ನನ್ನ ನಿಜವಾದ ಹೆಸರು ತಸ್ಮೀನ್ ಫಾತಿಮಾ. ಆದರೆ ಮ್ಯಾನ್ಮಾರ್ ನಲ್ಲಿ ಶಿಕ್ಷಣವನ್ನು ಪಡೆಯಲು ನೀವು ರೊಹಿಂಗ್ಯಾ ಹೆಸರನ್ನು ಹೊಂದಿರುವಂತಿಲ್ಲ,ನೀವು ಬೌದ್ಧ ಹೆಸರನ್ನು ಹೊಂದಿರಬೇಕಾಗುತ್ತದೆ. ಹೀಗಾಗಿ ನಾನು ಹೆಸರು ಬದಲಿಸಿಕೊಳ್ಳಬೇಕಿತ್ತು’ ಎಂದು ತಿಳಿಸಿದಳು.

‘ನನ್ನ ನಿಜವಾದ ವಯಸ್ಸು 24 ವರ್ಷ, ಆದರೆ ನನ್ನ ಯುಎನ್ಎಚ್ಸಿಆರ್(ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ರಾಯಭಾರಿ ಕಚೇರಿ) ಕಾರ್ಡ್ ನಲ್ಲಿ 26 ವರ್ಷಗಳು ಎಂದಿದೆ. ಸಾಮಾನ್ಯವಾಗಿ ಮ್ಯಾನ್ಮಾರ್ ನಲ್ಲಿಯ ರೊಹಿಂಗ್ಯಾ ಪೋಷಕರು ತಮ್ಮ ಮಕ್ಕಳ ಮದುವೆಯನ್ನು ಬೇಗ ಮಾಡಲು ಅವರ ವಯಸ್ಸನ್ನು ಎರಡು ವರ್ಷ ಹೆಚ್ಚಾಗಿ ತೋರಿಸುತ್ತಾರೆ. ಅಲ್ಲಿ 18 ವರ್ಷಗಳಾದ ಬಳಿಕ ಮದುವೆಯಾಗುವುದು ಕಷ್ಟ’ ಎಂದು ತಸ್ಮಿದಾ ವಿವರಿಸಿದಳು.
      
ನನ್ನ ಗುರುತಿನೊಂದಿಗೆ ಬದುಕಲು ಸಾಧ್ಯವಿಲ್ಲ

ಮ್ಯಾನ್ಮಾರ್ ಜನರಿಗೆ ರೊಹಿಂಗ್ಯಾ ಸಮುದಾಯವು ಅಸ್ತಿತ್ವದಲ್ಲಿರಬಾರದು. ಶಾಲೆಯಲ್ಲಿ ನಮಗಾಗಿ ಪ್ರತ್ಯೇಕ ತರಗತಿಗಳಿದ್ದವು. ಪರೀಕ್ಷೆಗೆ ಬರೆಯುವಾಗ ಹಾಲ್ ನಲ್ಲಿಯ ಅತ್ಯಂತ ದೂರದ ಬೆಂಚ್ನಲ್ಲಿ ನಾವು ಕುಳಿತಿರುತ್ತಿದ್ದೆವು. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ನಾವು ಅಗ್ರಸ್ಥಾನ ಪಡೆದರೂ ಮೆರಿಟ್ ಪಟ್ಟಿಯಲ್ಲಿ ನಮ್ಮ ಹೆಸರು ಕಾಣಿಸಿಕೊಳ್ಳುವುದಿಲ್ಲ. 

ರೊಹಿಂಗ್ಯಾ ವಿದ್ಯಾರ್ಥಿ ಕಾಲೇಜಿಗೆ ಹೋಗಲು ಬಯಸಿದ್ದರೆ ಆತ ಯಾಂಗೂನ್ (ದೇಶದ ಹಿಂದಿನ ರಾಜಧಾನಿ)ಗೆ ಪ್ರಯಾಣಿಸಬೇಕು. ಈ ತೊಂದರೆಗಳಿಂದಾಗಿ ರೊಹಿಂಗ್ಯಾ ಮಕ್ಕಳಿಗೆ ಓದಲೂ ಸಾಧ್ಯವಿಲ್ಲ, ನಾನಿಂದು ಇರುವ ಶಿಕ್ಷಣದ ಮಟ್ಟವನ್ನೂ ತಲುಪಲು ಸಾಧ್ಯವಿಲ್ಲ ಎಂದು ತಸ್ಮಿದಾ ಹೇಳಿದಳು.

ಈ ಎಲ್ಲ ಕಷ್ಟಗಳನ್ನು ಎದುರಿಸಿ ಓದಿದರೂ ನಮಗೆ ಉದ್ಯೋಗ ದೊರೆಯುವುದಿಲ್ಲ. ನಾವು ಸರಕಾರಿ ಕಚೇರಿಗಳಲ್ಲಿ ಕುಳಿತುಕೊಳ್ಳುವಂತಿಲ್ಲ,ನಾವು ಮತದಾನದ ಹಕ್ಕನ್ನೂ ಹೊಂದಿಲ್ಲ ಎಂದಳು.
              
ಅಪ್ಪ-ಅಮ್ಮ ಪ್ರೋತ್ಸಾಹಿಸಿದ್ದರು

ಈ ಸಂಕಷ್ಟದ ಸ್ಥಿತಿಯಿಂದ ಹೊರಬರಲು ಶಿಕ್ಷಣವೊಂದೇ ದಾರಿ ಎನ್ನುವುದು ತನ್ನ ಹೆತ್ತವರಿಗೆ ಅರಿವಿದ್ದುದರಿಂದ ಅವರು ತನ್ನ ಓದಿಗೆ ಪ್ರೋತ್ಸಾಹಿಸಿದ್ದರು. ಏಳು ಮಕ್ಕಳಲ್ಲಿ ಐದನೆಯವಳಾಗಿರುವ ತಸ್ಮಿದಾ ಹೆತ್ತವರ ಏಕೈಕ ಪುತ್ರಿಯೂ ಹೌದು. ಆಕೆಯ ಹಿರಿಯ ಸೋದರ ಭಾರತದಲ್ಲಿ ಏಕೈಕ ರೊಹಿಂಗ್ಯಾ ಪದವೀಧರನಾಗಿದ್ದು, ಸಮುದಾಯಕ್ಕಾಗಿ ಆರೋಗ್ಯ ಸಂಪರ್ಕ ಸಹಾಯಕ ಮತ್ತು ಅನುವಾದಕನಾಗಿ ದಿಲ್ಲಿಯ ಯುಎನ್ಎಚ್ಸಿಆರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತರ ಒಡಹುಟ್ಟಿದವರು ದಿಲ್ಲಿಯಲ್ಲಿ ತಂದೆಯೊಂದಿಗೆ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಕೃಪೆ: Indianexpress.com

Similar News