ಮರೆಯಾದ ರಾಜ್ಯ ರಾಜಕಾರಣದ ಧ್ರುವತಾರೆ

Update: 2023-03-12 03:55 GMT

ಸಜ್ಜನ ಮತ್ತು ರಾಜಕಾರಣಿ ಎಂಬ ಎರಡು ಪದಗಳು ವ್ಯಾಕರಣರೀತ್ಯಾ ಪ್ರತ್ಯೇಕ ಪದಗಳೇ ಆದರೂ ಕೂಡುಪದಗಳಂತೆ ಬಳಸುವ ಸಂದರ್ಭ ಹಲವು ದಶಕಗಳ ಹಿಂದೆ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಭಾರತದ ರಾಜಕಾರಣ ಕಾಲ ಕಳೆದಂತೆಲ್ಲಾ ಪ್ರಬುದ್ಧತೆಗಿಂತಲೂ ಬಾಲಿಶತೆಯನ್ನೇ ಹೆಚ್ಚಾಗಿ ರೂಢಿಸಿಕೊಂಡು ಬಂದಿರುವುದರಿಂದ ಕಳೆದೆರಡು ದಶಕಗಳಲ್ಲಿ ಸಜ್ಜನ-ರಾಜಕಾರಣಿ ಎಂದು ಯಾರನ್ನಾದರೂ ಬಣ್ಣಿಸಿದರೆ ಹುಬ್ಬೇರಿಸುವವರ ಅಥವಾ ಟೀಕಾಸ್ತ್ರಗಳನ್ನು ಸುರಿಸುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಈ ಎರಡೂ ಪದಗಳು ಪರಸ್ಪರ ಹೊಂದಾಣಿಕೆಯಾಗುವುದೇ ಕಷ್ಟವೇನೋ ಎನ್ನುವ ಮಟ್ಟಿಗೆ ರಾಜಕೀಯ ನಾಯಕರು ತಮ್ಮ ಸಾಂವಿಧಾನಿಕ, ನೈತಿಕ, ವ್ಯಕ್ತಿಗತ ಮೌಲ್ಯ ಕಳೆದುಕೊಳ್ಳುತ್ತಲೇ ಇದ್ದಾರೆ. ಈ ಸಂತೆಯೊಳಗೂ ಚಾಮರಾಜನಗರ ಜಿಲ್ಲೆಯ ಸಂತೇಮಾರಳ್ಳಿ ವಿಧಾನಸಭಾ ಕ್ಷೇತ್ರದಿಂದ ರಾಜಕೀಯ ಪದಾರ್ಪಣೆ ಮಾಡಿ ಸಜ್ಜನಿಕೆಯನ್ನೇ ಮೈಗೂಡಿಸಿಕೊಂಡು, ಈ ಕೂಡು ಪದಗಳು ಅರ್ಥಪೂರ್ಣವಾಗುವಂತೆ ನಡೆದುಕೊಂಡ ಮಾನ್ಯ ಧ್ರುವನಾರಾಯಣ್ ಹಠಾತ್ತನೆ ಇಹಲೋಕ ತ್ಯಜಿಸಿರುವುದು ನಂಬಲಾಗದಂತಹ ಸುದ್ದಿ.

ತಮ್ಮ 62ನೆಯ ವಯಸ್ಸಿನಲ್ಲಿ ಅಂತ್ಯಪಯಣ ಬೆಳೆಸಿದ ಧ್ರುವನಾರಾಯಣ್ ಅವರನ್ನು ಸಜ್ಜನ, ಸಂಭಾವಿತ, ಸಂಯಮಿ, ಪ್ರಾಮಾಣಿಕ ಎಂದೆಲ್ಲಾ ಬಣ್ಣಿಸುವುದು ಮರಣಾನಂತರದ ಕ್ಲೀಷೆಗಳಾಗಿಬಿಡುತ್ತವೆ. ಏಕೆಂದರೆ ಈ ಪದಗಳನ್ನು ಮೀರಿದ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿಯೇ ಅವರು ನನಗೆ ಕಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ 1961ರ ಆಗಸ್ಟ್ 31ರಂದು ಜನಿಸಿದ ಧ್ರುವನಾರಾಯಣ್ 1983ರಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯ ಪ್ರವೇಶ ಮಾಡಿದರೂ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿದ್ದು 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ. ತಮ್ಮ ರಾಜಕೀಯ ಗುರು ರಾಜಶೇಖರ ಮೂರ್ತಿಯವರನ್ನು ಹಿಂಬಾಲಿಸಿ ಬಿಜೆಪಿಯನ್ನು ಪ್ರತಿನಿಧಿಸಿದ್ದ ಧ್ರುವನಾರಾಯಣ್ ಮೊದಲ ಚುನಾವಣೆಯಲ್ಲಿ ಸೋಲುಂಡರೂ 2004ರಲ್ಲಿ ಮರಳಿ ತವರು ಮನೆಗೆ ಹಿಂದಿರುಗಿ ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ ಏಕೈಕ ರಾಜಕಾರಣಿಯಾಗಿ ಪ್ರಸಿದ್ಧಿ ಪಡೆದಿದ್ದರು.

ಆನಂತರ 2008ರಲ್ಲಿ ಸಂತೇಮಾರಳ್ಳಿ ಕೊಳ್ಳೇಗಾಲ ಕ್ಷೇತ್ರದೊಡನೆ ವಿಲೀನವಾದ ಮೇಲೆ ಆ ಕ್ಷೇತ್ರದಿಂದಲೂ ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2009 ಮತ್ತು 2014ರಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಸಂಸದರಾಗಿ ಆಯ್ಕೆಯಾದ ಧ್ರುವನಾರಾಯಣ್ 2019ರಲ್ಲಿ ಪರಾಭವ ಎದುರಿಸಬೇಕಾಯಿತು. ತಮ್ಮ ಸಂಸದೀಯ ನಡೆಯಲ್ಲಿ ಅತ್ಯುತ್ತಮ ಸಂಸದೀಯ ಪಟು ಎಂದು ಹೆಸರು ಪಡೆದದ್ದೇ ಅಲ್ಲದೆ ಸಂಸತ್ ಕಲಾಪದಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಕೀರ್ತಿಗೂ ಭಾಜನರಾಗಿದ್ದ ಧ್ರುವನಾರಾಯಣ್ ತಮ್ಮ ಸೋಲಿನಿಂದ ಎದೆಗುಂದದೆ, ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳೇ ಸಾರಿ ಹೇಳುತ್ತವೆ.

ನಾಲಿಗೆ ಸೀಳಿಬಿಡುತ್ತೇನೆ, ಗುಂಡಿಟ್ಟು ಕೊಲ್ಲುತ್ತೇನೆ, ಕಾಲು ಮುರಿಯುತ್ತೇನೆ, ಕತ್ತು ಕತ್ತರಿಸುತ್ತೇನೆ ಇವೇ ಮುಂತಾದ ವಾಗ್ಬಾಣಗಳೇ ರಾಜಕೀಯ ಸಂಭಾಷಣೆಯಲ್ಲಿ ಪ್ರಧಾನವಾಗಿರುವ ವರ್ತಮಾನದ ರಾಜ್ಯ ರಾಜಕಾರಣದಲ್ಲಿ ಧ್ರುವನಾರಾಯಣ್ ಒಂದು ಧ್ರುವತಾರೆಯಂತೆ ಕಾಣಲು ಕಾರಣವೇನೆಂದರೆ ಅವರ ಮಾತು, ನಡೆ ನುಡಿಗಳಲ್ಲಿ ಕಾಣಬಹುದಾಗಿದ್ದ ಸಭ್ಯತೆ, ಸಂಯಮ, ಸಜ್ಜನಿಕೆ ಮತ್ತು ಸರಳತೆ.ಒಬ್ಬ ಜನಾನುರಾಗಿ ರಾಜಕಾರಣಿಯನ್ನು ಗುರುತಿಸಲು ಅವರು ಬಳಸುವ ಅಬ್ಬರದ ಮಾತುಗಳಿಗಿಂತಲೂ ಅವರ ಸಾರ್ವಜನಿಕ ಬದುಕಿನ ನಡೆನುಡಿಗಳು, ಹೇಳಿಕೆಗಳು ಮತ್ತು ವರ್ತನೆ ಮಾನದಂಡವಾಗಿ ಪರಿಣಮಿಸುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಧ್ರುವನಾರಾಯಣ್ ಅಪರೂಪದ ರಾಜಕಾರಣಿಯಾಗಿ ಕಾಣುತ್ತಾರೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಇತ್ತೀಚಿನ ದಿನಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಜನಸಾಮಾನ್ಯರ ನಡುವೆ ಕ್ರಿಯಾಶೀಲರಾಗಿದ್ದ ಧ್ರುವನಾರಾಯಣ್ ಅಧಿಕಾರ ರಾಜಕಾರಣದಿಂದಾಚೆಗೂ ಯೋಚಿಸಬಲ್ಲ ಕ್ಷಮತೆಯನ್ನು ಹೊಂದಿದ್ದರು ಎನ್ನುವುದನ್ನು ಅವರೊಡನೆ ಒಡನಾಟ ಹೊಂದಿರುವ ಯಾರೇ ಆದರೂ ಒಪ್ಪಬೇಕಾಗುತ್ತದೆ.

