ಹತ್ತಿರವಾಗುತ್ತಿರುವ ಚುನಾವಣೆ; ದೂರವಾಗುತ್ತಿರುವ ವಿಪಕ್ಷರಂಗದ ಸಾಧ್ಯತೆ

Update: 2023-03-11 11:22 GMT

ಬಿಜೆಪಿಯ ಬಳಿಯಂತೂ ಪ್ರಚಂಡ ಬಹುಮತದ ಅಧಿಕಾರ ಹಾಗೂ ಭಾರೀ ಹಣಬಲ ಎರಡೂ ಇದೆ. ಜೊತೆಗೇ ದೇಶದ ಮಾಧ್ಯಮಗಳೂ ಅದರ ಕೈಯಲ್ಲಿಯೇ ಇವೆ. ಮತ್ತೊಂದೆಡೆ ನರೇಂದ್ರ ಮೋದಿಯವರ ಮುಖವನ್ನೂ ಅದು ಮುಂದೆ ಮಾಡುತ್ತದೆ. ಮೋದಿ ಕೂಡ ತಮ್ಮನ್ನು ತಾವು ಪ್ರಾಜೆಕ್ಟ್ ಮಾಡಿಕೊಳ್ಳುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವವರಲ್ಲ.
ವಿಪಕ್ಷಗಳಿಗೆ ಇಂಥ ಯಾವುದೇ ಅನುಕೂಲಗಳಿಲ್ಲ ಎಂಬುದು ನಿಜವೇ ಆದರೂ, ಬಿಜೆಪಿಯ ವಿರುದ್ಧ ಒಗ್ಗೂಡುವುದಕ್ಕೆ ಸಮಾನ ಮನಃಸ್ಥಿತಿಗೆ ಬರುವಂತಾಗಲು ಮತ್ತು ರಣತಂತ್ರ ರೂಪಿಸಲು ಸ್ವತಃ ಅವು ಇಚ್ಛಾಶಕ್ತಿಯನ್ನಾಗಲೀ ಸಾಮರ್ಥ್ಯವನ್ನಾಗಲೀ ಹೊಂದಿಲ್ಲ ಎಂಬುದೂ ಅಷ್ಟೇ ಸ್ಪಷ್ಟ.


2024ರ ಮಹಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಾಗುವ ಸಾಧ್ಯತೆ ಕ್ಷೀಣಿಸುತ್ತಿದೆಯೆ? ಹಾಗೆ ನೋಡಿದರೆ ಬಿಜೆಪಿಯನ್ನು ಮಣಿಸುವ ನಿಟ್ಟಿನಲ್ಲಿಯ ವಿಪಕ್ಷಗಳ ಒಗ್ಗೂಡುವಿಕೆ ಯಾವಾಗಲೂ ಮರೀಚೆಕೆಯೇ ಆಗಿತ್ತು. ಈಗಂತೂ ಈ ಸಾಧ್ಯತೆಯೇ ಪೂರ್ತಿಯಾಗಿ ಮಸುಕು ಮಸುಕಾಗುತ್ತಿರುವಂತಿದೆ.
2019ರ ಚುನಾವಣೆ ಹೊತ್ತಿನಲ್ಲಿಯೂ ಇದೇ ರೀತಿಯ ವಿಪಕ್ಷರಂಗದ ಕಲ್ಪನೆಯನ್ನು ಹುಟ್ಟುಹಾಕಲಾಯಿತು. ಪ್ರಮುಖ ಪಕ್ಷಗಳ ನಾಯಕರ ಹಲವಾರು ಸಭೆಗಳೂ ನಡೆದಿದ್ದವು. ಅಷ್ಟೆ. ಆಮೇಲೆ ಇನ್ನೇನೂ ಆಗಲಿಲ್ಲ.

