ಚುನಾವಣಾ ಆಯುಕ್ತರ ನೇಮಕಾತಿ: ಕೇಂದ್ರದ ವಿರುದ್ಧ ಸುಪ್ರೀಂ ರಾಮಬಾಣ

Update: 2023-03-11 03:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಚುನಾವಣಾ ಆಯೋಗದ ನಿರ್ಧಾರಗಳು ಹೆಚ್ಚು ಚರ್ಚೆಗೆ ಬರುತ್ತಿವೆ. ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನ್ನುವ ಆರೋಪಗಳು ನಾಲ್ಕು ದಿಕ್ಕಿನಿಂದಲೂ ಕೇಳಿ ಬರುತ್ತಿವೆ. ಇತ್ತೀಚೆಗೆ ಮಹಾರಾಷ್ಟ್ರದ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ, ಚುನಾವಣಾ ಆಯೋಗವನ್ನು ಕೆಳಮಟ್ಟದ ಭಾಷೆಯಲ್ಲಿ ವ್ಯಂಗ್ಯವಾಡಿದ್ದರು. ಕೇಂದ್ರ ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗ, ಬಿಜೆಪಿಯ ನಾಯರ ಚುನಾವಣಾ ಅಕ್ರಮಗಳಿಗೆ, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗಳಿಗೆ ವೌನ ಸಮ್ಮತಿ ನೀಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಪದೇ ಪದೇ ದೂರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿ ಮಹತ್ವದ ತೀರ್ಪೊಂದನ್ನು ನೀಡಿರುವುದು ಪಾರದರ್ಶಕ ಚುನಾವಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಮುಂಬರುವ ಚುನಾವಣೆಗಳಲ್ಲಿ ಇದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ್ತರ ನೇಮಕಾತಿಯನ್ನು ಆಯ್ಕೆ ಸಮಿತಿಯೊಂದು ಮಾಡಬೇಕು ಹಾಗೂ ಈ ಸಮಿತಿಯಲ್ಲಿ ಪ್ರಧಾನಿ, ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕರಿರಬೇಕು ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ಚುನಾವಣಾ ಆಯೋಗದ ಆಯುಕ್ತರನ್ನು ಸರಕಾರವೇ ನೇಮಿಸುವ ವಿಧಾನವನ್ನು ಬದಲಿಸಿ, ಮೇಲಿನ ಸಮಿತಿಯ ಮೂಲಕ ನೇಮಕಾತಿಯನ್ನು ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪು ನೀಡಿತ್ತು. ಜೊತೆಗೆ, ಚುನಾವಣಾ ಆಯೋಗಕ್ಕೆ ಖಾಯಂ ಸಚಿವಾಲಯವೊಂದನ್ನು ಸ್ಥಾಪಿಸುವ ಅಗತ್ಯವಿದೆ ಎಂಬ ಸಲಹೆಯನ್ನೂ ನ್ಯಾಯಾಲಯ ಮುಂದಿಟ್ಟಿತು. ಸರಕಾರವು ಸುಪ್ರೀಂ ಕೋರ್ಟ್‌ನ ಈ ತೀರ್ಪಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಯಾಕೆಂದರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗಳಲ್ಲಿ ನ್ಯಾಯಾಂಗ ಮಧ್ಯಪ್ರವೇಶವನ್ನು ವಾದ ಮಂಡನೆಯ ವೇಳೆ ಸರಕಾರ ವಿರೋಧಿಸಿತ್ತು. ‘‘ಈ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಿದರೆ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಅಧಿಕಾರಗಳ ನಡುವಿನ ಗೆರೆಯ ಉಲ್ಲಂಘನೆಯಾಗುತ್ತದೆ’’ ಎಂದು ಕೇಂದ್ರ ಸರಕಾರ ತನ್ನ ವಾದವನ್ನು ಮುಂದಿಟ್ಟಿತ್ತು. ಆದರೆ, ಸ್ವತಂತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹೊಂದುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಕಟುವಾಗಿ ಪ್ರತಿಪಾದಿಸಿತು. ‘‘ಚುನಾವಣೆಯೆನ್ನುವುದು ಪ್ರಜಾಪ್ರಭುತ್ವದ ಜೀವಾಳ. ಅಧಿಕಾರದಲ್ಲಿರುವವರನ್ನು ಓಲೈಸುವ ಪಕ್ಷಪಾತಿ ಚುನಾವಣಾ ಉಸ್ತುವಾರಿಗಳ ನೇಮಕವು ಪ್ರಜಾಸತ್ತೆಗೆ ಮಾರಕವಾಗಿದೆ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಕಳೆದ ಎರಡು ಮಹಾಚುನಾವಣೆಯ ಭಾರೀ ಗೆಲುವಿನ ಹಿಂದೆ ಚುನಾವಣಾ ಆಯೋಗ ಪರೋಕ್ಷವಾಗಿ ಬಿಜೆಪಿ ಪರವಾಗಿ ಕೆಲಸ ಮಾಡಿದೆ ಎನ್ನುವ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಚುನಾವಣಾ ಆಯೋಗ ತನ್ನ ನಿಯಂತ್ರಣದಲ್ಲಿರುವ ಧೈರ್ಯದಿಂದ ಕೇಂದ್ರ ಸರಕಾರ, ಜನಾಭಿಪ್ರಾಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಎಲ್ಲೆಲ್ಲ ಬಿಜೆಪಿಯೇತರ ಸರಕಾರ ಅಸ್ತಿತ್ವದಲ್ಲಿದೆಯೋ ಅಲ್ಲಿ, ಚುನಾವಣಾ ಆಯೋಗದ ಮುಖ್ಯಸ್ಥರ ಮೂಲಕ ಆ ಸರಕಾರಗಳನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಾ ಬರುತ್ತಿದೆ. ಹೀಗಿರುವಾಗ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು ಎನ್ನುವು ಕಾರಣಕ್ಕೆ ಕೇಂದ್ರ ಸರಕಾರವು, ಚುನಾವಣಾ ಆಯೋಗದ ಮೇಲಿನ ನಿಯಂತ್ರಣವನ್ನು ಸುಲಭದಲ್ಲಿ ಬಿಟ್ಟು ಕೊಡುವ ಸಾಧ್ಯತೆಯಿಲ್ಲ. ಸುಪ್ರೀಂಕೋರ್ಟ್ ತೀರ್ಪು ಕೇಂದ್ರ ಸರಕಾರಕ್ಕೆ ಇರಿಸು ಮುರಿಸನ್ನುಂಟು ಮಾಡಿದೆಯಾದರೂ ತೀರ್ಪನ್ನು ಅದು ಅನುಷ್ಠಾನಕ್ಕಿಳಿಸುವ ಸಾಧ್ಯತೆಗಳು ಕಡಿಮೆ. ಅಥವಾ ತೀರ್ಪನ್ನು ಅಡ್ಡ ದಾರಿಯ ಮೂಲಕ ನಿವಾರಿಸಿಕೊಳ್ಳುವ ಸಾಧ್ಯತೆಗಳಿವೆ. ಚುನಾವಣಾ ಆಯುಕ್ತರ ನೇಮಕವನ್ನು ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕರನ್ನು ಒಳಗೊಂಡ ಸಮಿತಿಯು ಮಾಡಬೇಕು ಎಂಬುದಾಗಿ ಈಗ ಸುಪ್ರೀಂ ಕೋರ್ಟ್ ಹೇಳಿದೆ ನಿಜ. ಇವೇ ಸದಸ್ಯರನ್ನು ಒಳಗೊಂಡ ಸಮಿತಿಯೇ ಸಿಬಿಐ ನಿರ್ದೇಶಕರು ಮತ್ತು ಲೋಕಪಾಲರನ್ನೂ ನೇಮಕ ಮಾಡುತ್ತದೆ ಎನ್ನುವುದೂ ನಮ್ಮ ಗಮನದಲ್ಲಿರಬೇಕು.