ದ್ವೇಷ ರಾಜಕಾರಣ ಮತ್ತು ರಾಜಕೀಯ ಅಸೂಯೆ ಪರಾಕಾಷ್ಠೆ ತಲುಪಿರುವ ಈ ಹೊತ್ತಿನ ರಾಜ್ಯ ರಾಜಕಾರಣದಲ್ಲಿ, ತಮ್ಮ ರಾಜಕೀಯ ವಿರೋಧಿಗಳನ್ನು ವ್ಯಕ್ತಿಗತ ಶತ್ರುಗಳಾಗಿ ಕಾಣುವ ಕಲುಷಿತ ವಾತಾವರಣದಲ್ಲಿ, ಧ್ರುವನಾರಾಯಣ್ ವಿಶಿಷ್ಟ ವ್ಯಕ್ತಿಯಾಗಿ ಕಂಡುಬರುತ್ತಾರೆ.

ನನ್ನ ಸ್ವಂತ ಅನುಭವದ ಹಿನ್ನೆಲೆಯಲ್ಲೇ ಹೇಳುವುದಾದರೆ, ಕಾಂಗ್ರೆಸ್ ಬೆಂಬಲಿಗರಲ್ಲ ಎಂದು ತಿಳಿದಿದ್ದರೂ ಅಷ್ಟೇ ಪ್ರೀತ್ಯಾದರಗಳೊಂದಿಗೆ ಚರ್ಚೆ ಮಾಡಿದ ಸಂದರ್ಭಗಳೂ ಉಂಟು. ಹಾಗೆಯೇ ಪಕ್ಷದ ಬಗ್ಗೆ ವ್ಯಕ್ತಪಡಿಸಿದ್ದ ಆಕ್ಷೇಪಗಳನ್ನು ಕ್ರೀಡಾಸ್ಫೂರ್ತಿಯೊಂದಿಗೆ ಆಲಿಸಿದ್ದೂ ಉಂಟು. ಮತ್ತೊಮ್ಮೆ ಅಜಾತಶತ್ರು ಎಂಬ ಕ್ಲೀಷೆಯನ್ನೇ ಬಳಸುವುದಾದರೂ, ಈ ಪದವನ್ನು ಅರ್ಥಪೂರ್ಣವಾಗಿಸುವಂತೆ ತಮ್ಮ ಚಟುವಟಿಕೆಗಳ ಮೂಲಕ ಧ್ರುವನಾರಾಯಣ್ ಸಾಬೀತುಪಡಿಸಿದ್ದಾರೆ.  ತಾವು ಪ್ರತಿನಿಧಿಸುತ್ತಿದ್ದ ಶೋಷಿತ ಸಮುದಾಯಗಳಿಂದಾಚೆಗೂ ಸಮಸ್ತ ಜನತೆಯ ಒಳಿತಿಗಾಗಿ ಅಹರ್ನಿಶಿ ದುಡಿಯುವ ಮೂಲಕ ಧ್ರುವನಾರಾಯಣ್ ಜನಾನುರಾಗಿಯಾಗಿದ್ದರು ಎನ್ನುವುದನ್ನು ಸಮೀಪವರ್ತಿಗಳು ಪ್ರಮಾಣೀಕರಿಸುತ್ತಾರೆ.

ಅಧಿಕಾರ ರಾಜಕಾರಣದ ಮೆಟ್ಟಿಲುಗಳನ್ನೇರುತ್ತಾ ಹೋದಂತೆಲ್ಲಾ ಜನಸಾಮಾನ್ಯರಿಂದ ದೂರವಾಗುವ ಅಥವಾ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುವ ನಾಯಕರೇ ತುಂಬಿ ತುಳುಕುತ್ತಿರುವ ರಾಜ್ಯ ರಾಜಕೀಯ ವಲಯದಲ್ಲಿ, ಧ್ರುವನಾರಾಯಣ್ ಖಚಿತವಾಗಿಯೂ ಭಿನ್ನ ನೆಲೆಯಲ್ಲಿ ನಿಲ್ಲುವವರಾಗಿದ್ದಾರೆ.

ಇನ್ನೆರಡು ತಿಂಗಳ ಅವಧಿಯಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಗಳನ್ನು ಎದುರಿಸುತ್ತಿದೆ. ಪರಾಕಾಷ್ಠೆ ತಲುಪಿರುವ ದ್ವೇಷ ರಾಜಕಾರಣದಲ್ಲಿ ವ್ಯಕ್ತಿಗತ ಪ್ರತಿಷ್ಠೆಗಳೇ ಚುನಾವಣಾ ಕಣದ ಬಂಡವಾಳ ವಾಗುತ್ತಿದ್ದು, ವೈಯುಕ್ತಿಕ ತೇಜೋವಧೆ, ಚಾರಿತ್ರ್ಯವಧೆ ಮಾಡುವ ಆಧುನಿಕೋತ್ತರ ರಾಜಕೀಯ ಕಲೆಯೇ ಪ್ರಧಾನವಾಗಿ ಕಾಣುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಮತ್ತದೇ ಸರಳ-ಸಜ್ಜನ-ಸಂಯಮಿ-ಸಭ್ಯ ರಾಜಕೀಯ ನಾಯಕರ ಶೋಧದಲ್ಲಿದೆ.

ದ್ವೇಷಭಾಷಣಗಳೇ ಚುನಾವಣೆಯ ಆಧುನಿಕ ಪರಿಭಾಷೆಯಾಗುತ್ತಿರುವ ಕಲುಷಿತ ವಾತಾವರಣದಲ್ಲಿ ರಾಜ್ಯದ ಜನತೆ ರಾಜಕೀಯ ಹಾಗೂ ನೈತಿಕ ಬದಲಾವಣೆಗಾಗಿ ಹಪಹಪಿಸುವಂತಾಗಿದೆ. ಮತ್ತೊಂದೆಡೆ ಶೋಷಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಈ ಮೂರೂ ಸಾಮಾಜಿಕಾರ್ಥಿಕ ವ್ಯಸನಗಳು ರಾಜ್ಯ ರಾಜಕಾರಣವನ್ನು ನೈತಿಕವಾಗಿ ಕುಗ್ಗಿಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನತೆ ಒಂದು ಹೊಸ ನಾಯಕತ್ವವನ್ನು, ಜನಮುಖೀ ರಾಜಕೀಯ ಪಕ್ಷವನ್ನು, ಸಮಾಜಮುಖಿ ನಾಯಕರನ್ನು ಬಯಸುತ್ತಿದೆ.

ಈ ವಿಷಮ ಗಳಿಗೆಯಲ್ಲಿ ಈಗ ನಮ್ಮನ್ನು ಅಗಲಿರುವ ಧ್ರುವನಾರಾಯಣ್ ಅವರಂತಹ ವ್ಯಕ್ತಿತ್ವ ಅತ್ಯವಶ್ಯವಾಗಿ ನಮ್ಮ ನಡುವೆ ಇರಬೇಕಿತ್ತು. ಆದರೆ ಕಾಲನ ಕರೆ ರಾಜಕೀಯ ಅನಿವಾರ್ಯತೆಗಳನ್ನು ಲೆಕ್ಕಿಸುವುದಿಲ್ಲ. ಇತ್ತೀಚೆಗಷ್ಟೇ ಜನಪರ-ಪ್ರಗತಿಪರ ಹೋರಾಟದ ಪ್ರಖರ ಧ್ವನಿ ಹಿರಿಯ ಗಾಂಧಿವಾದಿ ಪ. ಮಲ್ಲೇಶ್ ಅವರನ್ನು ಕಳೆದುಕೊಂಡಿರುವ ಮೈಸೂರಿನ ಜನತೆಗೆ ಧ್ರುವನಾರಾಯಣ್ ಅವರ ಅಗಲಿಕೆ ಮತ್ತೊಂದು ಸಹಿಸಲಾಗದ ಆಘಾತವಾಗಿ ಮೇಲೆರಗಿದೆ.

ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ ಯಾವುದೇ ರಾಜಕಾರಣಿಯನ್ನು ಪರಿಪೂರ್ಣ ನಿರ್ದೋಷಿ ಎನ್ನಲಾಗುವುದಿಲ್ಲವಾದರೂ, ಎಲ್ಲ ದೋಷಾರೋಪಗಳ ನಡುವೆಯೂ, ತಮ್ಮ ಉದಾತ್ತ ವ್ಯಕ್ತಿತ್ವದೊಂದಿಗೆ ಜನರೊಳಗೊಂದಾಗಿ ಇರುತ್ತಿದ್ದ ಧ್ರುವನಾರಾಯಣ್ ಖಚಿತವಾಗಿಯೂ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸುವ ಧ್ರುವತಾರೆಯಾಗಿ ಉಳಿಯಲಿದ್ದಾರೆ.

Similar News