ಈಗಂತೂ, ಪ್ರಾದೇಶಿಕ ಪಕ್ಷಗಳ ಅಂಥ ಒಗ್ಗಟ್ಟಿನ ಪ್ರಯತ್ನ ಕೂಡ ಕಾಣಿಸುತ್ತಿಲ್ಲ. ಅವು ಇನ್ನೂ ಹೆಚ್ಚು ದೂರ ಸರಿಯುತ್ತಿರುವ ಹಾಗೆ ಕಾಣಿಸುತ್ತಿದೆ. ಪರಸ್ಪರ ಬೈದಾಡಿಕೊಳ್ಳುತ್ತಲೂ ಇವೆ. ಇನ್ನು ಈ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಒಂದು ಬದ್ಧ ವೈರಿ ಅಥವಾ ತೀವ್ರ ಪ್ರತಿಸ್ಪರ್ಧಿ ಎಂಬಂತೆ ನೋಡುತ್ತಿವೆ. ಟಿಎಂಸಿ ಮತ್ತು ಎಎಪಿಯಂತಹ ಪಕ್ಷಗಳು ಕಾಂಗ್ರೆಸ್ ಜೊತೆ ಹೋಗಲು ಬಯಸುತ್ತಿಲ್ಲ. ಆದರೆ ಕಾಂಗ್ರೆಸ್‌ನ ಎಲ್ಲ ಇತಿಮಿತಿಗಳ ಹೊರತಾಗಿಯೂ ರಾಷ್ಟ್ರೀಯ ಮಟ್ಟದಲ್ಲಿ ಆ ಪಕ್ಷ ಇಲ್ಲದೆ ವಿಪಕ್ಷ ಒಗ್ಗಟ್ಟೆಂಬುದು ಸಾಧ್ಯವೇ ಇಲ್ಲವೆಂಬ ವಾಸ್ತವವನ್ನು ಅವು ಮರೆಯುತ್ತಿವೆ.

ಇನ್ನೊಂದೆಡೆ, ಪ್ರತಿಪಕ್ಷದ ನಾಯಕರೆಲ್ಲ ತನಿಖಾ ಸಂಸ್ಥೆಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ದಿಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಶಿವಸೇನೆ ಉದ್ಧವ್ ಠಾಕ್ರೆ ಪಕ್ಷದ ಸಂಜಯ್ ರಾವುತ್ ಕೂಡ ಕೆಲ ಸಮಯದ ಹಿಂದೆ ಜೈಲಿನಲ್ಲಿದ್ದರು. ಇನ್ನೂ ಹಲವರು ತನಿಖಾ ಏಜೆನ್ಸಿಗಳ ವಿಚಾರಣೆಯ ತೂಗು ಕತ್ತಿಯಡಿ ಇದ್ದಾರೆ. ಇವೆಲ್ಲದರ ಮಧ್ಯೆ, ಪ್ರತಿಪಕ್ಷಗಳು ಸಭೆ ಸೇರುವ ಮಾತು ದೂರವೇ ಉಳಿದಿದೆ. ಅದಕ್ಕಾಗಿ ಯಾರಿಗೂ ಸಮಯವೂ ಇಲ್ಲ, ಆಸಕ್ತಿಯೂ ಇದ್ದಂತಿಲ್ಲ.

2024ರ ಚುನಾವಣೆಯನ್ನು ಟಿಎಂಸಿ ಏಕಾಂಗಿಯಾಗಿ ಎದುರಿಸಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿಬಿಟ್ಟಿದ್ದಾರೆ. ಅವರಿಗಂತೂ ಕಾಂಗ್ರೆಸ್ ವಿರುದ್ಧ ವಿಚಿತ್ರ ರಾಜಕೀಯ ಅಸಮಾಧಾನವಿದೆ. ಮೊನ್ನೆ ಮುರ್ಶಿದಾಬಾದ್‌ನ ಸಾಗರ್ ದಿಘಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಘಾತಕಾರಿ ಸೋಲಿನ ಬಳಿಕ ಮಮತಾ ಸಿಟ್ಟು ಹೆಚ್ಚಾಗಿದೆ. ತೃಣಮೂಲ ಪಾಲಿಗೆ ಸುಲಭ ಸೀಟು ಎಂದೇ ಪರಿಗಣಿಸಲಾಗಿದ್ದ ಅಲ್ಲಿ ಸಿಪಿಎಂ ಬೆಂಬಲ ಪಡೆದ ಕಾಂಗ್ರೆಸ್ ಅಭ್ಯರ್ಥಿ ಅನಿರೀಕ್ಷಿತವಾಗಿ ಗೆದ್ದಿದ್ದಾರೆ. ಹಾಗಾಗಿ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳೆಲ್ಲ ಬಿಜೆಪಿ ಜೊತೆ ಸೇರಿ ಟಿಎಂಸಿ ವಿರುದ್ಧ ಸಂಚು ಹೂಡುತ್ತವೆಂದೇ ಭಾವಿಸುತ್ತಾರೆ ಮಮತಾ. ವಿಪಕ್ಷಗಳ ರಂಗವೆಂಬುದು ಒಟ್ಟಾದರೂ ಅಲ್ಲಿ ನಿರ್ಣಾಯಕ ಟಿಎಂಸಿಯೇ ಇರುವುದಿಲ್ಲ.

ಎಎಪಿ ಕೂಡ ಯಾರೊಂದಿಗೂ ಹೊಂದಾಣಿಕೆ ಬಗ್ಗೆ ಭರವಸೆ ಕೊಡುತ್ತಿಲ್ಲ. ಅದರ ಒಗ್ಗಟ್ಟಿನ ಪ್ರತಿಪಾದನೆಯೇನಿದ್ದರೂ ಪ್ರತಿಪಕ್ಷದ ನಾಯಕರೊಡನೆ ಕೈಕೈ ಹಿಡಿದು ಫೋಟೊಗೆ ಪೋಸು ಕೊಡುವಷ್ಟಕ್ಕೇ ಸೀಮಿತ. ಇನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಂತೂ ಇಂಥ ಒಗ್ಗೂಡುವಿಕೆಯ ಯಾವುದೇ ಪ್ರಸ್ತಾವದಿಂದ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ತೆಲಂಗಾಣದ ಕೆ. ಚಂದ್ರಶೇಖರ್ ರಾವ್ ಮತ್ತು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಅವರಿಬ್ಬರ ನಡೆಯಂತೂ ಗೊತ್ತೇ ಆಗುವುದಿಲ್ಲ. ಅವರು ಯಾವಾಗ ಯಾವ ಪಕ್ಷವನ್ನು ಹೊಗಳುತ್ತಾರೆ, ಯಾರನ್ನು ವಿರೋಧಿಸುತ್ತಾರೆ ಎಂದು ಊಹಿಸುವುದೇ ಕಷ್ಟ. ಇತರ ಕೆಲವರಂತೆ ಅವರೂ ಚುನಾವಣೆ ಹತ್ತಿರವಾದ ಹೊತ್ತಲ್ಲಿನ ರಾಜಕೀಯ ಆಟದಲ್ಲಿ ಆಸಕ್ತರು.
ಹೀಗೆ ಒಗ್ಗೂಡಲಾರದ ಸನ್ನಿವೇಶವಿರುವಾಗಲೇ ಬಿರುಕಿನ ಮತ್ತೂ ಒಂದು ಸುಳಿವು ಕಾಣಿಸಿದೆ. ಅದೇನೆಂದರೆ, ಸಿಸೋಡಿಯಾ ಬಂಧನ ವಿರೋಧಿಸಿ ಬರೆದ ಪತ್ರಕ್ಕೆ ಎಂಟು ವಿರೋಧ ಪಕ್ಷಗಳು ಸಹಿ ಹಾಕಿವೆ. ಇಲ್ಲಿಯೂ ಕಾಂಗ್ರೆಸ್, ಸಿಪಿಎಂ, ಜೆಡಿಯು ಪಕ್ಷಗಳು ಜೊತೆಯಾಗಿಲ್ಲ.

ಈ ಸಮಯದಲ್ಲಿ, ಕಾಂಗ್ರೆಸ್ ಅನ್ನೂ ಒಳಗೊಂಡ ಒಂದು ಪ್ರತಿರಂಗಕ್ಕೆ ಗಟ್ಟಿ ದನಿಯಲ್ಲಿ ಬದ್ಧವಾಗಬಲ್ಲ ಪಕ್ಷಗಳೆಂದರೆ, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಡಿಎಂಕೆ, ಆರ್‌ಜೆಡಿ, ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಸ್ವಲ್ಪಮಟ್ಟಿಗೆ ಕರ್ನಾಟಕದ ಜೆಡಿಎಸ್. ಆದರೆ ಹಾಗಾಗಲು ಕಾಂಗ್ರೆಸ್ ಸೀಟು ಹಂಚಿಕೆಯಲ್ಲಿ ತಾನು ನಡೆದದ್ದೇ ದಾರಿ ಎನ್ನುವ ಧೋರಣೆ ಬಿಟ್ಟುಕೊಡಬೇಕಾಗುತ್ತದೆ. ಅಷ್ಟಾದ ಮೇಲೆಯೂ ಅದೊಂದು ಗಟ್ಟಿಯಾದ ಪ್ರತಿರಂಗವಾದೀತು ಎನ್ನುವ ಹಾಗೆಯೂ ಇಲ್ಲ.

ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸೇರಿದಾಗ ಏನಾಯಿತು ಎಂಬುದನ್ನೂ ಎಲ್ಲರೂ ನೋಡಿದ್ದಾರೆ. ಹೆಸರಿಗೆ ಮಾತ್ರ ಪಕ್ಷಗಳ ನಾಯಕರು ಕೈಜೋಡಿಸಿ, ಹಿಂದಿನಿಂದ ಒಬ್ಬರ ವಿರುದ್ಧ ಒಬ್ಬರು ಕತ್ತಿ ಮಸೆಯುತ್ತಿದ್ದರೆ, ತಳಮಟ್ಟದಲ್ಲಿ ಆ ಒಗ್ಗಟ್ಟು ಕಾಣದಿದ್ದರೆ ಅದರಿಂದ ಬಿಜೆಪಿಗೇ ಲಾಭ ಎಂಬುದು ಆಗ ಸ್ಪಷ್ಟವಾಗಿ ಸಾಬೀತಾಯಿತು. ಕಾಂಗ್ರೆಸ್ ರಾಜ್ಯದಲ್ಲಿ ಧೂಳೀಪಟವಾಯಿತು. ಜೆಡಿಎಸ್‌ನಿಂದ ಸ್ವತಃ ದೇವೇಗೌಡರೇ ಸೋಲಬೇಕಾಯಿತು.
ಉತ್ತರ ಪ್ರದೇಶದಲ್ಲೂ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಂಡರೂ ಕೊನೆಗೆ ಗೆಲುವಿನ ನಗೆ ಬೀರಿದ್ದು ಬಿಜೆಪಿಯೇ.
ಮಾಯಾವತಿಯವರನ್ನು ಅಖಿಲೇಶ್ ಚಿಕ್ಕಮ್ಮ ಎಂದರೂ, ಅಖಿಲೇಶ್ ಅವರನ್ನು ಮಾಯಾವತಿ ಮಗನಂತೆ ಎಂದು ಬಣ್ಣಿಸಿದರೂ, ತಳಮಟ್ಟದಲ್ಲಿ ಕಾರ್ಯಕರ್ತರಿಗೆ ಆ ಸಂದೇಶ ತಲುಪಲಿಲ್ಲ. ಹಾಗಾಗಿ ಮೈತ್ರಿ ಮಾಡಿಕೊಳ್ಳುವುದಿದ್ದರೂ ಹೇಗೆ ಮಾಡಿಕೊಳ್ಳಬಾರದು ಎಂಬುದಕ್ಕೆ ಎಸ್‌ಪಿ-ಬಿಎಸ್‌ಪಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಗಳು ಅತ್ಯುತ್ತಮ ಉದಾಹರಣೆ.
ಬಿಜೆಪಿ ಎದುರು ಈಗ ತೀರಾ ದುರ್ಬಲವಾಗಿದ್ದರೂ ದೇಶದಲ್ಲಿ ಕಾಂಗ್ರೆಸ್ ಒಂದು ದೊಡ್ಡ ರಾಜಕೀಯ ಶಕ್ತಿ.
ಕಾಂಗ್ರೆಸ್ ವಿರೋಧಿ ನಿಲುವು ಎಂಬುದು ಕೂಡ ಜೊತೆಜೊತೆಗೇ ಇಲ್ಲಿನ ರಾಜಕಾರಣದಲ್ಲಿ ನಡೆದೇ ಬಂದಿದೆ.

ಅಂಥ ನಿಲುವು ಇತರ ಪಕ್ಷಗಳು ಒಗ್ಗೂಡಲು ಕಾರಣವಾಗಿದೆ. ಕೆಲವೊಮ್ಮೆ ಸಿಪಿಎಂ ಮತ್ತು ಬಿಜೆಪಿಯಂತಹ ಎಡ ಮತ್ತು ಬಲ ಪಕ್ಷಗಳು ಈ ಕಾರಣಕ್ಕೆ ಒಂದಾದದ್ದೂ ಇದೆ. ಇಂಥ ಒಗ್ಗೂಡುವಿಕೆಯಿಂದಾದ ಯಾವುದೇ ಕಾಂಗ್ರೆಸೇತರ ಸರಕಾರ ಕೆಲವು ತಿಂಗಳುಗಳಿಗಿಂತ ಹೆಚ್ಚು ಕಾಲ ಇರುವುದಿಲ್ಲ ಎಂಬುದೂ ನಿಜ. ಅದನ್ನು ಒಂದು ಹಂತದಲ್ಲಿ ಸುಳ್ಳು ಮಾಡಿದ್ದವರು ಮತ್ತದೇ ಸಣ್ಣಪುಟ್ಟ ಪಕ್ಷಗಳನ್ನು ಕೂಡಿಸಿಕೊಂಡೇ ಸರಕಾರ ಮಾಡಿದ್ದ ವಾಜಪೇಯಿಯವರು. ಆದರೆ ಅದಾದ ಬಳಿಕ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

2014 ಮತ್ತು 2019ರಲ್ಲಿ ನಡೆದ ರಾಜಕಾರಣ, ಬಿಜೆಪಿ ತನ್ನದೇ ಸ್ವಂತ ಬಲದಿಂದ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಮಾತ್ರವಲ್ಲದೆ, ಅದು ಕಾಂಗ್ರೆಸ್ ಸಂಘಟನೆಯನ್ನೇ ನಾಶಪಡಿಸಿಬಿಟ್ಟಿತು. ಈಗಿನ ಸನ್ನಿವೇಶದಲ್ಲಂತೂ ಸಣ್ಣಪುಟ್ಟ ಪಕ್ಷಗಳನ್ನು ಸೆಳೆಯುವುದೂ ಕಷ್ಟ. ಪ್ರತಿಯೊಂದು ಪ್ರಾದೇಶಿಕ ಪಕ್ಷವೂ ತನ್ನದೇ ಆದ ಅಜೆಂಡಾ ಮತ್ತು ಆಕಾಂಕ್ಷೆಗಳನ್ನು ಹೊಂದಿರುವಾಗ ಸಂಯುಕ್ತರಂಗದ ಮಾತು ತೀರಾ ಅಸಾಧ್ಯದ್ದೆಂದೇ ಹೇಳಲಾಗುತ್ತದೆ.

ಬಿಜೆಪಿಯ ಬಳಿಯಂತೂ ಪ್ರಚಂಡ ಬಹುಮತದ ಅಧಿಕಾರ ಹಾಗೂ ಭಾರೀ ಹಣಬಲ ಎರಡೂ ಇದೆ. ಜೊತೆಗೇ ದೇಶದ ಮಾಧ್ಯಮಗಳೂ ಅದರ ಕೈಯಲ್ಲಿಯೇ ಇವೆ. ಮತ್ತೊಂದೆಡೆ ನರೇಂದ್ರ ಮೋದಿಯವರ ಮುಖವನ್ನೂ ಅದು ಮುಂದೆ ಮಾಡುತ್ತದೆ. ಮೋದಿ ಕೂಡ ತಮ್ಮನ್ನು ತಾವು ಪ್ರಾಜೆಕ್ಟ್ ಮಾಡಿಕೊಳ್ಳುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವವರಲ್ಲ.

ವಿಪಕ್ಷಗಳಿಗೆ ಇಂಥ ಯಾವುದೇ ಅನುಕೂಲಗಳಿಲ್ಲ ಎಂಬುದು ನಿಜವೇ ಆದರೂ, ಬಿಜೆಪಿಯ ವಿರುದ್ಧ ಒಗ್ಗೂಡುವುದಕ್ಕೆ ಸಮಾನ ಮನಃಸ್ಥಿತಿಗೆ ಬರುವಂತಾಗಲು ಮತ್ತು ರಣತಂತ್ರ ರೂಪಿಸಲು ಸ್ವತಃ ಅವು ಇಚ್ಛಾಶಕ್ತಿಯನ್ನಾಗಲೀ ಸಾಮರ್ಥ್ಯವನ್ನಾಗಲೀ ಹೊಂದಿಲ್ಲ ಎಂಬುದೂ ಅಷ್ಟೇ ಸ್ಪಷ್ಟ.

ಚುನಾವಣೆ ಫಲಿತಾಂಶವನ್ನು ಊಹಿಸುವುದು ಯಾವಾಗಲೂ ಅಪಾಯಕಾರಿ. ಅಲ್ಲದೆ, 2024ರ ಚುನಾವಣೆಗೂ ಮೊದಲು ಹಲವಾರು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುವುದಿದೆ. ಆ ಅವಧಿಯಲ್ಲಿ ಬಹಳಷ್ಟು ಬದಲಾವಣೆಗಳಾಗಬಹುದು. ರಾಜಕೀಯ ಬದಲಾಗಲು ಹೆಚ್ಚು ದಿನಗಳೇನೂ ಬೇಕಾಗುವುದಿಲ್ಲ. ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಸಮಯವಿದೆ. ಆದರೆ ಸದ್ಯದ ಸ್ಥಿತಿ ನೋಡಿದರೆ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲ ಯಾವುದೇ ವಿಪಕ್ಷ ವೇದಿಕೆ ಇಲ್ಲ.

(ಆಧಾರ: thewire.in)

Similar News