ಸಿಬಿಐ ಸ್ಥಿತಿ ಏನಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವೂ ಇಲ್ಲ. ಈ ವಿಧಾನದಲ್ಲಿ ಸರಕಾರವು ತನಗೆ ಪರವಾಗಿರುವ ಅಧಿಕಾರಿಗಳ ಪಟ್ಟಿಯೊಂದನ್ನು ಸಮಿತಿಗೆ ನೀಡುತ್ತದೆ. ಅದರಲ್ಲಿ ಯಾರೇ ಆಯ್ಕೆಯಾದರೂ ಅವರು ಸರಕಾರದ ಪರವಾಗಿಯೇ ಕೆಲಸ ಮಾಡುತ್ತಾರೆ. ಅದರಿಂದಾಗಿ ಚುನಾವಣಾ ಆಯೋಗದಲ್ಲಿ ದೊಡ್ಡ ಬದಲಾವಣೆಯಾಗದು. ಎರಡನೆಯದಾಗಿ, ಚುನಾವಣಾ ಆಯುಕ್ತರ ಸೇವಾ ಶರತ್ತುಗಳನ್ನು ರೂಪಿಸುವ ಮತ್ತು ನಿಯಂತ್ರಿಸುವ ಪರಮಾಧಿಕಾರವನ್ನು ಸಂವಿಧಾನವು ಸಂಸತ್‌ಗೆ ನೀಡಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ನ ತೀರ್ಪನ್ನು ರದ್ದುಪಡಿಸಲು ಅಥವಾ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯ ಸದಸ್ಯರ ರಚನೆಯನ್ನು ತನಗೆ ಬೇಕಾದಂತೆ ಬದಲಾಯಿಸಿಕೊಳ್ಳಲು ಸರಕಾರವು ಮಸೂದೆಯೊಂದನ್ನು ಮಂಡಿಸಬಹುದಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಕೇಂದ್ರೀಯ ಮಾಹಿತಿ ಕಮಿಶನರ್ ಮುಂತಾದ ಬಹುತೇಕ ಎಲ್ಲಾ ಸಂಸ್ಥೆಗಳ ನೇಮಕಾತಿಗಳಲ್ಲಿ ಸರಕಾರ ಹೀಗೆಯೇ ಮಾಡಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರದ ವಿಷಯದಲ್ಲಿ ದೊಡ್ಡ ಮಾರ್ಪಾಟುಗಳನ್ನು ಮಾಡುವುದೇ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು. ಯಾಕೆಂದರೆ, ಅದು ಸರಕಾರ ತೆಗೆದುಕೊಳ್ಳುವ ಮುಂದಿನ ಕ್ರಮವನ್ನು ಅವಲಂಬಿಸಿದೆ. ಆದರೂ, ಈ ಹಂತದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ನಿಜವಾಗಿಯೂ ಐತಿಹಾಸಿಕವೇ. ತನ್ನ ತೀರ್ಪನ್ನು ನಿವಾರಿಸಿಕೊಳ್ಳಲು ಮುಂದೆ ಸರಕಾರ ಮಾಡಬಹುದಾದ ಪ್ರಯತ್ನಗಳನ್ನು ನಿಷ್ಫಲಗೊಳಿಸಲು ಸುಪ್ರೀಂ ಕೋರ್ಟ್ ಸಿದ್ಧವಾಗಿರಬೇಕಾಗಿದೆ. ಯಾಕೆಂದರೆ, ಸುಪ್ರೀಂ ಕೋರ್ಟ್‌ನ ಈ ತೀರ್ಪು ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರವನ್ನು ಕಾಪಾಡುವಲ್ಲಿ ನ್ಯಾಯಾಂಗದ ಪಾತ್ರವನ್ನು ಹೆಚ್ಚಿಸಿದೆಯೇ ವಿನಾಃ ಕಡಿಮೆಗೊಳಿಸಿಲ್ಲ.

Similar News