‘ಮತದಾನದ ಬಗ್ಗೆ ಜನತೆಯಲ್ಲಿರುವ ನಿರಾಸಕ್ತಿ’ ಚುನಾವಣಾ ಆಯೋಗದ ಮುಂದಿರುವ ದೊಡ್ಡ ಸವಾಲು: ರಾಜೀವ್ ಕುಮಾರ್
ಬೆಂಗಳೂರು, ಮಾ.10: ‘ಮತದಾನದ ಬಗ್ಗೆ ನಗರ ಪ್ರದೇಶ ಹಾಗೂ ಯುವ ಜನತೆಯಲ್ಲಿರುವ ನಿರಾಸಕ್ತಿಯನ್ನು ಹೋಗಲಾಡಿಸುವುದು ಚುನಾವಣಾ ಆಯೋಗದ ಪ್ರಮುಖ ಸವಾಲಾಗಿದೆ’ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭಾ ಚುನಾವಣೆ-2023ರ ಸಿದ್ದತೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ರಾಜ್ಯ ಪ್ರವಾಸದಲ್ಲಿರುವ ಅವರು, ಮತದಾರರ ಹೆಸರು ಪರಿಶೀಲನೆ, ಮತದಾನ ಜಾಗೃತಿ ಸೇರಿದಂತೆ ಮುಂತಾದ ಮಾಹಿತಿಗಳನ್ನು ಒದಗಿಸುವ 8 ಎಲ್‍ಇಡಿ ಮೊಬೈಲ್ ವ್ಯಾನ್‍ಗಳಿಗೆ ಚಾಲನೆ ಹಾಗೂ ರಾಜ್ಯ ಚುನಾವಣೆಯ ಇತಿಹಾಸ ಮತ್ತು ಮತದಾನ ಜಾಗೃತಿ ಕುರಿತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
‘ಜನರು ಮತದಾನದಲ್ಲಿ ಪಾಲ್ಗೊಳ್ಳದೆ ಇರುವ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಇರುವ ಕಾರಣಗಳು, ನಂಬಿಕೆಗಳು, ಅಡೆತಡೆಗಳು, ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕ್ಲಿಷ್ಟಕರ. ಇಂತಹ ನಿರಾಸಕ್ತಿಯ ಮತದಾರರಲ್ಲಿ ಒಂದು ಮತದಿಂದ ಆಗಬಹುದಾದ ಕ್ರಾಂತಿಕಾರಿ ಬದಲಾವಣೆಯ ಬಗ್ಗೆ ಅರಿವನ್ನು ಮೂಡಿಸಲು ಸಾಧ್ಯವೇ, ಸಾಂಘಿಕವಾದ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಗಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.
‘ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನದಲ್ಲಿ ಜನರು ಹಬ್ಬಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಇದರಲ್ಲೂ ಆಸಕ್ತಿಯನ್ನು ತೋರುವಂತೆ ಮಾಡಬೇಕಾಗಿದೆ. ಇಂದಿನ ಯುವ ಜನತೆ ತಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಇದನ್ನ ಹೋಗಲಾಡಿಸುವ ದೊಡ್ಡ ಸವಾಲು ನಮ್ಮ ಎದುರಿಗಿದೆ’ ಎಂದು ಅವರು ಹೇಳಿದರು.
ಈ ವೇಳೆ ಹಿರಿಯ ಮತ್ತು ತೃತಿಯ ಲಿಂಗಿ ಮತದಾರರಿಗೆ ಸನ್ಮಾನಿಸಲಾಯಿತು ಹಾಗೂ ಯುವ ಮತದಾರರಿಗೆ ಮತದಾರ ಚೀಟಿ ವಿತರಣೆ ಮಾಡಲಾಯಿತು. ನಂತರ ಚಿತ್ರಕಲಾವಿದರಿಂದ ಮುಖ್ಯಚುನಾವಣಾ ಆಯುಕ್ತರ ಹಾಗೂ ಮತದಾನದ ಜಾಗೃತಿ ಕುರಿತ ಚಿತ್ರವನ್ನು ಕಲಾವಿದರು ಸ್ಥಳದಲ್ಲಿಯೇ ಚಿತ್ರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ ಮೀನಾ, ಅಪರ ಮುಖ್ಯ ಚುನಾವಣಾಧಿಕಾರಿ ಎಂ.ವೆಂಕಟೇಶ್ ಕುಮಾರ್, ರಾಜೇಂದ್ರ ಚೋಳನ್, ಭಾರತ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.