ಟಿಪ್ಪು ಹಿಂದೂ ವಿರೋಧಿಯೂ ಅಲ್ಲ, ಬ್ರಾಹ್ಮಣ ವಿರೋಧಿಯೂ ಅಲ್ಲ: ಡಾ.ಕೆ.ಮರುಳಸಿದ್ದಪ್ಪ

''ವಿವಾದದ ಮೂಲಕ ಸಮುದಾಯವನ್ನು ಕೀಳರಿಮೆಗೆ ತಳ್ಳುವ ಸಂಚು''

Update: 2023-03-09 15:59 GMT

ಬೆಂಗಳೂರು, ಮಾ.9: ‘ಒಂದು ಗುಂಪಿನ ಜನರು ಈ ದೇಶವನ್ನು ಗುತ್ತಿಗೆ ಹಿಡಿದುಕೊಂಡು ಟಿಪ್ಪುವಿನ ಬಗೆಗಿನ ಆಗಿಂದಾಗ್ಗೆ ವಿವಾದವನ್ನು ಸೃಷ್ಟಿಸುತ್ತಾರೆ. ಇದು ಕೇವಲ ಮತಕ್ಕಾಗಿ ಅಷ್ಟೇ ಅಲ್ಲ. ವಿವಾದದ ಮೂಲಕ ಸಮುದಾಯವನ್ನು ಕೀಳರಿಮೆಗೆ ತಳ್ಳುವ  ಸಂಚು’ ಎಂದು ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಎನ್.ಕೆ.ಮೋಹನ್‍ರಾಂ ಅವರ ‘21ನೆ ಶತಮಾನದ ಭಾರತೀಯ ಮುಸ್ಲಿಮರ ಅನಾಥ ಪ್ರಜ್ಞೆ’ ಎಂಬ ಕನ್ನಡ ಪುಸ್ತಕದ ಉರ್ದು ಅನುವಾದವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಮ್ಮೊಮ್ಮೆ ಅಧಿಕೃತ ದಾಖಲೆಗಳು ಸುಳ್ಳಾಗಬಹುದು. ಆದರೆ, ಟಿಪ್ಪುವಿನ ಕುರಿತಾಗಿರುವ ಜನ ಸಾಮಾನ್ಯರ ಕತೆ, ಲಾವಣಿಗಳು ಸುಳ್ಳಾಗುವುದಿಲ್ಲ ಎಂದರು.

ಟಿಪ್ಪು ಮತಾಂದನಲ್ಲ, ರಾಜರ ಆಳ್ವಿಕೆಯನ್ನು ವಿರೋಧಿಸಿದವವರಿಗೆ ಶಿಕ್ಷೆಯ ರೂಪದಲ್ಲಿ ಮತಾಂತರ ಪ್ರಕ್ರಿಯೆ ಹುಟ್ಟಿಕೊಂಡಿತು. ಟಿಪ್ಪು ಕಾಲದಲ್ಲಿ ನ್ಯಾಯಯುತವಾಗಿ, ಸ್ವಇಚ್ಛೆಯಿಂದ ಮತಾಂತರಗಳಾಗಿವೆ. ಕೇವಲ ಮುಸ್ಲಿಮ್ ರಾಜರಷ್ಟೇ  ಮತಾಂತರ ಮಾಡಿಲ್ಲ. ಎಲ್ಲ ಧರ್ಮದಲ್ಲೂ ಮತಾಂತರ ನಡೆದಿದೆ ಎಂದರು.

ಟಿಪ್ಪು ಹಿಂದೂ ಧರ್ಮ ವಿರೋಧಿಯೂ ಅಲ್ಲ, ಬ್ರಾಹ್ಮಣ ವಿರೋಧಿಯೂ ಆಗಿರಲಿಲ್ಲ. ಅವನ ಆಳ್ವಿಕೆಯ 9 ಮಂತ್ರಿಗಳಲ್ಲಿ 7 ಮಂದಿ ಬ್ರಾಹ್ಮಣರಿದ್ದರು. ಅವರಲ್ಲಿ ದಿವಾನ್ ಪೂರ್ಣಯ್ಯ ಒಬ್ಬ ಬ್ರಾಹ್ಮಣ. ಹೀಗಿದ್ದರೂ ಇತಿಹಾಸ ಸರಿಯಾಗಿ ಅರಿಯದೆ ಟಿಪ್ಪುವನ್ನು ಮತಾಂದ ಎಂದು ಟೀಕಿಸುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದಲ್ಲಿ ಮುಸ್ಲಿಮ್ ಸಮುದಾಯ ಅನಾಥವಾಗುತ್ತಿದೆ. ಸಮುದಾಯದಲ್ಲಿ ಅಸಹಾಯಕತೆ, ಹತಾಶೆ, ನಿಟ್ಟುಸಿರು ತಾಂಡವವಾಡುತ್ತಿದೆ ಎಂದ ಅವರು, ಎಲ್ಲ ಸಮುದಾಯದೊಳಗೂ ಅಲ್ಪಸಂಖ್ಯಾತರಿದ್ದಾರೆ. ವೈವಿಧ್ಯತೆಯಲ್ಲಿರುವ ಏಕತೆಯ ದೇಶವಾಗಿದ್ದು, ಇಲ್ಲಿ ಯಾರೂ ಹೆಚ್ಚಿಲ್ಲ ಯಾರೂ ಕಡಿಮೆಯಿಲ್ಲ ಎಂದರು.

ಸಿಮೀತ ವರ್ಗವೊಂದು ಅಕ್ಬರ್, ಬಾಬರ್ ನ ಬಗ್ಗೆ ಮಾತನಾಡದೆ ಕ್ರೂರಿ ಔರಂಗಜೇಬನ ಬಗ್ಗೆ ಮಾತನಾಡುತ್ತದೆ. ಅಕ್ಬರ್, ಬಾಬರ್ ನಂತಹ ಉತ್ತಮ ಮುಸ್ಲಿಮ್ ರಾಜರ ಬಗ್ಗೆ ಯಾರೂ ಮಾತನಾಡುವ ಪ್ರಯತ್ನ ಮಾಡುವುದಿಲ್ಲ. ಅಂತೆಯೇ ಅನ್ಯ ಧರ್ಮದ ಬಗ್ಗೆ ಕ್ರೂರವಾಗಿ ನಡೆದುಕೊಂಡ ಹಿಂದೂಗಳು ಇದ್ದಾರೆ. ಆದರೆ ಅದನ್ನೆಲ್ಲ ಮುಚ್ಚಿ ಹಾಕುವ ಯತ್ನ ನಡೆಯುತ್ತದೆ. ಕ್ರೌರ್ಯವನ್ನು ಎಲ್ಲ ಧರ್ಮಗಳೂ ಮಾಡಿವೆ ಆದರೆ ಸೋ ಕಾಲ್ಡ್ ಮನಸ್ಥಿತಿಗಳು ಕೇವಲ ಮುಸ್ಲಿಮರನ್ನು ಮಾತ್ರ ವಿವಾದಕ್ಕೆ ಎಳೆದು ತರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಜಯ್‍ಕುಮಾರ್ ಸಿಂಗ್, ಉರ್ದು ಲೇಖಕ ಮುಹಮ್ಮದ್ ಆಝಂ ಶಾಹಿದ್, ಲೇಖಕ ಎನ್.ಕೆ.ಮೋಹನ್‍ರಾಂ, ಪುಸ್ತಕದ ಉರ್ದು ಅನುವಾದಕ ಅನ್ವರ್‍ದಾಗ್ ಉಪಸ್ಥಿತರಿದ್ದರು.

Similar News