ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ BJP ಬೆಂಬಲಿಸಿ: ಜೆ.ಪಿ.ನಡ್ಡಾ
ಬೆಂಗಳೂರು, ಮಾ. 10: ‘ವೈಯಕ್ತಿಕ ಮತ್ತು ಪಕ್ಷಕ್ಕಾಗಿ ಮತ ಕೇಳುತ್ತಿಲ್ಲ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮನವಿ ಮಾಡಿದರು.
ಶುಕ್ರವಾರ ಶಿವಾಜಿನಗರದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮಾ.12ರಂದು ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಇದು ಬದಲಾವಣೆಯ ಸಂಕೇತ ಎಂದರು.
ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ಟರ್ಮಿನಲ್ 2 ಅನ್ನು 5 ಸಾವಿರ ಕೋಟಿ ರೂ.ಹೂಡಿಕೆ ಮಾಡಿ ಉದ್ಘಾಟನೆ ಮಾಡಲಾಗಿದೆ. ಕೆಂಪೇಗೌಡರ ಬೃಹತ್ ಮೂರ್ತಿ ಅನಾವರಣ ಮಾಡಲಾಗಿದೆ. ಬೆಂಗಳೂರು ಹೊರ ವರ್ತುಲ ರಸ್ತೆ ನಿರ್ಮಾಣ ನಡೆದಿದೆ. ರಾಜ್ಯದ ವಿಕಾಸ ಆಗಿದೆಯಲ್ಲವೇ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕವು ದೇಶದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಆವಿಷ್ಕಾರ ಕ್ಷೇತ್ರದಲ್ಲಿ ಪ್ರಥಮ ರಾಜ್ಯವಾಗಿ ಹೊರಹೊಮ್ಮಿದೆ. ತುಮಕೂರಿನಲ್ಲಿ ಎಚ್‍ಎಎಲ್ ಕಾರ್ಖಾನೆ ಸ್ಥಾಪಿಸಿ ಹೆಲಿಕಾಪ್ಟರ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಡ್ಡಾ ಹೇಳಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಲಾಗಿದೆ. ಇನ್ನೂ 13 ವಿಮಾನ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. 9 ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿ ಆಗುತ್ತಿದೆ. ರಾಜ್ಯದಲ್ಲಿ ಇದೇ ರೀತಿ ಅಭಿವೃದ್ಧಿ ಮುಂದುವರೆಯಲು ಬಿಜೆಪಿಗೆ ಮತ ನೀಡಿ ಎಂದು ಅವರು ಕೋರಿದರು.
ಕರ್ನಾಟಕವು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿತ್ತು. ಭ್ರಷ್ಟಾಚಾರ, ಹಗರಣಗಳು ಸಿದ್ದರಾಮಯ್ಯ ಅವಧಿಯಲ್ಲಿ ಸದಾಕಾಲ ಇತ್ತಲ್ಲವೇ? ಶಿವಾಜಿನಗರದಲ್ಲಿ ಭವ್ಯ ಯಾತ್ರೆ ನಡೆದಿದೆ. ನಿಮ್ಮ ಉತ್ಸಾಹ ಗಮನಿಸಿದರೆ ಮತ್ತೊಮ್ಮೆ ಇಲ್ಲಿ ಬಿಜೆಪಿ ಗೆಲ್ಲುವುದು ಸ್ಪಷ್ಟವಾಗಿದೆ ಎಂದರು.