5, 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ಮಾಡಲು ಸೂಚನೆ
ಬೆಂಗಳೂರು, ಮಾ. 9: ಪ್ರಸಕ್ತ ವರ್ಷದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಓದುತ್ತಿರುವ 5ನೆ ಹಾಗೂ 8ನೆ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರಕಾರವು ನಿರ್ಧರಿಸಿದ್ದು, ಆಯಾ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಬೇಕು ಆದೇಶಿಸಿದೆ.
ಈ ಹಿಂದೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂರ್ನಾಲ್ಕು ಶಾಲೆಗಳಿಗೆ ಒಂದು ಪರೀಕ್ಷಾ ಕೇಂದ್ರವನ್ನಾಗಿ ಮಾಡಲು ಶಿಕ್ಷಣ ಇಲಾಖೆಯು ತಾಲೂಕು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿತ್ತು. ಆದರೆ ಬೇರೆ ಊರಿನ ಶಾಲೆಗಳಿಗೆ ತೆರಳಿ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳಿಗೆ ಅನಾನೂಕೂಲವಾಗುತ್ತದೆ ಎಂದು ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಕಾರಣ ಮಕ್ಕಳು ಓದುತ್ತಿರುವ ಶಾಲೆಗಳಲ್ಲಿಯೇ ಪರೀಕ್ಷೆಯನ್ನು ನಡೆಸುವಂತೆ ಇಲಾಖೆಯು ಸೂಚಿಸಿದೆ.
5ನೆ ತರಗತಿಯ ಪರೀಕ್ಷೆಯು ಮಾ.15ರಿಂದ 18ರವರೆಗೆ ಮತ್ತು 8ನೆ ತರಗತಿಯ ಪರೀಕ್ಷೆ ಮಾ.13ರಿಂದ 18ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ವಿಷಯವನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಕಾರ್ಯಗಳನ್ನು ಹಿಂದಿನ ಆದೇಶದಂತೆಯೇ ನಿರ್ವಹಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ.