ಕುಂಕುಮದ ಹೆಸರಿನಲ್ಲಿ ಸಂಸದರೇ ಅನೈತಿಕ ಪೊಲೀಸ್‌ಗಿರಿ ನಡೆಸಿದರೆ?

Update: 2023-03-10 04:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಶಾಲೆಯ ಮೆಟ್ಟಿಲು ತುಳಿದ ವಿದ್ಯಾರ್ಥಿನಿಯರನ್ನು ‘‘ನೀನು ತಲೆವಸ್ತ್ರ ಯಾಕೆ ಧರಿಸಿದ್ದೀಯಾ?’’ ಎಂದು ಕೇಳಿ ಆಕೆಯನ್ನು ಶಾಲೆಯಿಂದ ಹೊರ ಹಾಕಿದ ಮನಸ್ಥಿತಿಯೇ ಇದೀಗ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯೊಬ್ಬಳನ್ನು ‘‘ನೀನು ಕುಂಕುಮ ಯಾಕೆ ಧರಿಸಿಲ್ಲ? ನಿನ್ನ ಗಂಡ ಬದುಕಿಲ್ಲವಾ? ಸುಜಾತ ಎಂದು ಹೆಸರಿಟ್ಟುಕೊಂಡಿದ್ದೀಯಾ? ನಿನಗೆ ಕಾಮನ್ ಸೆನ್ಸ್ ಇಲ್ಲವಾ? ಯಾರೋ ಕಾಸು ಕೊಡುತ್ತಾರೆ ಎಂದು ಮತಾಂತರಾನೂ ಆಗಿ ಬಿಡುತ್ತೀರಾ...’’ ಎಂದು ತರಾಟೆಗೆ ತೆಗೆದುಕೊಂಡಿದೆ. ಈ ಅನೈತಿಕ ಪೊಲೀಸ್‌ಗಿರಿಯನ್ನು ಯಾವನೋ ಸಂಘಪರಿವಾರ ಕಾರ್ಯಕರ್ತ ನಡೆಸಿದ್ದರೆ ಆತನ ಮೇಲೆ ಪೊಲೀಸ್ ದೂರು ಕೊಟ್ಟು ಪ್ರಕರಣವನ್ನು ಮುಗಿಸಿ ಬಿಡಬಹುದಾಗಿತ್ತು. ಆದರೆ ಈ ಕೃತ್ಯ ಎಸಗಿರುವುದು ಕೋಲಾರದ ಸಂಸದ ಎಸ್. ಮುನಿಸ್ವಾಮಿ. ಇವರು ತರಾಟೆಗೆ ತೆಗೆದುಕೊಂಡಿರುವುದು ತನ್ನ ಮನೆಮಗಳನ್ನೋ, ಕುಟುಂಬದ ಸದಸ್ಯರನ್ನೋ ಆಗಿದ್ದಿದ್ದರೆ ಆತನ ವೈಯಕ್ತಿಕ ವಿಷಯವೆಂದು ಉದಾಸೀನ ಮಾಡಬಹುದಿತ್ತೇನೋ. ವಿಪರ್ಯಾಸವೆಂದರೆ, ಕೋಲಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಬಳಿಕ, ಮಳಿಗೆಯೊಂದರಲ್ಲಿ ಭಾಗವಹಿಸಿದ್ದ ಒಬ್ಬ ಸ್ವಾವಲಂಬಿ ಮಹಿಳೆಯ ಜೊತೆಗೆ ಸಂಸದರು ಅಸಭ್ಯವಾಗಿ ವರ್ತಿಸಿದ್ದಾರೆ. ಸಂಸದರಿಗೆ ಗುರುತಿಸುವ ಕಣ್ಣುಗಳಿದ್ದರೆ, ಆ ವಸ್ತು ಪ್ರದರ್ಶನ ಮಳಿಗೆಯಲ್ಲಿ ಭಾಗವಹಿಸಿರುವ ಮಹಿಳೆಯರ ಸಾಧನೆಗಳನ್ನು ಶ್ಲಾಘಿಸಬೇಕಾಗಿತ್ತು. ಕುಂಕುಮಕ್ಕೂ ಮಹಿಳಾ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೂ ಏನು ಸಂಬಂಧ? ವಸ್ತು ಪ್ರದರ್ಶನ ಮಳಿಗೆಯಲ್ಲಿ ಭಾಗವಹಿಸುವ ಮಹಿಳೆಯರೆಲ್ಲರೂ ಕಡ್ಡಾಯವಾಗಿ ಕುಂಕುಮವನ್ನು ಧರಿಸಲೇ ಬೇಕು ಎನ್ನುವ ನಿಯಮವನ್ನು ಅಲ್ಲಿ ಹೇರಲಾಗಿತ್ತೆ? ಹೇರಲಾಗಿಲ್ಲ ಎಂದಾದರೆ, ಯಾವುದೋ ಮನೆಯ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಅನೈತಿಕ ಪೊಲೀಸ್‌ಗಿರಿಯನ್ನು ನಡೆಸುವುದಕ್ಕೆ ಸಂಸದರಿಗೆ ಅನುಮತಿಯನ್ನು ನೀಡಿದವರು ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ನಾಡಿನ ಜನತೆ ಕೇಳುತ್ತಿದ್ದಾರೆ.

‘‘ನೀವು ತಲೆವಸ್ತ್ರ ಯಾಕೆ ಧರಿಸುತ್ತೀರಿ?’’ ಎಂಬ ಪ್ರಶ್ನೆಗೂ ‘‘ನೀನು ಯಾಕೆ ಕುಂಕುಮ ಧರಿಸಿಲ್ಲ?’’ ಎನ್ನುವ ಪ್ರಶ್ನೆಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಸಾರ್ವಜನಿಕವಾಗಿ ಒಂದು ಮಹಿಳೆಯನ್ನು ‘‘ನೀನು ಯಾಕೆ ಕುಂಕುಮ ಧರಿಸಿದ್ದೀಯ?’’ ಎಂದು ಕೇಳುವುದಕ್ಕಿಂತಲೂ ಅತಿಕ್ರಮಣಕಾರಿಯಾದುದು ‘‘ನೀನು ಯಾಕೆ ಕುಂಕುಮ ಧರಿಸಿಲ್ಲ?’’ ಎನ್ನುವ ಪ್ರಶ್ನೆ. ಸಂಸದರು ಒಂದು ವೇಳೆ ಒಬ್ಬ ಮಹಿಳೆಯನ್ನು ‘‘ನೀನು ಯಾಕೆ ಕುಂಕುಮ ಧರಿಸಿದ್ದೀಯಾ? ಯಾಕೆ ತಾಳಿ ಧರಿಸಿದ್ದೀಯ?’’ ಎಂದು ಪ್ರಶ್ನಿಸಿದ್ದರೆ, ಅದನ್ನು ಒಂದು ಧಾರ್ಮಿಕ ಸಂಪ್ರದಾಯ, ವೈವಿಧ್ಯದ ಕುರಿತಂತೆ ಅವರಲ್ಲಿರುವ ಅಸಹಿಷ್ಣುತೆಯೆಂದು ಪರಿಗಣಿಸಿ ಖಂಡಿಸಬಹುದಾಗಿತ್ತು. ಮಹಿಳೆಯನ್ನು ನೀನು ‘‘ಕುಂಕುಮ ಧರಿಸಲೇ ಬೇಕು..ಯಾಕೆ ಧರಿಸಿಲ್ಲ?.

ತಲೆವಸ್ತ್ರ ಧರಿಸಲೇ ಬೇಕು. ಯಾಕೆ ಧರಿಸಿಲ್ಲ’’ ಎಂದು ಸಾರ್ವಜನಿಕವಾಗಿ ಒಬ್ಬ ಸಂಸದ ಒತ್ತಾಯಿಸುತ್ತಿದ್ದಾನೆ ಎನ್ನುವುದು ಆಕೆಯ ಮೇಲೆ ಒಂದು ಸಂಪ್ರದಾಯವನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದ್ದಾನೆ ಎಂದು ಅರ್ಥ. ನಮ್ಮ ಸಮಾಜದಲ್ಲಿ ಕುಂಕುಮ ಎನ್ನುವುದು ಕೇವಲ ಆಲಂಕಾರಿಕ ವಸ್ತುವಾಗಿಯಷ್ಟೇ ಪರಿಗಣಿತವಾಗಿಲ್ಲ. ‘‘ನಿನ್ನ ಗಂಡ ಬದುಕಿಲ್ಲವಾ?’’ ಎನ್ನುವ ಸಂಸದರ ಪ್ರಶ್ನೆಯೇ ಅದನ್ನು ಸ್ಪಷ್ಟಪಡಿಸುತ್ತದೆ. ಕುಂಕುಮ, ತಾಳಿ, ಬಳೆ ಈ ದೇಶದಲ್ಲಿ ಬರಿಯ ಆಲಂಕಾರಿಕ ವಸ್ತುಗಳೇ ಆಗಿದ್ದರೆ, ಗಂಡ ತೀರಿ ಹೋದ ಹೆಣ್ಣು ಕುಂಕುಮ ಧರಿಸಬಾರದು, ಬಳೆ ಧರಿಸಬಾರದು ಎನ್ನುವ ನಿಯಮವೂ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಗಂಡ ತೀರಿ ಹೋದ ಮಹಿಳೆಯನ್ನು ಅಮಂಗಳೆ ಎಂದು ಭಾವಿಸುವ ಜನರು ಇನ್ನೂ ನಮ್ಮ ನಡುವೆ ಇದ್ದಾರೆ. ಅದಕ್ಕೆ ಸಾಕ್ಷಿಯಾಗಿದೆ ಸಂಸದ ಎಸ್. ಮುನಿಸ್ವಾಮಿ ಅವರ ವರ್ತನೆ.

‘‘ಕುಂಕುಮ ಯಾಕೆ ಧರಿಸಿಲ್ಲ? ನಿನ್ನ ಗಂಡ ಬದುಕಿಲ್ಲವಾ?’’ ಎನ್ನುವ ಪ್ರಶ್ನೆ ಮುಂದಿನ ದಿನಗಳಲ್ಲಿ ‘‘ನಿನ್ನ ಗಂಡ ಬದುಕಿಲ್ಲ. ಆದರೂ ಯಾಕೆ ಕುಂಕುಮ ಧರಿಸಿದ್ದೀಯ?’’ ಎನ್ನುವ ಪ್ರಶ್ನೆಯಾಗಿ ಬದಲಾಗುವುದಕ್ಕೆ ಈ ರಾಜ್ಯದಲ್ಲಿ ಹೆಚ್ಚು ಸಮಯ ಬೇಡ. ಇಂಥವರು ಕುಂಕುಮ ಧರಿಸಬೇಕು, ಇಂಥವರು ಧರಿಸಬಾರದು ಎನ್ನುವ ನಿಯಮವೊಂದನ್ನು ಸರಕಾರವೇ ಸಾರ್ವಜನಿಕವಾಗಿ ಜಾರಿಗೊಳಿಸುವ ದಿನಗಳು ದೂರವಿಲ್ಲ. ಹಣೆಗೆ ಕುಂಕುಮವನ್ನು ಇಡಬೇಕೆ? ಬೇಡವೆ? ಎನ್ನುವುದನ್ನು ನಿರ್ಧರಿಸಬೇಕಾದುದು ಮಹಿಳೆಯರೇ ಹೊರತು, ಪುರುಷರಲ್ಲ. ಇದು ಮಹಿಳೆಯರ ತಲೆವಸ್ತ್ರಕ್ಕೂ ಅನ್ವಯವಾಗುತ್ತದೆ. ಕುಂಕುಮ, ಬಳೆಯ ವಿಷಯದಲ್ಲಿ ಇದು ಇನ್ನಷ್ಟು ವಿಸ್ತಾರವನ್ನು ಪಡೆಯುತ್ತದೆ. ಕುಂಕುಮ ಧರಿಸಿದವಳು, ಧರಿಸದವಳು ಎನ್ನುವುದು ವಿಧವೆ-ಮುತ್ತೈದೆ ಎಂದು ಹೆಣ್ಣನ್ನೇ ವಿಭಜಿಸುವ ಹಂತಕ್ಕೆ ತಲುಪುತ್ತದೆ. ಇದು ಕೊನೆಯಲ್ಲಿ ಮಂಗಳೆ-ಅಮಂಗಳೆ ಎನ್ನುವ ವಿಕೃತಿಯೊಂದಿಗೆ ಮುಕ್ತಾಯಗೊಳ್ಳುತ್ತದೆ.

‘‘ಗಂಡ ಸತ್ತವರು ಕುಂಕುಮವನ್ನು ಇಡುವುದು ತಪ್ಪೇ?’’ ಎನ್ನುವ ಪ್ರಶ್ನೆಗೂ ಸಂಸದ ಮುನಿಸ್ವಾಮಿ ಉತ್ತರಿಸಬೇಕಾಗುತ್ತದೆ. ಪತಿಯನ್ನು ಕಳೆದುಕೊಂಡ ಹೆಣ್ಣು ಕುಂಕುಮ, ಬಳೆ ಧರಿಸದಂತೆ ನಿಷೇಧ ಹೇರಿ ಆಕೆಯನ್ನು ಅಮಂಗಳೆಯೆಂದು ಗುರುತಿಸುವುದರ ವಿರುದ್ಧ ಈ ನಾಡಿನ ನೂರಾರು ಮಹಾತ್ಮರು ಧ್ವನಿಯೆತ್ತುತ್ತಾ ಬಂದಿದ್ದಾರೆ. ಈ ಶೋಷಣೆಯ ವಿರುದ್ಧ ನಾರಾಯಣ ಗುರುವಿನಿಂದ ಹಿಡಿದು ಡಾ. ಬಿ. ಆರ್. ಅಂಬೇಡ್ಕರ್‌ವರೆಗೆ ಹಲವರು ಹೋರಾಟಗಳನ್ನು ಮಾಡಿದ್ದಾರೆ. ಪತಿ ಅಗಲಿದ ಮಹಿಳೆಯರನ್ನೇ ದೇವಸ್ಥಾನದ ಅರ್ಚಕರನ್ನಾಗಿಸಿ ‘ವಿಧವೆ’ ಎನ್ನುವ ಕಂದಾಚಾರದ ವಿರುದ್ಧ ನಮ್ಮದೇ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕುದ್ರೋಳಿ ದೇವಸ್ಥಾನದಲ್ಲಿ ನಡೆದ ಕ್ರಾಂತಿಯ ಅರಿವೂ ಸಂಸದರಿಗಿದ್ದಂತಿಲ್ಲ. ‘ಗಂಡ ಬದುಕಿರುವ ಮಹಿಳೆಯರು ಕುಂಕುಮ ಧರಿಸಬೇಕು, ಉಳಿದವರು ಧರಿಸಬಾರದು’ ಎನ್ನುವ ನಿಯಮ ಮಾಡಿಟ್ಟವರೇ, ದಲಿತರು ಏನನ್ನು ಮಾಡಬೇಕು ಏನನ್ನು ಮಾಡಬಾರದು? ಎನ್ನುವ ನಿಯಮಗಳನ್ನೂ ಬರೆದಿಟ್ಟಿದ್ದಾರೆ ಎನ್ನುವ ಅರಿವು ಸಂಸದ ಮುನಿಸ್ವಾಮಿಗಿರಬೇಕು.

‘ಕುಂಕುಮ ಯಾಕೆ ಧರಿಸಿಲ್ಲ?’ ಎಂದು ಮುನಿಸ್ವಾಮಿ ಪ್ರಶ್ನಿಸಿದಂತೆಯೇ, ನಾಳೆ ‘‘ದೇವಸ್ಥಾನದೊಳಗೆ ಯಾಕೆ ಪ್ರವೇಶಿಸಿದ್ದೀಯಾ? ನಮ್ಮ ಸಮಾನವಾಗಿ ಯಾಕೆ ಕುಳಿತಿದ್ದೀಯಾ? ಮೀಸೆ ಯಾಕೆ ಇಟ್ಟಿದ್ದೀಯಾ?...’’ ಮೊದಲಾದ ಪ್ರಶ್ನೆಗಳನ್ನು ಮುನಿಸ್ವಾಮಿಯವರಿಗೂ ಕೆಲವರು ಕೇಳುವ ಸಾಧ್ಯತೆಗಳಿವೆ. ಈ ಪ್ರಶ್ನೆಗಳನ್ನು ಅವರು ಮುನಿಸ್ವಾಮಿಗೆ ಈವರೆಗೆ ಕೇಳದಿರಲು ಮುಖ್ಯ ಕಾರಣ ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದಿರುವ ಈ ದೇಶದ ಸಂವಿಧಾನ. ಅದೇ ಸಂವಿಧಾನ ಮಹಿಳೆಯರಿಗೂ ಅವರ ಹಕ್ಕುಗಳನ್ನು ನೀಡಿದೆ. ತಾನು ಪುರುಷ ಎನ್ನುವ ಹಮ್ಮಿನಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಮರೆತು ಮಹಿಳೆಯ ಹಕ್ಕನ್ನು ಪ್ರಶ್ನಿಸಲು ಹೊರಟರೆ, ಬಿಜೆಪಿಯೊಳಗಿರುವ ಮೇಲ್‌ಜಾತಿಯ ನಾಯಕರು ಒಂದು ದಿನ ಮುನಿಸ್ವಾಮಿಯ ಹಕ್ಕುಗಳನ್ನು ಪ್ರಶ್ನಿಸುವ ಧೈರ್ಯ ಮಾಡಬಹುದು. ತಾನು ಅವಮಾನಿಸಿರುವುದು ಕೇವಲ ಒಬ್ಬ ಮಹಿಳೆಯನ್ನಲ್ಲ, ತನ್ನನ್ನು ಸಂಸದನನ್ನಾಗಿಸಿದ ಸಂವಿಧಾನವನ್ನು ಎನ್ನುವುದನ್ನು ಅರಿತು ಮುನಿಸ್ವಾಮಿಯವರು ನಾಡಿನ ಸಕಲ ಮಹಿಳೆಯರ ಕ್ಷಮೆಯನ್ನು ಯಾಚಿಸಬೇಕಾಗಿದೆ.

Similar News