ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ: ಶ್ಯಾಮಲಾ ಕುಂದರ್

*ಇಂಡಿಯನ್ ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದಿಂದ ಸಾಧಕ ಮಹಿಳೆಯರಿಗೆ ಸನ್ಮಾನ

Update: 2023-03-12 10:09 GMT

ಮಂಗಳೂರು, ಮಾ.12: ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಕಾನೂನಿನ ಅರಿವು ಅಗತ್ಯ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಅಭಿಪ್ರಾಯಿಸಿದ್ದಾರೆ.

 ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ಮಹಿಳಾ ದಿನಾಚರಣೆ ಮತ್ತು ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಮಹಿಳಾ ಸೇವಾ ಪ್ರಶಸ್ತಿ 2023 ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

    ಮಹಿಳೆಯರಿಗೆ ಸ್ವರಕ್ಷಣೆ ಇತರರಿಗೆ ನೆರವು ನೀಡಲು ಕಾನೂನಿನ ಅರಿವು ಅಗತ್ಯವಿದೆ. ತಾವು ಕೆಲಸ ಮಾಡುವ ಸ್ಥಳಗಳಲ್ಲಿ ತಮ್ಮ ಸುರಕ್ಷತೆಗಾಗಿ ಇರುವ ಕಾನೂನು ಅದರ ಬಳಕೆಯ ಬಗ್ಗೆ ಅರಿವಿರಬೇಕಾಗಿದೆ. ಮಹಿಳಾ ಸಮಾನತೆ ಪ್ರತಿ ಮನೆಯಿಂದ ಆರಂಭವಾಗಬೇಕು. ಗಂಡು ಮತ್ತು ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಮಾಡದೆ ಸಮಾನ ಕಾಳಜಿ ವಹಿಸಬೇಕು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ, ದೇಶದ ಉತ್ತಮ ನಾಗರಿಕ ರನ್ನಾಗಿ ಮಾಡುವಲ್ಲಿ ಮಹಿಳೆ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾಳೆ. ಸರಕಾರ ಸಖಿ, ಬೇಟಿ ಬಚಾವೋ  ಸೇರಿದಂತೆ ವಿವಿಧ ಮಹಿಳಾ ಸಶಕ್ತೀಕರಣ ಯೋಜನೆಗಳಿಂದ ಮಹಿಳಾ ಮತ್ತು ಪುರುಷ ರ ನಡುವಿನ ಅನುಪಾತ ಕಡಿಮೆಯಾಗಿ ಲಿಂಗ ಸಮಾನತೆ ಯತ್ತಾ ಸಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಮನಪಾ ಉಪ ಮೇಯರ್ ಪೂರ್ಣಿಮಾ ಮಾತನಾಡುತ್ತಾ ,ಮಹಿಳೆಯರು ಸಮಾಜದಲ್ಲಿ ಬೆಳೆಯುವ ಹಂತದಲ್ಲಿ ಹಲವು ಸವಾಲುಗಳನ್ನು  ಸಮರ್ಥವಾಗಿ ಎದುರಿಸ ಬೇಕಾಗಿದೆ ಎಂದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ದ.ಕ. ಶಾಖೆಯ ಸಭಾಪತಿ ಸಿ.ಎ.ಶಾಂತಾರಾಮ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ದೇಶದ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮ್, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ದೇಶದಲ್ಲಿ ಮಹಿಳಾ ಸಶಕ್ತೀಕರಣದ ಪ್ರತೀಕವಾಗಿದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರಿಗೆ ನಿತ್ಯ ಗೌರವ ದೊರೆಯುವಂತಾಗಬೇಕು ಎಂದರು.

ಸಮಾರಂಭದಲ್ಲಿ ನಾಲ್ವರು ಮಹಿಳಾ ಸಾಧಕಿಯರಾದ ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಬಿ. ಶೆಟ್ಟಿ, ದ.ಕ. ಜಿಲ್ಲಾ ಸಖಿ ಕೇಂದ್ರದ ಮುಖ್ಯಸ್ಥೆ ಪ್ರಿಯಾ ರಾಜ್ ಮೋಹನ್, ಅಂಚೆ ಇಲಾಖೆಯ ಸಿಬ್ಬಂದಿ ಕಸ್ತೂರಿ ಕೊಂದಲ್ ಕಾನ, ಯುವ ರೆಡ್ ಕ್ರಾಸ್ ಕಾರ್ಯಕರ್ತೆ ಎಂ.ಸಾಕ್ಷಿ ಕಿಣಿಯವರನ್ನು ಸನ್ಮಾನಿಸಲಾಯಿತು.

  ಮಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ ಶುಭ ಹಾರೈಸಿದರು.

ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಖಜಾಂಚಿ ಮೋಹನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಘಟಕದ ಮಹಿಳಾ ಮತ್ತು ಮಕ್ಕಳ ಸುರಕ್ಷ ಉಪಸಮಿತಿಯ ನಿರ್ದೇಶಕಿ ಡಾ.ಸುಮನಾ ಬೋಳೂರು ಸ್ವಾಗತಿಸಿದರು.

ಇಂಡಿಯನ್ ರೆಡ್ ಕ್ರಾಸ್ ಆಡಳಿತ ಸಮಿತಿಯ ಸದಸ್ಯ ಪಿ.ಬಿ.ಹರೀಶ್ ರೈ ವಂದಿಸಿದರು. ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Similar News