ಮಹಿಳಾ ನಿಂದನೆ ಪ್ರಕರಣ: ಸಂಸದ ಮುನಿಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಮಹಿಳಾ ಸಂಘಟನೆಗಳ ಆಗ್ರಹ

Update: 2023-03-10 16:45 GMT

ಬೆಂಗಳೂರು, ಮಾ.10: ಮಹಿಳೆಯೊಬ್ಬರು ಹಣೆಗೆ ಕುಂಕುಮ ಇಟ್ಟಿಲ್ಲ ಎಂಬ ವಿಚಾರಕ್ಕೆ ಸಂಸದ ಮುನಿಸ್ವಾಮಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯನ್ನು ನಿಂದಿಸಿರುವ ಪ್ರಕರಣ ಪ್ರಗತಿಪರ ಹಾಗೂ ಮಹಿಳಾ ಸಂಘಟನೆಗಳ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಸದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಮಾ.8ರ ಮಹಿಳಾ ದಿನಾಚರಣೆಯಂದು ಕೋಲಾರದ ಮತ್ಯಾಲಪೇಟೆಯ ವಸ್ತು ಪ್ರದರ್ಶನ ಮೇಳವೊಂದಲ್ಲಿ ಘಟನೆ ನಡೆದಿದ್ದು, ಸಂಸದ ಮುನಿಸ್ವಾಮಿ ಹಲವು ಪ್ರಗತಿಪರ ಹೋರಾಟಗಾರರು ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದು, ಸಂಸದ ಮುನಿಸ್ವಾಮಿ ಅವರ ನಡೆ ಸಂವಿಧಾನ ವಿರೋಧಿ. ಪುರುಷ ಪ್ರಧಾನ ಚಿಂತನಾಕ್ರಮವನ್ನು ಹುಟ್ಟಿಸುವ ಕ್ರೌರ್ಯದ ಪರಮಾವಧಿ ಇದಾಗಿದ್ದು, ಒಬ್ಬ ಹೆಣ್ಣು ಏಕಾಂಗಿಯಾಗಿ ನಿಂತಿರುವಾಗ ನೀನು ಕುಂಕುಮ ಹಾಕಿದ್ದೀಯಾ, ನಿನ್ನ ಗಂಡ ಜೀವಂತವಿದ್ದಾನ ಎಂದು ಕೇಳುವ ಹಕ್ಕನ್ನು ಸಂವಿಧಾನ ಯಾವ ಸಂಸದನಿಗೂ ನೀಡಿಲ್ಲ. ಅವರಾಡಿದ ಮಾತುಗಳ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದೇ ಆದರೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾದ ಮಾತುಗಳು ಇವಾಗಿವೆ. ಆದ್ದರಿಂದ ಅಮಾಯಕ ಹೆಣ್ಣಿನ ಮೇಲೆ ಬಹಿರಂಗವಾಗಿ ನಡೆಸಿದ ಈ ದೌರ್ಜನ್ಯವನ್ನು ನಾನೊಬ್ಬ ಲೇಖಕನಾಗಿ ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ಮಾತನಾಡಿದ್ದು, ಮೊದಲನೆಯದಾಗಿ ಮುನಿಸ್ವಾಮಿ ಅವರಿಗೆ ಯಾವಾಗ ಎಲ್ಲಿ ಹೇಗೆ ಮಾತನಾಡಬೇಕೆಂಬ ಸೌಜನ್ಯವಿಲ್ಲ, ದುಡಿಯುವ ಮಹಿಳೆಯರು ಕೆಲಸದ ಅವಧಿಯಲ್ಲಿ ಕುಂಕುಮ, ಸೆರಗು ಇವುಗಳ ಬಗ್ಗೆ ತಲೆಕೆಡಿಸಿಕೊಂಡು ಕೂರಲಿಕ್ಕೆ ಆಗುವುದಿಲ್ಲ, ಗ್ರಾಮೀಣ ಮಹಿಳೆಯರು ಹೆಚ್ಚಾಗಿ ಬೆವರಿನಲ್ಲಿ ಕೆಲಸ ಮಾಡುವುದರಿಂದ ಇಂತಹ ಸಂದರ್ಭದಲ್ಲಿ ಕುಂಕುಮ ಅಳಿಸಿ ಹೋಗಿರಲೂಬಹುದಲ್ಲವೇ, ಕುಂಕುಮ ಇಟ್ಟುಕೊಂಡರೇ ಮಾತ್ರ ಹೆಣ್ಣು ಎನ್ನುವಂತಹ ಪೂರ್ವಗ್ರಹ ಮನಸ್ಥಿತಿ ಹೋಗಬೇಕು. ಕಾಲ ಬದಲಾಗಿದೆ. ಯಾವುದು ಇಲ್ಲದೆಯೇ ಮಹಿಳೆಯರು ಬದುಕುವಂತಹ ಕಾಲವಿದು. ಹಿಂದಿನ ಕಾಲದ ಸಂಪ್ರದಾಯಸ್ಥರೇ ಎಲ್ಲವನ್ನೂ ಧಿಕ್ಕರಿಸಿ ನಡೆಯುವಂತಹ ಈ ಹೊತ್ತಿನಲ್ಲಿ ಇಂತಹ ಅಸಮಂಜಸವಾದ ಪ್ರಶ್ನೆಗಳನ್ನು ಕೇಳುವ ಅಗತ್ಯವಿರಲಿಲ್ಲ. ಮುಂದಾದರೂ ಪುರುಷರು ಮಹಿಳೆಯರ ಕುರಿತು ಮಾತನಾಡುವ ಮುನ್ನ ಯೋಚಿಸುವ ಅಗತ್ಯ ಇದೆ ಎಂದಿದ್ದಾರೆ.

ಇನ್ನು ಹಲವಾರು ಪ್ರಗತಿಪರ ಹೋರಾಟಗಾರರು, ಮಹಿಳಾ ಚಿಂತಕರು, ಸಾಹಿತಿಗಳು ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದರಿಗೆ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Similar News