×
Ad

ದೇಶವೇ ಮಾರಾಟವಾಗುತ್ತಿದ್ದು ಎಚ್ಚರಗೊಳ್ಳುವುದು ಅಗತ್ಯ: ಬಿ.ಟಿ. ಲಲಿತಾ ನಾಯಕ್

Update: 2023-03-09 18:30 IST

ಬೆಂಗಳೂರು, ಮಾ. 9: ‘ಸಮಾಜದಲ್ಲಿ ಇಂದು ದೇವರು-ಧರ್ಮದ ಹೆಸರಿನಲ್ಲಿ ವ್ಯಾಪಾರ ನಡೆಯುತ್ತಿದೆ. ಸರಕಾರಗಳು ಎಲ್ಲವನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿವೆ. ದೇಶವೇ ಮಾರಾಟವಾಗುತ್ತಿದ್ದು, ಅಂತರಂಗದಿಂದ ನಾವು ಬದಲಾಗಬೇಕಾದ ಅನಿವಾರ್ಯತೆ ಇದೆ’ ಎಂದು ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್ ಎಚ್ಚರಿಸಿದ್ದಾರೆ. 

ಗುರುವಾರ ನಗರದ ಕನ್ನಡಭವನ ನಯನ ಸಭಾಂಗಣದಲ್ಲಿ ರಂಗೋತ್ರಿ ಸಂಸ್ಥೆ ಶೀಲಾದೇವಿ ಎಸ್. ಮಳೀಮಠ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಮಾಜವನ್ನು ಇಲ್ಲಿ ನಡೆಯುತ್ತಿರುವ ರಾಜಕೀಯವನ್ನು ಸರಿಯಾದ ರೀತಿಯಲ್ಲಿ ಗುರುತಿಸುವಂತಹ ಜನರು ಕಡಿಮೆ ಆಗುತ್ತಿದ್ದಾರೆ. ಜನ ಆಸೆ, ಅಮಿಷಗಳಿಗೆ ಮರಳಾಗುತ್ತಿದ್ದು, ನೈಜ ಧರ್ಮದ ಬಗ್ಗೆ ಆಲೋಚನೆ ಮಾಡುವ ಜನ ಕಡಿಮೆ ಆಗುತ್ತಿದ್ದಾರೆ. ಧರ್ಮ ಬೇರೆ, ಬೇರೆ ರೀತಿಯಲ್ಲಿ ವಿಕೃತಗೊಳ್ಳುತ್ತಲಿದೆ’ ಎಂದು ನುಡಿದರು.

ಸಂಕಷ್ಟಗಳನ್ನು ತಂದಡ್ಡುವಂತಹ ಸರ್ವಾಧಿಕಾರಿ ಮನೋಭಾವದ ಸರಕಾರಗಳು ಬರುತ್ತಲಿವೆ. ನಮಗೂ ಸರಕಾರಕ್ಕೂ ಸಂಬಂಧ ಇಲ್ಲ ಎಂದು ಹೇಳಿ ನಮ್ಮ ಪಾಡಿಗೆ ನಾವು ಸುಮ್ಮನಿರುವುದಾದರೆ ಪ್ರಜಾಪ್ರಭುತ್ತದಲ್ಲಿ ಇರಲು ನಾವು ಲಾಯಕ್ಕಲ್ಲ. ಪ್ರಜೆಗಳು, ಪ್ರಭುಗಳು ನಮಗೂ ಹೊಣೆಗಾರಿಕೆ ಇದೆ. ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದು ಅವರು ಸಲಹೆ ನೀಡಿದರು. 

‘ಜವಾಬ್ದಾರಿಯಿಂದ ವಿಮುಖರಾಗಿ ಹಣದ ಬೆನ್ನು ಹತ್ತಿ ನಾವು ಹೋಗುತ್ತಿರುವುದರ ಪರಿಣಾಮವೆ ಇಂದು ಮಹಿಳೆಯರ ಮೇಲೆ ದೌರ್ಜನ್ಯ, ಬಡತನ, ಅಸ್ಪೃಶ್ಯತೆ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲಿದೆ.ಸ್ವಾಮಿಗಳು ದಲಿತ ಯುವತಿಯ ಬದುಕು ಹಾಳು ಮಾಡಿ ಜೈಲು ಸೇರಿದ್ದಾರೆಂದರೆ ವಿಚಾರ ಮಾಡಬೇಕಿದೆ. ನಾವು ಎಷ್ಟರಮಟ್ಟಿಗೆ ಈ ಸಮಾಜವನ್ನು ಕಟ್ಟುತ್ತಿದ್ದೇವೆ. ಯಾವ ದೃಷ್ಟಿಕೋನದಿಂದ ಸಮಾಜವನ್ನು ನೋಡುತ್ತಲಿದ್ದೇವೆ. ಮರ್ಯಾದೆ ಮೀರಿ ವಿಕೃತ ಮನೋಭಾವ ಮೆರೆಯುತ್ತಿದ್ದೇವೆ, ಏಕೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡು ಅಂತರಂಗದಿಂದ ನಾವು ಬದಲಾಗಬೇಕಿದೆ’ ಎಂದು ಅವರು ಹೇಳಿದರು. 

ಸಾನಿಧ್ಯ ವಹಿಸಿದ್ದ ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಅರವತ್ತರ ಅರಿವು ಅನ್ನುವಂತಹದ್ದು ಎಲ್ಲರ ಬಾಳಿನಲ್ಲಿ ಪ್ರೇರಕ ಶಕ್ತಿಯಾಗಿ ಹರಡುವ ಅವಕಾಶ. ವಿಶ್ರಾಂತಿ ಬದಲು ವಿಜೃಂಭಣೆಯ ಸಮಯ. ಅದುವರೆಗೂ ಗಳಿಸಿದ ಸಾಧನಾ ಶಕ್ತಿಯನ್ನು ಎಲ್ಲರಿಗೂ ಹಂಚಿ ಸುಗಂಧ ಬೀರುವ ಸುಸಮಯ. ಅಧ್ಯಾಪಕರು ಎಂದಿಗೂ ನಿವೃತ್ತರಾಗುವುದಿಲ್ಲ. ಪ್ರವೃತ್ತರಾಗಿರುತ್ತಾರೆ ಎಂದರು. 

ಮತ್ತೊಬ್ಬರಿಗೆ ಪ್ರೇರಕ ಶಕ್ತಿಯಾಗಿ ಮತ್ತು ಜಂಗಮ ಶಕ್ತಿಯಾಗಿ ಹರಡಲಿ ಎಂದು ಶೀಲಾದೇವಿ ಮಳಿಮಠ ಅವರಿಗೆ ಜಂಗಮಶ್ರೀ ಬಿರುದು ಪ್ರದಾನ ಮಾಡಲಾಗಿದೆ. ಶೀಲಾದೇವಿಯವರು ತಮ್ಮ ವಿಶಿಷ್ಠ ಸಾಧನೆಯ ನೆಲೆಯಲ್ಲಿ ಬದುಕನ್ನು ಅರಳಿಸಿಕೊಂಡವರು ಎಂದು ಸ್ವಾಮೀಜಿ ಹೇಳಿದರು. 

ಮುಖ್ಯಅತಿಥಿಯಾಗಿದ್ದ ಹಿರಿಯ ಸಾಹಿತಿ ಜಿ.ಅಶ್ವತ್ಥನಾರಾಯಣ ಮಾತನಾಡಿ, ಶೀಲಾದೇವಿ 40 ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿನಿ. ಆಕೆ ವಿನಯವಂತೆ, ವಿಶೇಷ ಗುಣಗೌರವ ಮತ್ತು ಜನಪ್ರಿಯತೆಯನ್ನು ಸಂಪಾದಿಸಿರುವಂತಹ ವಿಶಿಷ್ಠ ವಿದ್ಯಾರ್ಥಿನಿ. ಗುರುಪರಂಪರೆಯನ್ನು ಮುಂದುವರಿಸಿಕೊಂಡು, ಶಿಷ್ಯ ಪರಂಪರೆಯನ್ನು ಗಳಿಸಿಕೊಂಡು ನಿತ್ಯದ ನಂದಾದೀಪವಾಗಿ ಬೆಳಗುತ್ತಿರುವವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದೇ ವೇಳೆ ಶೀಲಾದೇವಿ ಅವರಿಗೆ ‘ಜಂಗಮಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಹಿರಿಯ ವಿಮರ್ಶಕಿ ಆಶಾದೇವಿ ಹಾಜರಿದ್ದರು. 

Similar News